ರಾಯಚೂರು : ನಾವೆಲ್ಲರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ನಿಜವಾದ ದೇಶಪ್ರೇಮವೆಂದರೆ ಎಲ್ಲರನ್ನೂ ಪ್ರೀತಿಸುವುದು, ಗೌರವಿಸುವುದಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಶರಣ್ ಪ್ರಕಾಶ್ ಆರ್. ಪಾಟೀಲ್ ಅವರು ತಿಳಿಸಿದ್ದಾರೆ
ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ಗಣರಾಜ್ಯೊತ್ಸವದದಂದು ಧ್ವಜಾರೋಹಣ ನೆರವೇರಿಸಿ ಸಚಿವರು ಭಾಷಣ ಮಾಡಿದರು.
ಈ ದೇಶ ಎಲ್ಲರಿಗೂ ಸೇರಿದೆ. ಎಲ್ಲರಿಗೂ ಸಮಾನತೆ ಇದೆ ಎನ್ನುವಂತಹ ವಿಷಯಗಳ ಬಗ್ಗೆ ನಾವಿಂದು ನಮ್ಮ ಮಕ್ಕಳು, ನಮ್ಮ ಮುಂದಿನ ಪೀಳಿಗೆಗೆ ಹೇಳುತ್ತಿದ್ದೇವೆ. ಈ ರೀತಿ ಮನವರಿಕೆ ಮಾಡುವ ಮಹತ್ಕಾರ್ಯದಿಂದಲೇ ನಾವಿಂದು ಶಾಂತಿ ಸಹಬಾಳ್ವೆಯಿಂದಿರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸತ್ಯ ಅಹಿಂಸೆ ಮಾರ್ಗದಲ್ಲಿ ದಕ್ಕಿದ ಸ್ವಾತಂತ್ರ್ಯ :
ಈ ಜಗದ ಮಕ್ಕಳೆಲ್ಲರೂ ಸಮಾನರು, ನಾವೆಲ್ಲ ಸೇರಿಯೇ ದೇಶ ಕಟ್ಟಬೇಕಿದೆ ಎಂಬುದಾಗಿ ತಿಳಿಸುವ ಮಹತ್ವದ ಕಾರ್ಯವನ್ನು ನಮ್ಮೆಲ್ಲ ಶಿಕ್ಷಕರ ಸೇರಿ ಮಾಡಬೇಕು, ಶಿಕ್ಷಕ ಸಮುದಾಯದ ಮಹತ್ವದ ಕರ್ತವ್ಯವಾಗಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಪ್ರಜಾರಾಜ್ಯೋತ್ಸವವು ಮಹತ್ವದ ರಾಷ್ಟ್ರೀಯ ಹಬ್ಬಗಳಾಗಿವೆ. ಸ್ವಾತಂತ್ರ್ಯ ಚಳವಳಿಯು ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ನಾಯಕರ ನೇತೃತ್ವದಲ್ಲಿ ವಿಶ್ವವೇ ಬೆರಗಾಗುವಂತೆ ನಡೆಯಿತು. ಈ ಚಳವಳಿಯಲ್ಲಿ ಅನೇಕ ಮಹನಿಯರು ದೇಶಕ್ಕಾಗಿ ಆಸ್ತಿಪಾಸ್ತಿ ತ್ಯಾಗ ಮಾಡಿದರು. ಹಲವಾರು ದೇಶಗಳು ರಕ್ತ ಕ್ರಾಂತಿ ಮೂಲಕ ಸ್ವಾತಂತ್ರ್ಯ ಪಡೆದರೆ, ಭಾರತೀಯರಾದ ನಾವು ಸತ್ಯ ಅಹಿಂಸೆ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದುಕೊಂಡೆವು ಎಂದು ಸಚಿವರು ವಿವರಿಸಿದರು.
ಸಂವಿಧಾನ ರಚನೆಯ ಮಹತ್ವ ಜವಾಬ್ದಾರಿ :
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತರುವಾಯ ನಮ್ಮ ಸ್ವಾತಂತ್ರ್ಯ ಮತ್ತು ಭಾತೃತ್ವ ಗಟ್ಟಿಯಾಗಿರಲು ಸಂವಿಧಾನದ ಅವಶ್ಯಕತೆ ಇದೆ ಎಂದು ಭಾರತೀಯ ಗಣ್ಯರೆಲ್ಲರೂ ಸೇರಿ ಸಂವಿಧಾನ ರಚಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ವಹಿಸಿದರು. ಅಂಬೇಡ್ಕರ ಅವರು ಹಲವು ದೇಶವನ್ನು ಸುತ್ತಿ, ನಾನಾ ಭಾಷೆಗಳು ಮತ್ತು ವಿಭಿನ್ನ ಬಗೆಯ ಜನಜೀವನದ ಬಗ್ಗೆ ಅಧ್ಯಯನ ಮಾಡಿ ಶ್ರಮ ವಹಿಸಿದ್ದರಿಂದಾಗಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಆಶಯದ ಸಂವಿಧಾನ ರಚನೆ ಸಾಧ್ಯವಾಯಿತು ಎಂದು ಶರಣ್ ಪ್ರಕಾಶ್ ಪಾಟೀಲ್ ಹೇಳಿದರು.
ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ :
ನಾವಿಂದು ಸಂವಿಧಾನದ ದಾರಿಯಲ್ಲಿ ನಡೆದು 75 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳಲ್ಲಿ ವಿಶ್ವಾಸ ಹೊಂದಿ ನಾವು ನಡೆದ ಬಂದ ದಾರಿಯು ನಮ್ಮನ್ನು ಪ್ರಗತಿಪಥದತ್ತ ಸಾಗುವಂತೆ ಮಾಡಿದೆ. ಅಂತಹ ಪ್ರಜಾಪ್ರಭುತ್ವದ ನೆಲಗಟ್ಟಿನಲ್ಲಿ ಸಂವಿಧಾನ ಎಂಬ ದೀಪದ ಬೆಳಕಿನಲ್ಲಿ ದೇಶವು ಮುನ್ನೆಡೆಯುತ್ತಿದೆ. ನಮ್ಮ ಸಂವಿಧಾನವು ಎಲ್ಲ ಜಾತಿ, ಧರ್ಮದವರಿಗೆ ಹಕ್ಕುಗಳನ್ನು, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕು. ಸಂವಿಧಾನ ಎಂದರೆ ನಾವೆಲ್ಲರೂ ಸೇರಿ ಮಾಡುವ ಅಭಿವೃದ್ದಿಯ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದರು.
ಸಂವಿಧಾನದ ಚೌಕಟ್ಟನ್ನು ಮೀರಲು ಈ ದೇಶದಲ್ಲಿ ಯಾರಿಗೂ ಸಾಧ್ಯವಿಲ್ಲ. ಅಂತಹ ಉತ್ತಮ ಅಂಶಗಳು ಸಂವಿಧಾನದಲ್ಲಿ ಅಡಕವಾಗಿವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಸರಿಯಾಗಿದೆ ಎಂಬುದು ನಮ್ಮ ಜನತೆ ಎಷ್ಟು ಜಾಗೃತರಾಗಿದ್ದಾರೆ ಎಂಬುದರ ಮೇಲೆಯೇ ನಿರ್ಣಯವಾಗುತ್ತದೆ. ನಮ್ಮ ಸಂವಿಧಾನ ಹೇಳುವಂತೆ ಸಮಾಜದಲ್ಲಿನ ಎಲ್ಲರಿಗೂ ಅವಕಾಶ ಸೌಕರ್ಯಗಳು ಸಮರ್ಪಕವಾಗಿ ಸಮಾನವಾಗಿ ದೊರೆಯುವಂತೆ ಮಾಡುವಲ್ಲಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಸಹ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಎಂದು ಸಲಹೆ ಮಾಡಿದರು.
ರಾಯಚೂರಿಗೆ ಹೊಸದಾಗಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ :
ನಮ್ಮ ಭಾಗದ ಹಿರಿಯರು ವಹಿಸಿದ ಪರಿಶ್ರಮದಿಂದಾಗಿ ಲಭ್ಯವಾದ 371 ಜೆ ಕಾಯಿದೆ ಜಾರಿಯಿಂದಾಗಿ ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ರೀತಿಯಲ್ಲಿ ಅನುದಾನ ದೊರೆತು ಉತ್ತಮ ಕಾರ್ಯ ಮಾಡಲು ಸಾಧ್ಯವಾಗಿದೆ. ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಡೇ ಕೇರ್ ಕಿಮೋಥೆರೆಪಿ ಸೆಂಟರನ್ನು ಆರಂಭಿಸಲಾಗುವುದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಮಾರಂಭದಲ್ಲಿ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ವಿಧಾನ ಪರಿಷತ್ ಶಾಸಕರಾದ ಎ. ವಸಂತಕುಮಾರ, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಜಿಲ್ಲಾಧಿಕಾರಿಗಳಾದ ನಿತೀಶ ಕೆ., ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿ ಶಿವಾನಂದ, ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸ್ವಾತಂತ್ಯ ಹೋರಾಟಗಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘಟಿಕರು, ಯುವಜನರು, ಸಾರ್ವಜನಿಕರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
