ದಣಿವು, ತಲೆಸುತ್ತು, ಉಸಿರಾಟ ಜಾಸ್ತಿ ಆಗುವುದು, ಮುಖ ಬಿಳಿಯಾಗುವುದು, ಕೈಕಾಲು ಚಳಿಯಾಗುವುದು… ಇವೆಲ್ಲ “ಸಾಮಾನ್ಯ” ಅಲ್ಲ. ಬಹುಸಾರಿ ಇದರ ಹಿಂದೆ ರಕ್ತಹೀನತೆ (ಅನಿಮಿಯಾ ) ಇರುತ್ತದೆ. ರಕ್ತಹೀನತೆಯನ್ನು ಸಾಮಾನ್ಯವಾಗಿ ಅನಿಮಿಯಾ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ (Hb) ಅಥವಾ ರಕ್ತಕಣಗಳ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ. ಕೆಲಸ–ಓದು–ಆರೋಗ್ಯ–ಗರ್ಭಧಾರಣೆ–ಮಕ್ಕಳ ಬೆಳವಣಿಗೆ ಎಲ್ಲದರ ಮೇಲೂ ಇದು ನೇರ ಪರಿಣಾಮ ಬೀರುತ್ತದೆ. ಆ ಕಾರಣಕ್ಕಾಗಿ ರಕ್ತಹೀನತೆಯನ್ನು ಸಾಮಾನ್ಯ ನಾಗರಿಕನಿಂದ ಹಿಡಿದು ವಿಶ್ವ ಆರೋಗ್ಯ ಸಂಸ್ಥೆಯವರೆಗೆ ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಭಾರತವು ವಿಶ್ವದ ಜನಸಂಖ್ಯೆಯಲ್ಲಿ ಅತಿ ದೊಡ್ಡ ರಾಷ್ಟ್ರವಾಗಿದೆ. ಸುಮಾರು ೧೪೦ ಕೋಟಿಗೂ ಹೆಚ್ಚಿರುವ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದರೆ ನಂಬುತ್ತೀರಾ? ನಂಬಲೇಬೇಕಾಗುತ್ತದೆ. ೨೦೧೯ ರಿಂದ ೨೦೨೧ರವರೆಗಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 15–49 ವರ್ಷದ ಮಹಿಳೆಯರಲ್ಲಿ ಶೇ.57 ಮತ್ತು 15–49 ವರ್ಷದ ಪುರುಷರಲ್ಲಿ ಶೇ. 25ರಷ್ಟು ರಕ್ತಹೀನತೆ ಸಮಸ್ಯೆ ಇದೆ. ಅಂದರೆ, ಪ್ರತಿ 2 ಮಹಿಳೆಯರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮತ್ತು ಪ್ರತಿ 4 ಪುರುಷರಲ್ಲಿ ಒಬ್ಬರಿಗೆ ಅನಿಮಿಯಾದ ಸಮಸ್ಯೆ ಇದೆ.
ಕರ್ನಾಟಕದಲ್ಲೂ ರಕ್ತಹೀನತೆ ಅಂತಹ ಉತ್ತಮ ವರದಿಯನ್ನು ಹೊಂದಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -೫ ರ ಪ್ರಕಾರ ಕರ್ನಾಟಕದಲ್ಲಿ 15–49 ವರ್ಷದ ಮಹಿಳೆಯರಲ್ಲಿ ಶೆ. 47.8 ಮತ್ತು 15–49 ವರ್ಷದ ಪುರುಷರಲ್ಲಿ ಶೇ.19.6ರಷ್ಟಿದೆ. ದುಡಿಮೆಯ ಏರುವಯಸ್ಸಿನ ಜನಸಂಖ್ಯೆಯೇ ರಟ್ಟೆಯಲ್ಲಿ ಬಲವಿಲ್ಲದೆ ಒದ್ದಾಡುತ್ತಿದ್ದರೆ ಉತ್ಪಾದಕತೆ ಎಲ್ಲಿಂದ ಬರಬೇಕು? ಜನಬಲ ಧನಬಲವಾಗುವ ಮೊದಲು ನಿರುತ್ಪಾದಕತೆ , ಸೋಮಾರಿತನದ ಹಣೆಪಟ್ಟಿಯಲ್ಲಿ ನಲುಗಿಹೋಗುವುದು ದುರಂತ. ಆದ್ದರಿಂದ ಅನಿಮಿಯಾ “ಸಣ್ಣ” ಸಮಸ್ಯೆ ಅಲ್ಲ. ಇದನ್ನು ಹೋಗಲಾಡಿಸಲು ಸಾವಧಾನತೆ ಮತ್ತು ನಿರಂತರ ಪೌಷ್ಠಿಕ ಕ್ರಮ ಅಗತ್ಯ.
ಅನಿಮಿಯಾಕ್ಕೆ ಪ್ರಮುಖ ಕಾರಣಗಳು:
- ಕಬ್ಬಿಣ (Iron) ಕಡಿಮೆಯಾಗುವುದು – ತಿನ್ನುವ ಆಹಾರದಲ್ಲಿ ಕಬ್ಬಿಣಾಂಶದ ಕೊರತೆ, ಅಥವಾ ಸೂಕ್ತ ಪೋಷಕಾಂಶಗಳ ಸಮಸ್ಯೆ
- ಫೋಲೇಟ್ / ವಿಟಮಿನ್ B12 ಕೊರತೆ
- ಜಂತುಹುಳುವಿನ ಸಮಸ್ಯೆ – ಮಕ್ಕಳಲ್ಲಿ/ಗ್ರಾಮೀಣ ಭಾಗದಲ್ಲಿ ಸಾಮಾನ್ಯ
- ಗರ್ಭಧಾರಣೆ, ಹೆರಿಗೆ, ಹೆಚ್ಚು ರಕ್ತಸ್ರಾವ (Heavy periods)
- ದೀರ್ಘಕಾಲದ ಕಾಯಿಲೆಗಳು (ಕೆಲವೊಮ್ಮೆ) – ಕಿಡ್ನಿ ತೊಂದರೆ, ಮಧುಮೇಹ ಇತ್ಯಾದಿ.
- ಚಹಾ/ಕಾಫಿ ಹೆಚ್ಚು (ಭೋಜನದ ಜೊತೆಗೆ/ತಕ್ಷಣ ನಂತರ ಕುಡಿಯುವ ಅಭ್ಯಾಸದಿಂದ ಕಬ್ಬಿಣಾಂಶ ಹೀರಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.)
ನೀವೊಂದು ವೇಳೆ ನಿಮ್ಮ ಆರೋಗ್ಯದ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದರೆ, ರಕ್ತಹೀನತೆಯನ್ನು ಒಮ್ಮೆ ಪರೀಕ್ಷೆ ಮಾಡಿಸಿ. ಕೇವಲ Hb ಮಾತ್ರವಲ್ಲ; ಸಾಧ್ಯವಾದರೆ ವೈದ್ಯರ ಸಲಹೆಯನ್ನು ಪಡೆದು Hb (ಹೀಮೋಗ್ಲೋಬಿನ್), CBC (ಒಟ್ಟೂ ರಕ್ತಕಣಗಳ ಸಂಖ್ಯೆ), Serum Ferritin / Iron profile (ಕಬ್ಬಿಣ ಸಂಗ್ರಹ ಅರ್ಥವಾಗಲು) ಮತ್ತು Vitamin B12 / Folate (ಅಗತ್ಯವಿದ್ದರೆ) ಪರೀಕ್ಷೆ ಮಾಡಿಸಿ. ಇದರಿಂದ ನಿಮಗೆ ಯಾವ ಕಾರಣಕ್ಕೆ ಅನಿಮಿಯಾ ಆಗಿದೆ ಎಂಬುದು ಗೊತ್ತಾಗುತ್ತದೆ. ಕಾರಣ ಸರಿಯಾಗಿ ತಿಳಿದರೆ ಮಾತ್ರ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತದೆ.
ಉದಾಃಗೆ ನಿಮಗೆ ಅನುವಂಶೀಯವಾಗಿ ರಕ್ತಕಣಗಳ ಜೋಡಣೆಯ ತೊಂದರೆ ತಲಸೀಮಿಯಾ ಇದ್ದರೆ ರಕ್ತ ಹೀನತೆ ಸಾಮಾನ್ಯ. ಆಗ ನೀವು ವೈದ್ಯರ ಶಿಫಾರಸ್ಸಿನ ಮೇರೆಗೆ ಕಬ್ಬಿಣಾಂಶದ ಮಾತ್ರೆಗಳನ್ನು, ಇಂಜೆಕ್ಷಣ್ ತೆಗೆದುಕೊಳ್ಳಬೇಕಾಗುತ್ತದೆ. ಗೊತ್ತಿಲ್ಲದೆ ರಕ್ತ ಹೆಚ್ಚಾಗಲಿ ಎಂದು ಕಬ್ಬಿಣಾಂಶವುಳ್ಳ ಆಹಾರ ಸೇವಿಸಿದರೆ ಕೆಲವೊಮ್ಮೆ ಪ್ರಾಣಾಂತಿಕವೂ ಆಗಬಹುದು. ಆದ್ದರಿಂದ ಅನಿಮಿಯಾ ಚಿಕಿತ್ಸೆಗೂ ಮೊದಲು ಸೂಕ್ತ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಸಾಮಾನ್ಯ ಪರಿಸ್ಥಿತಿಯಲ್ಲಿ ರಕ್ತ ಹೀನತೆ/ಅನಿಮಿಯಾ ಉಂಟಾಗಿದ್ದರೆ ಕಬ್ಬಿಣಾಂಶ ಹೆಚ್ಚುಳ್ಳ ಪಾಲಕ್, ಸಬ್ಬಸಿಗೆ, ಕೀರೆ, ನುಗ್ಗೆಯಂತಹ ಸೊಪ್ಪುಗಳು, ಮಸೂರ, ರಾಜ್ಮಾ, ಕಡಲೆಬೇಳೆ ,ಎಳ್ಳು, ನೆಲಗಡಲೆ,ಗೋಧಿ/ರಾಗಿ/ಜೋಳ, ಬೆಲ್ಲ (ಮಿತವಾಗಿ) ಸೇವಿಸಬೇಕು. ಮಾಂಸಾಹಾರಿಗಳು ಮೊಟ್ಟೆ, ಮೀನುಗಳನ್ನು ಹೆಚ್ಚು ತಿನ್ನಬೇಕು. ನೀವು ತಿಂದ ಕಬ್ಬಿಣಾಂಶದ ಆಹಾರ ಸರಿಯಾಗಿ ರಕ್ತಸೇರಲು ವಿಟಮಿನ್ ಸಿ ಬೇಕು. ಅದಕ್ಕೋಸ್ಕರ ಈ ಆಹಾರಗಳೊಂದಿಗೆ ನಿಂಬೆ, ಕಿತ್ತಳೆ, ನೆಲ್ಲಿಕಾಯಿ, ಟೊಮ್ಯಾತೊ, ಬೆಳ್ಳುಳ್ಳಿ–ಈರುಳ್ಳಿ ತಿನ್ನಬೇಕು.
ಸೇವಿಸಿದ ಕಬ್ಬಿಣಾಂಶ ಜೀರ್ಣವಾಗಿ ರಕ್ತ ಸೇರುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ಸೇವಿಸಿದ ಕಬ್ಬಿಣಾಂಶ ಉಪಯೋಗವಾಗುವುದಿಲ್ಲ. ಕಬ್ಬಿಣಾಂಶ ಸರಿಯಾಗಿ ಹೀರಿಕೊಳ್ಳಲು ಊಟದ ಜೊತೆ/ತಕ್ಷಣ ನಂತರ ಚಹಾ–ಕಾಫಿ ಕುಡಿಯಬಾರದು. ಕನಿಷ್ಟ 1–2 ಗಂಟೆ ಗ್ಯಾಪ್ ಕೊಡಬೇಕು. ಹೆಚ್ಚು ಕ್ಯಾಲ್ಸಿಯಂ (ಹಾಲು/ಕ್ಯಾಲ್ಸಿಯಂ ಟ್ಯಾಬ್ಲೆಟ್) ಅನ್ನು ಐರನ್ ಜೊತೆ ಒಂದೇ ಸಮಯಕ್ಕೆ ತೆಗೆದುಕೊಳ್ಳಬಾರದು. ಸಾಧ್ಯವಾದರೆ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡುವುದು ಒಳ್ಳೆಯದು.
ಅನಿಮಿಯಾ ತೊಂದರೆ ಇನ್ನೊಂದು ಪ್ರಮುಖ ಕಾರಣಕ್ಕೆ ಉಂಟಾಗುತ್ತದೆ. ಅದೆಂದರೆ ಮಕ್ಕಳು, ಹದಿಹರೆಯದವರಿಗೆ ಮಣ್ಣಾಟ, ಬರಿಗಾಲಿನಲ್ಲಿ ಓಡಾಟ, ಸ್ವಚ್ಛತೆಯ ಕೊರತೆಯಿಂದ ಜಂತುಹುಳುವಿನ ತೊಂದರೆ ಇರುತ್ತದೆ. ಅದಕ್ಕಾಗಿ ವೈದ್ಯರ ಸಲಹೆಯ ಮೇರೆಗೆ ೬ ತಿಂಗಳಿಗೊಮ್ಮೆ ಜಂತುಹುಳು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಶುದ್ಧ ನೀರು, ಸ್ವಚ್ಛ ಆಹಾರ ಸೇವಿಸಬೇಕು.
ಕೆಲವರಿಗೆ ಆಹಾರ ಮಾತ್ರ ಸಾಕಾಗುವುದಿಲ್ಲ. ವಿಶೇಷವಾಗಿ Hb ತುಂಬಾ ಕಡಿಮೆ ಇದ್ದರೆ, ಗರ್ಭಿಣಿ/ ಬಾಣಂತಿಗೆ ಹೆಚ್ಚು ರಕ್ತಸ್ರಾವ ಇದ್ದರೆ, ಕಬ್ಬಿಣಾಂಶ ತುಂಬಾ ಕಡಿಮೆ ಇದ್ದರೆ ವೈದ್ಯರು ಕಬ್ಬಿಣಾಂಶ ಮತ್ತು ಫೊಲಿಕ್ ಆಸಿಡ್ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಕೆಲವೊಮ್ಮೆ ಇಂಜೆಕ್ಷನ್, ರಕ್ತಪೂರಣದಂತಹ ಅನಿವಾರ್ಯ ಸ್ಥಿತಿ ಇರಬಹುದು. ಯಾವುದಕ್ಕೂ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಿರಿ. ಸ್ವಯಂ ಔಷಧ ಸೇವನೆ ತಪ್ಪಿಸಿ.
ಮುಟ್ಟು, ಗರ್ಭಧಾರಣೆಯಂತಹ ಹೆಚ್ಚು ರಕ್ತ ಬೇಡುವ ಮಹಿಳೆಯರು ತಮ್ಮ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ತಿಂಗಳ ‘ಆ ಸಮಯದಲ್ಲಿ’ ರಕ್ತಸ್ರಾವ ಹೆಚ್ಚಿದ್ದರೆ ಪ್ರಸೂತಿ ತಜ್ಞರನ್ನು ಕಂಡು ರಕ್ತಸ್ರಾವ ಕಡಿಮೆ ಮಾಡುವ ಚಿಕಿತ್ಸೆ ಪಡೆಯಬೇಕು. ಗರ್ಭಿಣಿಯರಲ್ಲಿ ಅನಿಮಿಯಾ ಬೇಗ ಹೆಚ್ಚಾಗುತ್ತದೆ. ನಿಯಮಿತ ಪರೀಕ್ಷೆ, ವೈದ್ಯರ ಸಲಹೆಯ ಮೇರೆಗೆ ಪೂರಕ ಮಾತ್ರೆಗಳನ್ನು ಸೇವಿಸಬೇಕು. ಹೆರಿಗೆಯ ನಂತರವೂ Hb ಗಮನಿಸಿ ಅಗತ್ಯವಿದ್ದರೆ ಚಿಕಿತ್ಸೆ ಪಡೆಯಬೇಕು. ಸಾಮಾನ್ಯವಾಗಿ ಬಾಣಂತಿಯರಿಗೆ ಅನಿಮಿಯಾ ಹೆಚ್ಚಿರುತ್ತದೆ.
ಇವುಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರಗಳು ವಿಶ್ವ ಆರೋಗ್ಯ ಸಂಸ್ಥೆಯ ಸಹಕಾರದೊಂದಿಗೆ ಶಾಲಾಮಕ್ಕಳಿಗೆ ಕಬ್ಬಿಣಾಂಶ ಮತ್ತು ಜಂತುಹುಳು ನಿವಾರಣೆಯ ಮಾತ್ರೆಗಳನ್ನು ನೀಡುತ್ತವೆ. ಆಶಾ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರು, ಬಾಣಂತಿಯರಲ್ಲಿ ರಕ್ತಹೀನತೆ ಮತ್ತು ಅದರ ನಿವಾರಣೆಯ ಪೋಷಕಾಂಶಗಳ ಕುರಿತು ಅರಿವನ್ನು ಮೂಡಿಸಲಾಗುತ್ತಿದೆ. ಭಾರತ ಸರ್ಕಾರ ಅನಿಮಿಯಾ ಮುಕ್ತ ಭಾರತ ಮುಂತಾದ ಯೋಜನೆಗಳ ಮೂಲಕ IFA ಪೂರಕ ಮಾತ್ರೆಗಳು, ಜಾಗೃತಿ, ಪರೀಕ್ಷೆ–ಚಿಕಿತ್ಸೆ ಕ್ರಮಗಳನ್ನು ಒತ್ತಿ ಹೇಳುತ್ತಿದೆ. ಆದಾಗ್ಯೂ ಜನರು ರಕ್ತ ಹೀನತೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತ. ಸರ್ಕಾರದ ಕಾರ್ಯಕ್ರಮಗಳ ಪ್ರಯೋಜನ ಪಡೆಯಿರಿ, ರಕ್ತ ಹೀನತೆ ಮತ್ತು ಅದರಿಂದಾಗುವ ಜೀವನದ ತೊಂದರೆಗಳಿಂದ ಹೊರಬನ್ನಿ.
ಅನಿಮಿಯಾವನ್ನು ಕೇವಲ ಆಯಾಸ ಅಂತ ನಿರ್ಲಕ್ಷ್ಯ ಮಾಡಬೇಡಿ. ಅನಿಮಿಯಾ ಸರಿಯಾಗುವುದು ಅಂದರೆ ಕೇವಲ Hb ಸಂಖ್ಯೆ ಏರಿಸುವುದು ಅಲ್ಲ—
ಅದು ಶಕ್ತಿ, ಮನಸ್ಸಿನ ಚುರುಕು, ಕೆಲಸದ ಉತ್ಪಾದಕತೆ, ಮಹಿಳೆಯರ ಆರೋಗ್ಯ, ಮಕ್ಕಳ ಭವಿಷ್ಯ ಎಲ್ಲವನ್ನೂ ಬಲಪಡಿಸುವುದು.
ನಿಮಗೆ ಅಥವಾ ಮನೆಯವರಲ್ಲಿ ದಣಿವು/ತಲೆಸುತ್ತು/ಉಸಿರಾಟ ಹೆಚ್ಚಾಗುವುದು ನಿಯಮಿತವಾಗಿದ್ದರೆ— ಪರೀಕ್ಷೆ ಮಾಡಿ → ಕಾರಣ ತಿಳಿಯಿರಿ → ಆಹಾರ + ವೈದ್ಯಕೀಯ ಸಲಹೆ = ಪರಿಹಾರ.






