ನವದೆಹಲಿ : ಭಾರತದಲ್ಲಿ ಚುನಾವಣೆ ಬಂದಾಗ ಪಾಕಿಸ್ಥಾನ ಬೇಕೇ ಬೇಕು. ಪಾಕಿಸ್ಥಾನ ಇಲ್ಲದಿದ್ದರೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸುತ್ತಲೇ ಇರಲಿಲ್ಲ. ಇಲ್ಲ ಆ ಪಕ್ಷದ ವಿಸರ್ಜನೆ ಆಗುತ್ತಿತ್ತೇನೋ..!
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಾಕಿಸ್ಥಾನದ ಪ್ರಸ್ತಾಪ ಆಗಿಲ್ಲ ಯಾಕೆ ಎಂಬ ಪ್ರಶ್ನೆ ಕಾಡುತ್ತಿರುವಾಗಲೇ ಭಾರತೀಯ ಚುನಾವಣಾ ಆಖಾಡಾವನ್ನು ಪಾಕಿಸ್ಥಾನ ಪ್ರವೇಶಿಸಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಹೆಸರು ಎಲ್ಲರಿಗೂ ಗೊತ್ತು. ಇವರು ಬಹಳ ವರ್ಷ ಕಾಂಗ್ರೆಸ್ ನಲ್ಲಿ ಇದ್ದವರು. ಇವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇದ್ದವು. ತಕ್ಷಣ ಇವರು ಬಿಜೆಪಿ ಎಂಬ ವಾಷಿಂಗ್ ಮಿಷನ್ ಪ್ರವೇಶಿಸಿ ಪವಿತ್ರಾತ್ಮರಾದರು. ಬಿಜೆಪಿ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿತು.
ಈಗ ಅವರು ಕಾಂಗ್ರೆಸ್ ಪಕ್ಷದ ಕಟು ಟೀಕಾಕಾರರಾಗಿದ್ದಾರೆ.
ನಮ್ಮ ಬಸನಗೌಡ ಪಾಟೀಲರ ತದ್ರೂಪದಂತೆ ಅವರು ಮಾತನಾಡುತ್ತಾರೆ. ಅವರ ಪ್ರಕಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಭಾರತಕ್ಕಿಂತ ಪಾಕಿಸ್ಥಾನಕ್ಕೆ ಹೆಚ್ಚು ಸೂಕ್ತವಾಗಿದೆ. ಬಸನಗೌಡ ಪಾಟೀಲರು ಸಹ ದಿನೇಶ್ ಗುಂಡೂರಾವ್ ಅವರ ಕುಟುಂಬ ಅರ್ಧ ಪಾಕಿಸ್ಥಾನ ಎಂದು ವಿವಾದವನ್ನು ಸೃಷ್ಟಿಸಿದ್ದರು.
ಒಟ್ಟಿನಲ್ಲಿ ಬಿಜೆಪಿ ನಾಯಕರಿಗೆ ಪಾಕಿಸ್ಥಾನ ಬೇಕು. ಅದೇ ಅವರಿಗೆ ಮತ ಪಡೆಯುವ ಸಾಧನ. ಅಸ್ತ್ರ. ಇಲ್ಲದಿದ್ದರೆ ಅವರ ಸ್ಥಿತಿ ಗೋವಿಂದ..!







