25 ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ! ವರಿಷ್ಠ ರಾಹುಲ್ ಗಾಂಧಿಯವರ ಆರ್ಥಿಕ ಯೋಜನೆ ಹೇಗಿದೆ?

ನವದೆಹಲಿ : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೆಲವರಿಗೆ ನೆಚ್ಚಿನ ನಾಯಕನಾದರೆ, ಕೆಲವರಿಗೆ ಏನೂ ಅರಿಯದ ಪಪ್ಪು. ಭಾರತ್ ಜೋಡೊ ಯಾತ್ರೆಯ ನಂತರ ಬದಲಾದ ವರ್ಚಸ್ಸು ಅವರಿನ್ನೂ ಪ್ರಧಾನ ಮಂತ್ರಿ ಹುದ್ದೆಗೆ ಅರ್ಹ ಎನ್ನುವುದನ್ನು ಸಾಬೀತು ಪಡಿಸಿಲ್ಲ ಎನ್ನುವವರೂ ಇದ್ದಾರೆ.

ಇದೇ ವೇಳೆಯಲ್ಲಿ ಅವರು ತಮ್ಮ ಪಕ್ಷದ ಹಿರಿಯ ನಾಯಕ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಮ್ಮ ಸೋನಿಯಾ ಗಾಂಧಿ, ಅಕ್ಕ ಪ್ರಿಯಾಂಕಾ ಗಾಂಧಿ ಹಾಗೂ ತಮ್ಮ ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಪರಿಣಾಮವಾಗಿ ಕರ್ನಾಟಕದಲ್ಲಿ ಗ್ಯಾರಂಟಿಗಳ ಘೋಷಣೆ ಕೇವಲ ಘೋಷಣೆಯಾಗಿ ಉಳಿಯದೆ ಎಲ್ಲಾ ಗ್ಯಾರಂಟಿಗಳೂ ಜಾರಿಯಾಗಿವೆ. ಜೊತೆಗೆ ಕರ್ನಾಟಕ ಹೊರತಾಗಿ ತೆಲಂಗಾಣದಲ್ಲಿ ಸಹ ಗ್ಯಾರಂಟಿ ಘೋಷಣೆ ಜಾರಿಯಾಗಿ ಫಲ ನೀಡಿದೆ. ಇಂತಹ ಪಕ್ಷ ಈಗ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ ಇಪ್ಪತ್ತೈದು ಗ್ಯಾರಂಟಿಗಳನ್ನು ಘೋಷಿಸಿದೆ.

ಸ್ವಾತಂತ್ರ್ಯಾ ನಂತರ ದೇಶಕ್ಕೆ ಹಸಿರು, ಕ್ಷೀರ, ಉದ್ಯೋಗ, ಜಾಗತಿಕತೆ, ಇಂಟರ್ನೆಟ್ ಎಲ್ಲವನ್ನೂ ಕಾಂಗ್ರೆಸ್ ಭಾರತಕ್ಕೆ ಪರಿಚಯಿಸಿದೆ. ಬಿಡಿಗಾಸಿಲ್ಲದ ದಟ್ಟದರಿದ್ರ ಭಾರತವನ್ನು ಪ್ರಗತಿಪಥದತ್ತ ತೆಗೆದುಕೊಂಡು ಬಂದಿದೆ. ಇಂತಹ ಪಕ್ಷಕ್ಕೆ ಇವತ್ತು ದಕ್ಷ ನಾಯಕತ್ವದ ಪ್ರಶ್ನೆ ಕೇಳುವವರಿದ್ದಾರೆ. ಈ ಪಕ್ಷಕ್ಕೊಬ್ಬ ಸೂಕ್ತ ನಾಯಕನಿಲ್ಲ ಎನ್ನುವವರಿದ್ದಾರೆ. ಆದರೆ ರಾಹುಲ್ ಗಾಂಧಿಯವರ ಆರ್ಥಿಕ ಹೂಡಿಕೆಗಳು ಮತ್ತು ನಿಭಾವಣೆಯನ್ನು ನೋಡಿದರೆ ಅವರೊಬ್ಬ ಸೂಕ್ಷ್ಮ ಆರ್ಥಿಕ ತಜ್ಞ ಎನ್ನುವುದನ್ನು ಪರಿಗಣಿಸಲೇಬೇಕಾಗುತ್ತದೆ. ಯಾಕೆಂದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದಾಖಲೆಗಳ ಪ್ರಕಾರ ರಾಹುಲ್ ಗಾಂಧಿಯವರ ಆರ್ಥಿಕತೆ ಹಾಗಿದೆ.

ರಾಹುಲ್ ಗಾಂಧಿ ಮ್ಯೂಚುವಲ್ ಫಂಡ್ ಗಳಲ್ಲಿ ಮಾತ್ರವಲ್ಲದೆ ನೇರ ಹೂಡಿಕೆಯನ್ನೂ ಮಾಡಿದ್ದಾರೆ. ಜೊತೆಗೆ ಚಿನ್ನ ಮತ್ತು ರಿಯಲ್ ಎಸ್ಟೇಟ್ ಸಹ ಅವರ ನೆಚ್ಚಿನ ಬಂಡವಾಳ ಹೂಡಿಕೆಯ ಕ್ಷೇತ್ರವಾಗಿದೆ. ಅವರು ಮ್ಯೂಚುವಲ್ ಫಂಡ್ ಮತ್ತು ಚಿನ್ನದ ಬಾಂಡ್ ಗಳ ಮೇಲೆ ಹೂಡಿಕೆ ಮಾಡಲು ಉತ್ಸಾಹ ತೋರುತ್ತಾರೆ.

ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ತಮ್ಮ ಹಣಕಾಸು ವಿವರವನ್ನು ಕೊಡುವುದು ಕಡ್ಡಾಯವಾಗಿದೆ. ಕೇರಳದ  ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ಅಫಿಡಿವಿಟ್ ಸಲ್ಲಿಸಿರುತ್ತಾರೆ. ಅದರ ಪ್ರಕಾರ ರಾಹುಲ್ ಗಾಂಧಿಯವರ ಹೆಚ್ಚಿನ ಆಸ್ತಿ ರಿಯಲ್ ಎಸ್ಟೇಟ್ ನಲ್ಲಿದೆ.ಅವರ ಒಟ್ಟೂ ಆಸ್ತಿಯ ಶೇ.55 ಭಾಗ ರಿಯಲ್ ಎಸ್ಟೇಟ್ ನಲ್ಲಿದೆ. ಜೊತೆಗೆ ಈಕ್ವಿಟಿಗಳಲ್ಲಿ ಶೇ.32ರಷ್ಟು ಹಣವನ್ನು ತೊಡಗಿಸಿರುತ್ತಾರೆ. ನಗದು ಕೇವಲ 26.80 ಲಕ್ಷ ರೂ. ಹೊಂದಿದ್ದಾರೆ.

ರಾಹುಲ್ ಗಾಂಧಿಯವರ ಆಸ್ತಿ ಹಂಚಿಕೆ ಆಸಕ್ತಿಕರವಾಗಿದೆ. ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೊಂದಿದ್ದಾರೆ. ಈಕ್ವಿಟಿಗಳಲ್ಲಿ ತೊಡಗಿಸಿರುವ 6.35 ಕೋ.ರೂಗಳು  ಮ್ಯೂಚುವಲ್ ಫಂಡ್ ಮತ್ತು ಶೇರುಗಳಲ್ಲಿ ಹಂಚಿಕೆಯಾಗಿವೆ. ಅವರು ಐಸಿಐಸಿಐ ಬ್ಯಾಂಕ್, ಹಿಂದುಸ್ತಾನ್ ಯುನಿಲಿವರ್, ಐಟಿಸಿ, ಪಿಡಿಲೈಟ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಸೇರಿದಂತೆ ಇನ್ನೂ ಕೆಲವು ಕಂಪನಿಗಳ ಶೇರುಗಳನ್ನು ಹೊಂದಿದ್ದಾರೆ.

24 ಶೇರುಗಳ ಜೊತೆಗೆ 7 ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಎರಡೂ ಹೂಡಿಕೆಗಳಲ್ಲಿ ರಾಹುಲ್ ಗಾಂಧಿ ಹೆಚ್ಚು ಕಡಿಮೆ ಸಮಪ್ರಮಾಣದಲ್ಲಿ ಹಣ ವಿನಿಯೋಗಿಸಿದ್ದಾರೆ.

Author

error: