ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿ ರಾಷ್ಟ್ರಪತಿ ಆಡಳಿತ ಹೇರಲು ಹುನ್ನಾರ ನಡೆಸುತ್ತಿದೆಯೆ ? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಕಾರ ಈ ಪ್ರಶ್ನೆಗೆ ಉತ್ತರ ಹೌದು.
ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾವು ಕಠಿಣ ಕಾನೂನು ಕ್ರಮ ಕೈಗೊಂಡಿದ್ದೇವೆ, ಜೊತೆಗೆ ಇದು ವೈಯಕ್ತಿಕ ಪ್ರಕರಣ. ಆದರೂ ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್. ಆಶೋಕ್ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಇರುವಷ್ಟು ಉತ್ತಮವಾದ ಕಾನೂನು ವ್ಯವಸ್ಥೆ ಬೇರೆ ಎಲ್ಲೂ ಇಲ್ಲ ಎಂದು ಶಿವಕುಮಾರ್ ಹೇಳಿದರು.
ಕರ್ನಾಟಕ ಬಿಹಾರ ಆಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಆರೋಪಕ್ಕೆ ಉತ್ತರ ನೀಡಿದ ಅವರು ಎಲ್ಲರ ಕಾಲದಲ್ಲೂ ಒಮ್ಮೊಮ್ಮೆ ಇಂತಹ ಘಟನೆ ನಡೆಯುತ್ತವೆ. ಇದಾದ ತಕ್ಷಣ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದ ಗೆಟ್ಟಿದೆ ಎಂದೇನೂ ಅಲ್ಲ ಎಂದು ಅವರು ಹೇಳಿದರು.
