ವಿಜಯ ತಾಂಡವ : ತಮಿಳುನಾಡಿನಲ್ಲಿ ಮುಗಿದ ದ್ರಾವಿಡ ಪಕ್ಷಗಳ ಅಧಿಪತ್ಯ

ತಮಿಳುನಾಡಿನ ೧೮ನೇ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಸಮಾರಂಭ ದ್ರಾವಿಡ ಪಕ್ಷಗಳ ಅಧಿಪತ್ಯದ ಅಂತ್ಯದ ಸೂಚನೆ ನೀಡಿದೆ.

ವಿಜಯ್ ಮುಖ್ಯಮಂತ್ರಿ ಪ್ರಮಾಣವಚನ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕೆಯ ಆರಂಭ

ಚೆನ್ನೈ, ಮೇ ೧೦: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ರಾಜ್ಯದ ೧೮ನೇ ಮುಖ್ಯಮಂತ್ರಿಯಾಗಿ ನಟ-ರಾಜಕಾರಣಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಒಂಭತ್ತು ಮಂದಿ ಸಚಿವರೂ ಪ್ರಮಾಣವಚನ ಸ್ವೀಕರಿಸಿದ್ದು, ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ದ್ರಾವಿಡ ಪಕ್ಷಗಳ ಅಧಿಪತ್ಯಕ್ಕೆ ತೆರೆ ಬೀಳುವ ಸಂಕೇತ ಕಂಡುಬಂದಿದೆ.

ಯುವಪಡೆಯ ಉತ್ಸಾಹ ಮತ್ತು ಹಿರಿಯರ ಅನುಭವದ ಸಂಯೋಜನೆಯೊಂದಿಗೆ ಆಡಳಿತ ನಡೆಸುವ ಭರವಸೆ ವ್ಯಕ್ತಪಡಿಸಿದ ವಿಜಯ್, ಪ್ರಮಾಣವಚನ ಸಮಾರಂಭದ ವೇಳೆ ಭಾವುಕರಾಗಿ ಕಾಣಿಸಿಕೊಂಡರು. ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡಿದ್ದು ವಿಶೇಷ ಗಮನ ಸೆಳೆಯಿತು. ಅವರನ್ನು ಒಟ್ಟಿಗೆ ಕಂಡು ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಜನಸ್ತೋಮ ಹರ್ಷೋದ್ಗಾರ ವ್ಯಕ್ತಪಡಿಸಿತು.

ವಿಜಯ್ ಅವರ ತಂದೆ-ತಾಯಿ ಈ ಕ್ಷಣವನ್ನು ಭಾವಪೂರ್ಣವಾಗಿ ಕಣ್ತುಂಬಿಕೊಂಡರು. ನಟಿ ತ್ರಿಶಾ ಕೃಷ್ಣನ್ ಹಾಗೂ ಶಿವಕಾಶಿ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವೆಯಾಗಿರುವ ಕೀರ್ತನಾ ಕೂಡ ಮಾಧ್ಯಮದ ಕ್ಯಾಮೆರಾಗಳ ಗಮನ ಸೆಳೆದರು.

ಸಮಾರಂಭವು ವಂದೇ ಮಾತರಂ ಗೀತೆಯಿಂದ ಆರಂಭವಾಗಿ, ಬಳಿಕ ರಾಷ್ಟ್ರಗೀತೆ ಹಾಗೂ ತಮಿಳುನಾಡು ನಾಡಗೀತೆಗಳನ್ನು ಹಾಡಲಾಯಿತು. ಬೆಳಿಗ್ಗೆ ೧೦.೧೦ಕ್ಕೆ ಆಗಮಿಸಿದ ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಳೆಕರ್ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ವಿಜಯ್ ಸೇರಿದಂತೆ ಎಲ್ಲ ಸಚಿವರೂ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

Author