ಕಾರವಾರ : ಕರ್ನಾಟಕದಲ್ಲಿ ಉತ್ತರ ಕನ್ನಡ ವಿಶಿಷ್ಟ ಲೋಕಸಭಾ ಕ್ಷೇತ್ರ. ಇಲ್ಲಿ ಮಲೆನಾಡು ಇದೆ. ಕರಾವಳಿ ಇದೆ, ಅರೆ ಮಲೆನಾಡು ಮತ್ತು ಬಯಲು ಸೀಮೆ ಇದೆ. ಉತ್ತರ ಕನ್ನಡದ ತಾಲೂಕುಗಳ ಜೊತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ತಾಲೂಕುಗಳು ಈ ಲೋಕಸಭಾ ಕ್ಷೇತ್ರಕ್ಕೆ ಸೇರಿವೆ.
ಕಳೆದ ಆರು ಚುನಾವಣೆಗಳಲ್ಲಿ ಗೆದ್ದ ಅನಂತಕುಮಾರ ಹೆಗಡೆ ಈ ಕ್ಷೇತ್ರವನ್ನು ಬಿಜೆಪಿಯ ಕ್ಷೇತ್ರವನ್ನಾಗಿ ಮಾಡಿದ್ದರು. ಅದಕ್ಕೂ ಮೊದಲು ಇದು ಕಾಂಗ್ರೆಸ್ ಕ್ಷೇತ್ರ. ಕಾಂಗ್ರೆಸ್ ಚಿನ್ಹೆಯ ಮೇಲೆ ಯಾರು ಬೇಕಾದರೂ ಇಲ್ಲಿ ನಿಂತು ಗೆಲ್ಲಬಹುದಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಆಂತರಿಕ ಗುಂಪುಗಾರಿಕೆ ಪಕ್ಷವನ್ನು ದುರ್ಬಲಗೊಳಿಸಿತು. ಈ ನಡುವೆ ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದದ ನಂತರ ಹಿಂದುತ್ವ ಪ್ರವೇಶ ಪಡೆಯಿತು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಇಡೀ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು.ಅಂಕೋಲಾ ಮತ್ತು ಸಿದ್ದಾಪುರ ತಾಲೂಕುಗಳನ್ನು ಕರ್ನಟಕದ ಬಾರ್ಡೋಲಿ ಎಂದು ಕರೆಯಲಾಗುತ್ತಿತ್ತು. ಜೊತೆಗೆ ಸಾಹಿತ್ಯ, ಸಂಸ್ಕೃತಿ, ನಾಟಕ, ಯಕ್ಷಗಾನ, ಹಿಂದೂಸ್ತಾನಿ ಗಾಯನ ಮೊದಲಾದ ಕ್ಷೇತ್ರಗಳಲ್ಲಿ ಉತ್ತರ ಕನ್ನಡದ ಜೊತೆ ಪೈಪೋಟಿ ನಡೆಸುವವರೇ ಇರಲಿಲ್ಲ.
ಆದರೆ ಅನಂತಕುಮಾರ್ ಹೆಗಡೆ ಮಾದರಿಯ ಹಿಂದುತ್ವದ ರಾಜಕಾರಣ ಜಿಲ್ಲೆಯನ್ನು ಪ್ರವೇಶಿಸಿದ ಮೇಲೆ ಪರಿಸ್ಥಿತಿ ಬದಲಾಯಿತು. ಎಲ್ಲವನ್ನೂ ಕೋಮು ಮತ್ತು ಜಾತಿಯ ಕಣ್ಣಿನಿಂದ ನೋದುವ ವಾತಾವರಣ ನಿರ್ಮಾಣವಾಯಿತು. ಉತ್ತರ ಕನ್ನಡಲ್ಲಿ ಅಭಿವೃದ್ಧಿ ಪರ ರಾಜಕಾರಣ ಎಂದೂ ಇರಲಿಲ್ಲ. ಆದರೆ ಕೋಮುವಾದಿ ರಾಜಕಾರಣವೂ ಇರಲಿಲ್ಲ. ಹಿಂದುತ್ವದ ರಾಜಕಾರಣ ಎಲ್ಲೆಡೆ ಹರಡಿದ ಮೇಲೆಯೂ ಅಭಿವೃದ್ಧಿಪರ ರಾಜಕಾರಣ ಬರಲಿಲ್ಲ. ಬದಲಿಗೆ ಕೋಮುವಾದಿ ರಾಜಕಾರಣ. ದೇವರ ರಾಜಕಾರಣ. ರಾಮನ ರಾಜಕಾರಣ. ಇದರ ಅಲೆಯ ಮೇಲೆ ತೇಲುತ್ತ ಅನಂತಕುಮಾರ್ ಹೆಗಡೆ ಅವರು ದೆಹಲಿ ತಲುಪುತ್ತಿದ್ದರು.
ಅವರು ಉಗ್ರ ಹಿಂದುತ್ವವಾದಿಯಂತೆ ನಟಿಸುತ್ತಿದ್ದರು. ಚುನಾವಣೆ ಬರುತ್ತಿದ್ದಂತೆ ಅವರು ಉಗ್ರ ಹಿಂದುತ್ವ ವಾದದ ಜೊತೆಗೆ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದರು. ಮೀಸಲಾತಿಯನ್ನು ವಿರೋಧಿಸುತ್ತಿದ್ದರು. ವೈಚಾರಿಕ ಮನಸ್ಸುಗಳನ್ನು ವಿರೋಧಿಸಿ ಅವರೆಲ್ಲ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿದ್ದರು.
ಒಮ್ಮೆ ಕೇಂದ್ರ ಸಚಿವರಾದರೂ ಅವರು ಕುಶಲತೆಯನ್ನು ಪ್ರದರ್ಶಿಸಲಿಲ್ಲ. ಪಕ್ಷವನ್ನು ಕಟ್ಟಲಿಲ್ಲ. ಜೊತೆಗೆ ಬಿಜೆಪಿ ವರಿಷ್ಟರಿಗೆ ಇವರ ಉಗ್ರ ಹಿಂದುತ್ವವಾದವನ್ನು ಸಹಿಸುವುದು ಸಾಧ್ಯವೇ ಇಲ್ಲ ಎಂದು ಅನ್ನಿಸತೊಡಗಿತು. ಪ್ರಜ್ನಾ ಸಿಂಗ್ ಠಾಕೂರ್ ಅವರಂತೆ ಇವರು ಟಿಕೆಟ್ ಕಳೆದುಕೊಂಡರು. ಇವರ ಬದಲಿಗೆ ಬಿಜೆಪಿ ಅಭ್ಯರ್ಥಿಯಾದವರು ವಿಶ್ವೇಶ್ವರ ಹೆಗಡೆ ಕಾಗೇರಿ. ಇವರ ಸಮಸ್ಯೆ ಎಂದರೆ ಹಿಂದುತ್ವದ ಪ್ರಚಾರವನ್ನು ಮೆಲು ಧ್ವನಿಯಲ್ಲಿ ಮಾಡುತ್ತಾರೆ. ಬೆಂಕಿ ಹಚ್ಚುವ ವಾಕ್ಪಟುತ್ವ ಇಲ್ಲ. ಇವರು 6 ಬಾರಿ ಶಾಸಕರಾದರೂ ಒಕೆ ಮಟ್ಟದಿಂದ ಬೇಕು ಮಟ್ಟಕ್ಕೆ ಏರಿದವರಲ್ಲ. ಈಗಲೂ ಬಿಜೆಪಿ ಮೋದಿ ಹೆಸರಿನಿಂದ ಗೆಲ್ಲುತ್ತೇನೆ ಎಂದು ಅವರು ನಂಬಿಕೊಂಡಿದ್ದಾರೆ. ಸ್ವಂತ ಶಕ್ತಿಯ ಮೇಲೆ ಗೆಲ್ಲುವ ಭರವಸೆ ಅವರಿಗೂ ಇಲ್ಲ.
ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲುವ ಬಗ್ಗೆ ಆಲೋಚಿಸುವಂತಾಗಿದೆ. ಜನರಿಗೂ ಬದಲಾವಣೆ ಬೇಕು ಅನಿಸತೊಡಗಿದೆ. ಜೊತೆಗೆ ಇಲ್ಲಿನ ಜಾತಿ ಸಮೀಕರಣ ಸರಿಯಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆಲ್ಲುವುದು ಕಷ್ಟವಲ್ಲ.
ಅನಂತಕುಮಾರ್ ಹೆಗಡೆ ಪ್ರಬಲ ಆರ್ಎಸ್ಎಸ್ ಬೆಂಬಲದೊಂದಿಗೆ 27 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರಿಂದ ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಫೈರ್ಬ್ರಾಂಡ್ ಹಿಂದುತ್ವದ ನಾಯಕ ಹೆಗಡೆ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಆನಂದ್ ಅಸ್ನೋಟಿಕರ್ ವಿರುದ್ಧ 4,79,649 ಮತಗಳ ಅಂತರದಿಂದ ಗೆದ್ದಿದ್ದರು.
ಹವ್ಯಕ ಬ್ರಾಹ್ಮಣ ಕಾಗೇರಿ ಅವರು ತಮ್ಮ ಸಮುದಾಯದ ಬೆಂಬಲವನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಹಿಂದುಳಿದ ಸಮುದಾಯಗಳು, ಎಸ್ಸಿ ಮತ್ತು ಎಸ್ಟಿ ಸಮುದಾಯದ ಮತಗಳಿವೆ. ನಾಮಧಾರಿಗಳು ಮತ್ತು ಬ್ರಾಹ್ಮಣರು ಜಿಲ್ಲೆಯಾದ್ಯಂತ ಹರಡಿದ್ದಾರೆ, ಸಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ.
ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಅವರ ಪುತ್ರ ಚುನಾವಣಾ ಕಣದಿಂದ ದೂರ ಉಳಿದಿರುವುದು ಕಾಂಗ್ರೆಸ್ ಗೆಲುವಿಗೆ ಸಹಾಯವಾಗುವ ಸಾಧ್ಯತೆಯಿದೆ. ಹೆಗಡೆ ಅವರಿಗೆ ಟಿಕೆಟ್ ಸಿಗದೆ ಬೇಸರಗೊಂಡಿರುವುದು ಕಾಗೇರಿ ಅವರಿಗೆ ಮತ್ತಷ್ಟು ಕಠಿಣವಾಗಲಿದೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ, ಕುಣಬಿಗಳು ಮತ್ತು ಹಾಲಕ್ಕಿ ಒಕ್ಕಲಿಗರಿಗೆ ಎಸ್ಟಿ ಟ್ಯಾಗ್ ನಿರಾಕರಣೆ, ಪ್ರಾಜೆಕ್ಟ್ ಸೀ ಬರ್ಡ್ ಮತ್ತು ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಪರಿಹಾರ ನೀಡಿರುವುದು ಮತ್ತು ಗ್ರೀನ್ ಫೀಲ್ಡ್ ನಿರ್ಮಾಣಕ್ಕೆ ಭೂ ಸ್ವಾಧೀನದಂತಹ ಸಮಸ್ಯೆಗಳು ಎರಡೂ ರಾಜಕೀಯ ಪಕ್ಷಗಳಿಗೆ ಹೊರೆಯಾಗಲಿವೆ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.






