37ರಲ್ಲೇ ಹೃದಯಾಘಾತ! ಯುವ ಮಾಧ್ಯಮ ವೃತ್ತಿಪರರನ್ನು ನುಂಗುತ್ತಿರುವ ಒತ್ತಡ?

ನಟರು, ಪತ್ರಕರ್ತರು, ನಿರ್ದೇಶಕರು, ಚಿತ್ರಕತೆ ಬರೆಯುವವರು, ಕ್ಯಾಮರಾಮ್ಯಾನ್, ಸಂಕಲನಕಾರರು…
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ಯುವ ವೃತ್ತಿಪರರ ಅಕಾಲಿಕ ಸಾವುಗಳು ಹೆಚ್ಚಾಗುತ್ತಿರುವುದು ಆತಂಕಕಾರಿ.

ಈಗ ‘ಪಾರು’ ಧಾರಾವಾಹಿಯ ಸ್ಕ್ರಿಪ್ಟ್ ರೈಟರ್ ಟಿ.ಜಿ. ನಂದೀಶ್ 37ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಮತ್ತೊಮ್ಮೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸಿದೆ.37 ವರ್ಷ ಅಂದರೆ ಸಾಯುವ ವಯಸ್ಸೇ? ಒಮ್ಮೆ ಹೃದಯಾಘಾತ ಎಂದರೆ 60ರ ನಂತರದ ಸಮಸ್ಯೆ ಎಂದು ಭಾವಿಸಲಾಗುತ್ತಿತ್ತು. ಆದರೆ ಇಂದು 30, 35, 40 ವರ್ಷಗಳೊಳಗೆ ಯುವಕರು ಹಠಾತ್ ಕುಸಿದು ಬೀಳುತ್ತಿರುವ ಘಟನೆಗಳು ಸಾಮಾನ್ಯ ಸುದ್ದಿಗಳಾಗುತ್ತಿವೆ.

ಆದರೆ ಈ ಸಾವುಗಳು ಕೇವಲ ವೈದ್ಯಕೀಯ ಸಮಸ್ಯೆಯೇ? ಅಥವಾ ನಮ್ಮ ಜೀವನ ಶೈಲಿಯ ಮೌನ ಎಚ್ಚರಿಕೆಯೇ? ಮಾಧ್ಯಮ ಕ್ಷೇತ್ರ ಹೊರಗಿನಿಂದ ನೋಡಲು ಬಹಳ ಗ್ಲಾಮರಸ್ ಆಗಿ ಕಾಣಬಹುದು. ಬೆಳಕು, ಹೆಸರು, ಗುರುತು, ಸೃಜನಶೀಲತೆಯ ಸಮಾಧಾನ, ಸಂತೃಪ್ತಿ … ಆದರೆ ಅದರ ಹಿಂದೆ ಇರುವ ಒತ್ತಡವನ್ನು ಅನುಭವಿಸುವವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ.

ಗಡುವು, ಅರೆ ನಿದ್ದೆ, ಮಾನಸಿಕ ಒತ್ತಡ, ನಿರಂತರವಾಗಿ ಸ್ಕ್ರೀನ್ ನೋಡುವಿಕೆ, ಭಾವನಾತ್ಮಕ ಸುಸ್ತು, ಅನಿಶ್ಚಿತ ಆದಾಯ, ಸಾಮಾಜಿಕ ಸ್ಪರ್ಧೆ, ಗುರುತಿನ ಆತಂಕ ಇವೆಲ್ಲವೂ ನಿಧಾನವಾಗಿ ದೇಹದೊಳಗೆ ಒಂದು ಮೌನ ಯುದ್ಧವನ್ನು ಶುರುಮಾಡುತ್ತವೆ. ಮುಖ್ಯವಾಗಿ ಸೃಜನಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ತಮ್ಮ ದೇಹದ ಮೇಲೆ ನಡೆಯುತ್ತಿರುವ ದಣಿವುಗಳನ್ನು ಗಮನಿಸುವುದೇ ಇಲ್ಲ. ಯಾಕೆಂದರೆ ಅವರ ಮನಸ್ಸು ಸದಾ ಕೆಲಸದಲ್ಲೇ ಇರುತ್ತದೆ. ಒಂದು ಕತೆ, ಒಂದು ಸಂಚಿಕೆ, ಒಂದು ಬ್ರೇಕಿಂಗ್ ನ್ಯೂಸ್, ಒಂದು ವಿಷಯ, ಒಂದು ಗಡುವು….. ಹೀಗೆ.

ದೇಹ “ನಿಲ್ಲು” ಎಂದು ಹೇಳುವಷ್ಟರಲ್ಲಿ, ಜೀವನ ಬಹಳ ದೂರ ಓಡಿರುತ್ತದೆ. ಇಂದಿನ ಡಿಜಿಟಲ್ ಸಂಸ್ಕೃತಿ ಕೂಡ ಈ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ. 24 ಗಂಟೆಯೂ ಚುರುಕಾಗಿ ಇರಬೇಕೆಂಬ ಒತ್ತಡ. ಪ್ರತಿ ದಿನ ಕಾಣುತ್ತಲೇ ಇರಬೇಕೆಂಬ ಭಯ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತತೆ ಉಳಿಸಿಕೊಳ್ಳಬೇಕೆಂಬ ಆತಂಕ. ಇವು ನಿಧಾನವಾಗಿ ವಿಶ್ರಾಂತಿಯನ್ನೇ ಅಪರಾಧದಂತೆ ಮಾಡಿವೆ.

ಹಿಂದೆ ಕೆಲಸ ಮುಗಿದ ಮೇಲೆ ಮನುಷ್ಯ ಮನೆಗೆ ಬರುತ್ತಿದ್ದ. ಈಗ ಕೆಲಸವೇ ಮನುಷ್ಯನ ತಲೆಯೊಳಗೆ ವಾಸಿಸುತ್ತಿದೆ. ಅದರ ಪರಿಣಾಮ ದೇಹದ ಮೇಲೆ ಮಾತ್ರವಲ್ಲ… ಮನಸ್ಸಿನ ಮೇಲೂ ಬೀಳುತ್ತಿದೆ. ನಾವು ಇಂದು ಉತ್ಪಾದಕತೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ಶಾಂತಿಯ ಬಗ್ಗೆ ಕಡಿಮೆ ಮಾತನಾಡುತ್ತಿದ್ದೇವೆ. ಯಶಸ್ಸಿನ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಿದ್ದೆಯ ಬಗ್ಗೆ ಮಾತನಾಡುತ್ತಿಲ್ಲ. ಫಿಟ್ನೆಸ್ ರೀಲ್ಸ್ ನೋಡುತ್ತಿದ್ದೇವೆ. ಆದರೆ ಭಾವನಾತ್ಮಕ ಆಯಾಸದ ಬಗ್ಗೆ ಮಾತೇ ಇಲ್ಲ.

ದುಃಖದ ಸಂಗತಿ ಏನೆಂದರೆ, ಯುವ ಸಾವುಗಳು ಈಗ ಶಾಕ್ ಆಗುವುದನ್ನೇ ನಿಲ್ಲಿಸಿವೆ. “ಹಾರ್ಟ್ ಅಟ್ಯಾಕ್ ಅಂತೆ…” ಎಂದು ಹೇಳಿ ಸಮಾಜ ಮುಂದಿನ ಸುದ್ದಿಯ ಕಡೆ ಹೋಗಿಬಿಡುತ್ತದೆ. ಆದರೆ ಒಂದು ಕುಟುಂಬದೊಳಗಿನ ಖಾಲಿತನ ಮಾತ್ರ ಹಾಗೆಯೇ ಉಳಿಯುತ್ತದೆ.

ಒಬ್ಬ ಮಗುವಿನ ಭವಿಷ್ಯದಲ್ಲಿ…
ಒಬ್ಬ ಸಂಗಾತಿಯ ಮೌನದಲ್ಲಿ…
ಒಬ್ಬ ತಾಯಿಯ ಕಣ್ಣೀರಿನಲ್ಲಿ…

ಆ ವ್ಯಕ್ತಿ ಬದುಕುತ್ತಲೇ ಇರುತ್ತಾನೆ. ನಂದೀಶ್ ಅವರಂತಹ ಪ್ರತಿಭಾವಂತ ಯುವ ವೃತ್ತಿಪರರ ಸಾವು ಕೇವಲ ಸಂತಾಪದ ವಿಷಯವಾಗಬಾರದು. ಅದು ನಮ್ಮ ಸಮಾಜ, ಕೆಲಸದ ಸಂಸ್ಕೃತಿ, ಮಾನಸಿಕ ಒತ್ತಡ ಮತ್ತು ಜೀವನ ಶೈಲಿಯ ಬಗ್ಗೆ ಗಂಭೀರ ಚರ್ಚೆಯಾಗಬೇಕು. ಯಾಕೆಂದರೆ ಇಂದು ಹಲವರು ಬದುಕಿಗಾಗಿ ಕೆಲಸ ಮಾಡುತ್ತಿಲ್ಲ. ಕೆಲಸಕ್ಕಾಗಿ ಬದುಕುತ್ತಿದ್ದಾರೆ.

ಕೊನೆಯಲ್ಲಿ ಒಂದು ಪ್ರಶ್ನೆ ಉಳಿಯುತ್ತದೆ. ನಾವು ವೃತ್ತಿ ಕಟ್ಟುತ್ತಿದ್ದೇವಾ?ಅಥವಾ ನಿಧಾನವಾಗಿ ನಮ್ಮನ್ನೇ ಕಳೆದುಕೊಳ್ಳುತ್ತಿದ್ದೇವಾ? ಬದುಕು ಗಡುವಿಗಿಂತ ದೊಡ್ಡದು. ಗುರುತಿಗಿಂತ ಅಮೂಲ್ಯ.
ಯಶಸ್ಸಿಗಿಂತ ನಾಜೂಕು. ಕೆಲವೊಮ್ಮೆ ನಿಧಾನವಾಗಿ ಬದುಕುವುದೂ ಒಂದು ದೊಡ್ಡ ಜಾಣ್ಮೆ.

Author

  • ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.