ಬಿಸಿಲಿನ ನಡುವೆ ತಂಪು : ಸುರಿದ ಮಳೆ, ಈ ವಾರ ಮತ್ತೆ ಸುರಿಯಬಹುದು ಇಳೆ ತಂಪಾಗಬಹುದು

Karnataka Rains; ಬೆಳಗಾವಿ, ವಿಜಯಪುರ, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಬೆಂಗಳೂರು : ಕಳೆದೊಂದು ತಿಂಗಳಿನಿಂದ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ರಾಜ್ಯದ ಹಲವು ಜಿಲ್ಲೆಗಳ ಜನತೆ ಕೊಂಚ ತಂಪಿನಿಂದ ನಿಟ್ಟುಸಿರು ಬಿಡುವಂತಾಯಿತು. ಬಿಸಿಲ ಝಳಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ನಿನ್ನೆ ಶುಕ್ರವಾರ ಮಳೆಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಭೀಕರ ಸಿಡಿಲಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬುಧವಾರ ರಾತ್ರಿಯಿಂದೀಚೆಗೆ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ಬಲಿಯಾದವರು ಒಟ್ಟು ನಾಲ್ವರು, ಬೆಳಗಾವಿ, ವಿಜಯಪುರ, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಸವಳಿದಿದ್ದ ಜನ, ಜಾನುವಾರುಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ.

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ಇನ್ನು ಚಿಕ್ಕಮಗಳೂರಿನ ಶೃಂಗೇರಿ ಮತ್ತು ನರಸಿಂಹರಾಜಪುರದ ಕೆಲವೆಡೆಯೂ ಒಂದೆರಡು ಗಂಟೆಗಳ ಕಾಲ ಉತ್ತಮ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಭಾಗದ ಶಿರಾಡಿಘಾಟ್‌ ಸುತ್ತಮುತ್ತ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಕೆಲಕಾಲ ಸಿಡಿಲು-ಗುಡುಗು ಸಹಿತ ಉತ್ತಮ ಮಳೆ ಬಿದ್ದಿದೆ.

ಮಳೆ ಅಬ್ಬರಕ್ಕೆ 10 ವಿದ್ಯುತ್​ ಕಂಬಗಳು ಧರೆಗುರುಳಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳಿಕಟ್ಟಿಯಲ್ಲಿ ನಡೆದಿದೆ. ಶಿರಸಿ ಕಾವಲವಾಡ ಮಧ್ಯೆ ಇರುವ ಮೇನ್​ ವಿದ್ಯುತ್​ ಲೈನ್​ ಕಂಬಗಳು ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

.

Author

error: