Bengaluru Rains: ಮಳೆಯ ಅಬ್ಬರಕ್ಕೆ ನಲುಗಿದ ಬೆಂಗಳೂರು : ಜನರ ಪರದಾಟ

Bengaluru Rain Update : ಬೆಳಗ್ಗೆಯೇ ಮಳೆ ಬಂದ ಪರಿಣಾಮ ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ವಾಹನ ಸವಾರರು ಪರದಾಡುವಂತಾಯಿತು. ಮಕ್ಕಳು ಮತ್ತು ಉದ್ಯೋಗಿಗಳು ತುಂತುರು ಮಳೆಯಲ್ಲಿಯೇ ನೆನೆದುಕೊಂಡು ಶಾಲೆಗಳಿಗೆ ಹಾಗೂ ಕೆಲಸಕ್ಕೆ ತೆರಳಬೇಕಾಯಿತು.

ಬೆಂಗಳೂರು : ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ಮುಂಜಾನೆಯಿಂದ ಸುರಿದ ಮಳೆಗೆ ಸಿಲಿಕಾನ ಸಿಟಿ ಜನರು ತತ್ತರಿಸಿದ್ದಾರೆ.

ನಗರದ ಹಲವೆಡೆ ಮರಗಳು ಧರೆಗುಳಿದಿದ್ದು, ಮತ್ತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿವೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆಯೇ ಮಳೆ ಬಂದ ಪರಿಣಾಮ ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ವಾಹನ ಸವಾರರು ಪರದಾಡುವಂತಾಯಿತು. ಮಕ್ಕಳು ಮತ್ತು ಉದ್ಯೋಗಿಗಳು ತುಂತುರು ಮಳೆಯಲ್ಲಿಯೇ ನೆನೆದುಕೊಂಡು ಶಾಲೆಗಳಿಗೆ ಹಾಗೂ ಕೆಲಸಕ್ಕೆ ತೆರಳಬೇಕಾಯಿತು.

ಮಳೆ ಪರಿಣಾಮ ಕೆಲಸಕ್ಕೆಂದು ತೆರಳುತ್ತಿದ್ದ ವಾಹನ ಸವಾರರು ನೆನೆದುಕೊಂಡೇ ಹೋಗುತ್ತಿದ್ದು, ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಉತ್ತರಹಳ್ಳಿ ಮುಖ್ಯ ರಸ್ತೆ, ಮೈಸೂರು ರಸ್ತೆ, ಗೊರಗುಂಟೆ ಪಾಳ್ಯ, ಮೆಜೆಸ್ಟಿಕ್, ಕಾಟನ್ ಪೇಟೆ ಮುಖ್ಯ ರಸ್ತೆ, ಕೆ.ಆರ್.ಪೇಟೆ, ಶಾಂತಿನಗರ ಡಬಲ್ ರೋಡ್ ಸೇರಿದಂತೆ ಹಲವು ಕಡೆ ವಾಹನ ಸವಾರರು ಟ್ರಾಫಿಕ್ ಜಾಮ್​ನಿಂದ ಹೈರಾಣಾಗಿದ್ದರು. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

https://twitter.com/Bnglrweatherman/status/1846013323608736256

ಮೆಜೆಸ್ಟಿಕ್ ಬಳಿಯ ಓಕಳಿಪುರ ಅಂಡರ್ ಪಾಸ್ ನಲ್ಲಿ ನೀರು ನಿಂತುಕೊಂಡಿದ್ದು ಎರಡು ವಾಹನಗಳು ಕೆಟ್ಟು ನಿಂತಿದೆ. ಇನ್ನು ಮಳೆಯಿಂದಾಗಿ ಹೆಚ್ ಎಂಟಿ ಲೇಔಟ್​​ನಲ್ಲಿ ಬೃಹದಾಕಾರದ ಮರ ಧರೆಗುರುಳಿದಿದೆ.

ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್​, ಕಾರ್ಪೊರೇಷನ್​ ಸರ್ಕಲ್​, ಶಾಂತಿನಗರ, ಲಾಲ್ ಬಾಗ್, ಜಯನಗರ, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಶ್ರೀನಗರ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ, ಬನಶಂಕರಿ, ಪದ್ಮನಾಭನಗರ, ತ್ಯಾಗರಾಜನಗರ, ಕೋರಮಂಗಲ, ರಿಚ್​ಮಂಡ್​ ಸರ್ಕಲ್​, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಆರ್.ಆರ್.ನಗರ, ಉತ್ತರಹಳ್ಳಿ, ದಾಸರಹಳ್ಳಿ, ರಾಜಾಜಿನಗರ, ವಿಧಾನಸೌಧ, ಕಬ್ಬನ್ ಪಾರ್ಕ್, ಶಿವಾಜಿನಗರ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ.

ರಾಜ್ಯದಲ್ಲಿ ಇನ್ನೂ ಮುಂದಿನ 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಆಗಲಿದೆ ಎನ್ನಲಾಗಿದೆ.

Author

error: