ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದರೊಂದಿಗೆ ಕರ್ನಾಟಕದ ರಾಜಕೀಯ ಇತಿಹಾಸದ ಒಂದು ಅಂಕ ಮುಗಿದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಮಾರ್ಪಾಡಿ ವೀರಪ್ಪ ಮೊಯ್ಲಿ ಅವರ ರಾಜಕೀಯ ಬದುಕು ಒಂದು ರೋಚಕ ಅಧ್ಯಾಯ. ಅಲ್ಲಿ ಬಡತನವಿತ್ತು. ನೋವಿತ್ತು ಅಸಹಾಯಕತೆ ಇತ್ತು. ಜಾತಿಯ ತಾರತಮ್ಯ ಇತ್ತು. ಇದನ್ನೆಲ್ಲ ಮೆಟ್ಟಿ ನಿಂತು ರಾಜಕೀಯ ಮಾಡಿದ ಮೊಯಿ ಕರ್ನಾಟಕದ ಮುಖ್ಯಮಂತ್ರಿಯಾದದ್ದು ಸಾಮಾನ್ಯ ಘಟನೆ ಅಲ್ಲ.
ಮಂಗಳೂರಿನಲ್ಲಿ ವಕೀಲಿ ವೃತ್ತಿ. ಜನಾರ್ಧನ ಪೂಜಾರಿ ಅವರ ಜೊತೆಗಿನ ಒಡನಾಟ ಸ್ನೇಹ. ಆದರೆ ಈ ಸ್ನೇಹ ಇತ್ತೀಚಿನ ವರ್ಷಗಳಲ್ಲಿ ಉಳಿಯಲಿಲ್ಲ ಎಂಬುದು ಬೇರೆ ಮಾತು.
ಮಂಗಳೂರಿನ ಒಬ್ಬ ಸಾಮಾನ್ಯ ಯುವಕ. ಬಡವರ ಮನೆಯ ಹುಡುಗ. ಜಾತಿಯ ಪ್ರಾಬಲ್ಯ ಇಲ್ಲ. ಬೆಂಬಲವೂ ಇಲ್ಲ.
ಇವರಿಗೆ ರಾಜಕೀಯ ಬದುಕು ನೀಡಿದವರು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು. ದೇವರಾಜು ಅರಸು ಸಚಿವ ಸಂಪುಟಕ್ಕೆ ಸೇರಿದ ಮೊಯ್ಲಿ ಮತ್ತೆ ತಿರುಗಿ ನೋಡಲಿಲ್ಲ. ಅವರಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇತ್ತು. ಪ್ರತಿಭೆ ಇತ್ತು. ಅಧ್ಯಯನಶೀಲತೆ ಇತ್ತು. ಸಾಹಿತ್ಯ ಕ್ಷೇತ್ರದ ಒಡನಾಟ ಇತ್ತು. ಓದು ಮತ್ತು ಅಧ್ಯಯನ ಅವರ ಬದುಕಿನ ಭಾಗವಾಗಿತ್ತು.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರು ಮಾಡಿದ ಕೆಲಸ ಒಂದೆರಡಲ್ಲ. ವೈದ್ಯಕೀಯ ಮತ್ತು ಇಂಜನಿಯರಿಂಗ್ ಶಿಕ್ಷಣದಲ್ಲಿ ಕ್ಯಾಪಿಟೇಷನ್ ಹಾವಳಿಯನ್ನು ತಡೆದವರು ವೀರಪ್ಪ ಮೊಯ್ಲಿ ಅವರು. ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದರು.
ಇದರಿಂದಾಗಿ ಶೈಕ್ಷಣಿಕ ಲಾಬಿಯ ಭಾಗವಾಗಿದ್ದ ಮಠಾಧೀಶರು ಇವರ ವಿರುದ್ಧ ಬಿದ್ದರು. ಜಾತಿ ನಿಂದನೆ ಮಾಡಿದರು. ಸಭೆಯೊಂದರಲ್ಲಿ ಮೊಯ್ಲಿಯವರನ್ನು ನೀನು ದೇವಾಲಯದಲ್ಲಿ ಕಸಗುಡಿಸುವವನು ಗಂಟೆ ಭಾರಿಸುವವನು ಎಂದು ಮಠಾಧೀಶರೊಬ್ಬರು ಟೀಕಿಸಿದ್ದೂ ಇದೆ. ಮೊಯ್ಲಿ ಅವರು ಈ ನೋವನ್ನೆಲ್ಲ ತಮ್ಮೊಳಗೆ ಇಟ್ಟುಕೊಂಡರು. ಜನಪರ ಆಡಳಿತ ನೀಡಲು ಯತ್ನಿಸಿದರು.;
ಆದರೆ ಮೊಯ್ಲಿ ಅವರ ಜನಪರ ಮತ್ತು ಮನುಷ್ಯಪರ ಯೋಜನೆಗಳನ್ನು ವಿರೋಧಿಸಿದ ಮಠಾಧೀಶರುಗಳು ಮೊಯ್ಲಿ ಅವರನ್ನು ಕಾಂಗ್ರೆಸ್ ಅನ್ನೂ ಸೋಇಸಲು ಕೆಲಸ ಮಾಡಿದರು. ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ಸೋಲನ್ನು ಅನುಭವಿಸಿತು. ಮೊಯ್ಲಿ ಅಧಿಕಾರ ಕಳೆದುಕೊಂಡರು.
ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿ. ಹಂಪಿ ಕನ್ನಡ ವಿಶ್ವವಿದ್ಯಾಲಯ ಬರಲು ಮೊಯ್ಲಿ ಕಾರಣ. ಕನ್ನಡ ಪುಸ್ತಕ ಪ್ರಾಧಿಕಾರದ ಕನಸು ಅವರದು.
ಎಲ್ಲವನ್ನೂ ಮಾಡಿದ ಅವರಿಗೆ ರಾಜಕೀಯದಲ್ಲಿ ಸಿಗಬೇಕಾಗಿದ್ದ ಮನ್ನಣೆ ಸಿಗಲಿಲ್ಲ. ಮಾಧ್ಯಮ ಅವರ ಪರವಾಗಿ ಇರಲಿಲ್ಲ.
ಎಲ್ಲರೂ ಅವರ ಕಾಲು ಎಳೆಯುವ ಯತ್ನವನ್ನೇ ಮಾಡಿದರು. ಈಗ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಅವರಿಗೆ ಒಳ್ಲೆಯದಾಗಲಿ
