ಸತ್ಯ ಮರೆಮಾಚಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಸರ್ಕಾರ: ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ

ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಾವನ್ನು ಮುಚ್ಚಿಡಲು ಯತ್ನಿಸುತ್ತಿದೆ. ಸ್ಥಳೀಯ ಜನರು ಕೂಡ ಇದನ್ನೇ ಹೇಳುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ರೂ 25 ಲಕ್ಷ ಪರಿಹಾರ ನೀಡಬೇಕು

ತುಮಕೂರು : ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಸಾವಿಗೀಡಾದ ಘಟನೆಯಲ್ಲಿ ಸತ್ಯವನ್ನು ಮರೆಮಾಚಲು ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿದೆ. ಜನರಿಂದ ತಪ್ಪಾಗಿ ಸಹಿ ಹಾಕಿಸಲಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಕಲುಷಿತ ನೀರು ಸೇವಿಸಿ ಆರು ಮಂದಿ ಮೃತರಾದ ಹಾಗೂ ಹಲವರು ಅಸ್ವಸ್ಥರಾದ ಕುರಿತು ನಿಜಾಂಶ ತಿಳಿಯಲು ಆರ್.ಅಶೋಕ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾವ ಯುಗದಲ್ಲಿದ್ದೇವೆಂದು ಅರ್ಥವಾಗುತ್ತಿಲ್ಲ. ಐಟಿ, ಬಿಟಿ ಎಂದು ಮಾತನಾಡಿದರೂ ಸರ್ಕಾರದಿಂದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಕಲುಷಿತ ನೀರು ಕುಡಿದು ಮುನ್ನೂರಕ್ಕೂ ಅಧಿಕ ಜನರು ಅನಾರೋಗ್ಯಕ್ಕೀಡಾಗಿ ಆರು ಜನರು ಸಾವಿಗೀಡಾಗಿದ್ದಾರೆ. ಆದರೆ ಅಧಿಕಾರಿಗಳು ಮೂರು ಜನರು ಮೂತ್ರಪಿಂಡದ ಸಮಸ್ಯೆಯಿಂದ ಸತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ಜನರಿಂದ ತಪ್ಪಾಗಿ ಸಹಿ ಹಾಕಿಸಿಕೊಂಡಿದ್ದಾರೆ. ಓರ್ವ ವ್ಯಕ್ತಿ ಕುಡಿತದಿಂದ ಸತ್ತಿದ್ದು ಎಂದು ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ಆ ವ್ಯಕ್ತಿಗೆ ಯಾವುದೇ ದುರಭ್ಯಾಸ ಇರಲಿಲ್ಲವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಾವನ್ನು ಮುಚ್ಚಿಡಲು ಯತ್ನಿಸುತ್ತಿದೆ. ಸ್ಥಳೀಯ ಜನರು ಕೂಡ ಇದನ್ನೇ ಹೇಳುತ್ತಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ರೂ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಹಾಗೂ ಸರ್ಕಾರ ಶುದ್ಧ ಕುಡಿಯುವ ನೀರನ್ನು ಜನರಿಗೆ ಪೂರೈಸಬೇಕಿತ್ತು. ಈ ಘಟನೆಗೆ ಸರ್ಕಾರವೇ ಕಾರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಇದೇ ಘಟನೆ ನಡೆದಾಗ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಈಗ ಯಾರ ತಲೆದಂಡ ಎಂದು ನೋಡಬೇಕಿದೆ. ಈ ಕುರಿತು ಸದನದಲ್ಲೂ ಮಾತನಾಡುತ್ತೇನೆ ಎಂದು ತಿಳಿಸಿದರು.

Author

error: