ಮುಂಬೈ : ನಮ್ಮ ರಾಯಲ್ ಚಾಲೇಂಜರ್ಸ್ ತಂಡ ನೋಡುವುದಕ್ಕೆ ಚೆನ್ನಾಗಿದೆ. ಆದರೆ ಅದು ಈಗ ಯಾರಿಗೂ ಸವಾಲನ್ನೇ ಒಡ್ಡುವುದಿಲ್ಲ. ನಿನ್ನೆ ಕೂಡ ಅಷ್ಟೇ. ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಗಳ ಹೀನಾಯ ಸೋಲು. ನಮ್ಮ ತಂಡಕ್ಕೆ ಹೋರಾಟದ ಕಿಚ್ಚೆ ಇಲ್ಲ. ಎಲ್ಲರೂ ಘಟಾನುಘಟಿ ಆಟಗಾರರು ಆದರೆ ಯಾವುದಕ್ಕೂ ಪ್ರಯೋಜನ ಇಲ್ಲ.
ಇದು ಕೆಟ್ಟ ಸ್ಕೋರ್ ಆಗಿರಲಿಲ್ಲ. ದಿನೇಶ್ ಕಾರ್ತಿಕ್, ರಜತ್ ಪಾಟೀದಾರ್ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಆಟ ಕಣ್ಣಿಗೆ ಹಬ್ಬ. ಹಾಗೆ ಅವರು ಗಳಿಸಿದ 196 ರನ್ ಗೆಲ್ಲಲು ಸಾಕಾಗಿತ್ತು. ದಿನೇಶ್ ಕಾರ್ತಿಕ್ ಅವರ 53, ರಜತ್ ಪಾಟಿದಾರ್ ಅವರ್ 50 ಮತ್ತು ನಾಯಕ ಡುಪ್ಲೇಸಿಸ್ ಅವರ 61 ರನ್. ಆದರೆ ಆರ್ ಸಿ ಬಿ ಯ ಬೌಲರ್ ಗಳು ಕೈಹಿಡಿಯಲಿಲ್ಲ. ಜೊತೆಗೆ ರಾತ್ರಿ ಬಿದ್ದ ಹಿಮ ಕೂಡ ಕರಾರುವಾಕ್ಕಾಗಿ ಬೌಲಿಂಗ್ ಮಾಡುವುದಕ್ಕೆ ಅಡ್ದಿಯಾಯಿತು.
ಗೆಲುವಿಗೆ 197 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ, ಸೂರ್ಯಕುಮಾರ್ ಹಾಗೂ ಇಶಾನ್ ಕಿಶನ್ ಅವರ ಪ್ರಚಂಡ ಬ್ಯಾಟಿಂಗ್ ನೆರವಿನಿಂದ 15.3 ಓವರ್ಗಳಲ್ಲಿ ಅಂದರೆ ಬರೋಬ್ಬರಿ 27 ಎಸೆತಗಳು ಬಾಕಿ ಇರುವಂತೆಯೇ 199 ರನ್ ಬಾರಿಸಿ ವಿಜಯ ಪತಾಕೆ ಹಾರಿಸಿತು. ಇದರೊಂದಿಗೆ ಆರ್ ಸಿಬಿ ಐದನೇ ಬಾರಿ ಸೋಲು ಒಪ್ಪಿಕೊಂಡಿತು.
ಮುಂಬೈ ಪರ ಇಶಾನ್ ಕಿಶನ್ ಗರಿಷ್ಠ 69 ರನ್ ಗಳಿಸಿದರು. ಕಿಶನ್ ಅವರ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು. ಸೂರ್ಯಕುಮಾರ್ ಯಾದವ್ ಕೂಡ 19 ಎಸೆತಗಳಲ್ಲಿ 52 ರನ್ ಗಳಿಸಿದರು. ರೋಹಿತ್ ಶರ್ಮಾ 38 ರನ್ ಕೊಡುಗೆ ನೀಡಿದರೆ, ನಾಯಕ ಹಾರ್ದಿಕ್ ಪಾಂಡ್ಯ ಔಟಾಗದೆ 21 ಮತ್ತು ತಿಲಕ್ ವರ್ಮಾ 6 ಎಸೆತಗಳಲ್ಲಿ 16 ರನ್ ಗಳಿಸಿದರು.
