ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ | ನಾಳೆ ಚಿತ್ರದುರ್ಗದ ಶಾಲಾ ಕಾಲೇಜುಗಳಿಗೆ ರಜೆ
ಕರ್ನಾಟಕ ಸರಕಾರ ಅಗಲಿದ ಸಚಿವರಿಗೆ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ನಾಳೆ ಡಿ.ಸುಧಾಕರ್ ಉಸ್ತುವಾರಿ ಸಚಿವರಾಗಿದ್ದ ಚಿತ್ರದುರ್ಗದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು ಮೇ ೧೦: ಕರ್ನಾಟಕ ಸರ್ಕಾರದ ಯೋಜನಾ ಮತ್ತು ಅಂಕಿಅಂಶ ಸಚಿವರಾಗಿದ್ದ ಡಿ.ಸುಧಾಕರ್ (65) ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ವಾಸಕೋಶದ ತೀವ್ರ ತೊಂದರೆಯಿಂದ ಅವರು ಬಳಲುತ್ತಿದ್ದರು. ನಾಳೆ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಅವರ ನಿಧನ ರಾಜ್ಯ ರಾಜಕೀಯ ವಲಯಕ್ಕೆ ಭಾರೀ ಆಘಾತ ಉಂಟುಮಾಡಿದೆ. ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಸುಧಾಕರ್ ಅವರು ಸರಳತೆ, ಸಂಘಟನಾ ಸಾಮರ್ಥ್ಯ ಮತ್ತು ಜನಸ್ನೇಹಿ ರಾಜಕಾರಣದಿಂದ ಗುರುತಿಸಿಕೊಂಡಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯಪಾಲ ತಾವರ್ ಚಾಂದ್ ಗೆಲ್ಹೋಟ್, ಸಚಿವರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಅಂತಿಮ ದರ್ಶನ ಪಡೆದರು. ಅವರ ಅಗಲಿಕೆಯಿಂದ ರಾಜ್ಯವು ಅನುಭವಸಂಪನ್ನ ಹಾಗೂ ಶಾಂತ ಸ್ವಭಾವದ ನಾಯಕರನ್ನು ಕಳೆದುಕೊಂಡಂತಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ಡಿ. ಸುಧಾಕರ್ ಅವರು ರಾಜಕೀಯದಲ್ಲಿ ಹೆಚ್ಚು ಗದ್ದಲಕ್ಕಿಂತ ಕೆಲಸದ ಮೂಲಕ ಗುರುತಿಸಿಕೊಂಡ ನಾಯಕರಾಗಿದ್ದರು. ಕ್ಷೇತ್ರ ರಾಜಕಾರಣದಲ್ಲಿ ಜನರೊಂದಿಗೆ ನೇರ ಸಂಪರ್ಕ ಕಾಯ್ದುಕೊಂಡಿದ್ದ ಅವರು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದರು. ಗ್ರಾಮೀಣ ಸಮಸ್ಯೆಗಳು, ರೈತರ ವಿಚಾರಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುರಿತಾಗಿ ಸದಾ ಸ್ಪಂದಿಸುತ್ತಿದ್ದರು.
ಅವರ ರಾಜಕೀಯ ಬದುಕಿನಲ್ಲಿ ಪಕ್ಷ ಸಂಘಟನೆಗೂ ಮಹತ್ವದ ಪಾತ್ರವಹಿಸಿದ್ದರು. ಕಾರ್ಯಕರ್ತರೊಂದಿಗೆ ಸರಳವಾಗಿ ಬೆರೆಯುವ ಗುಣದಿಂದ ಅವರು ಎಲ್ಲರಿಗೂ ಹತ್ತಿರವಾಗಿದ್ದರು. ವಿರೋಧ ಪಕ್ಷದ ನಾಯಕರೂ ಸಹ ಅವರ ಸೌಜನ್ಯ ಮತ್ತು ಸಮತೋಲನದ ನಡವಳಿಕೆಯನ್ನು ಮೆಚ್ಚುತ್ತಿದ್ದರು.
ಮೂಲತಃ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಚಳ್ಳಕೆರೆ ಕ್ಷೇತ್ರದಿಂದ ೨೦೦೪ರಲ್ಲಿ , ಹಿರಿಯೂರು ಕ್ಷೇತ್ರದಿಂದ ೨೦೦೮ ಮತ್ತು ೨೦೧೩ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಿಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಪ್ರಸ್ತುತ ೨೦೨೩ರಲ್ಲಿ ಕಾಂಗ್ರೆಸ್ ನಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿ ಯೋಜನಾ ಮತ್ತು ಅಂಕಿಅಂಶಗಳ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ಇತ್ತೀಚೆಗೆ ತೀರ್ವ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವರು ಅವರ ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜಕೀಯದ ಹೊರತಾಗಿಯೂ ಡಿ. ಸುಧಾಕರ್ ಅವರು ಮೃದು ಸ್ವಭಾವದ ವ್ಯಕ್ತಿಯಾಗಿ ಪರಿಚಿತರಾಗಿದ್ದರು. ಸಾಮಾನ್ಯ ಜನರೊಂದಿಗೆ ಮಾತನಾಡುವಾಗಲೂ ಯಾವುದೇ ಅಧಿಕಾರದ ಅಂತರ ತೋರಿಸದ ಗುಣ ಅವರದ್ದಾಗಿತ್ತು. ಜನರ ನೋವುಗಳಿಗೆ ಸ್ಪಂದಿಸುವ ಮನಸ್ಸು ಮತ್ತು ಸಹಾಯ ಮಾಡುವ ಸ್ವಭಾವದಿಂದ ಅವರು ಅನೇಕರಿಗೆ ಆಪ್ತರಾಗಿದ್ದರು.ಕರ್ನಾಟಕ ರಾಜಕೀಯದಲ್ಲಿ ಶಾಂತವಾಗಿ ಆದರೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ ನಾಯಕನಾಗಿ ಡಿ. ಸುಧಾಕರ್ ಅವರು ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ, ಸಾರ್ವಜನಿಕ ಜೀವನಕ್ಕೂ ದೊಡ್ಡ ನಷ್ಟವಾಗಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.






