ಜೈಪುರ : ಆರ್ ಸಿ ಬಿ ಈ ಬಾರಿಯಾದರೂ ಕಪ್ ಗೆಲ್ಲಬಹುದೆ ? ಇದು ಬೆಂಗಳೂರು ಅಭಿಮಾನಿಗಳ ಪ್ರಶ್ನೆ. ಹಾಗೆ ಆಸೆ ಕೂಡ. ಆದರೆ ಇದು ಗಗನ ಕುಸುಮ ಎಂದು ಅನ್ನಿಸತೊಡಗಿದೆ, ಯಾಕೆಂದರೆ ಇದುವರೆಗೆ ಆಡಿದ ನಾಲ್ಕು ಪಂದ್ಯದಲ್ಲಿ ಆರ್ ಸಿ ಬಿ ಗೆದ್ದಿದ್ದು ಒಂದು ಪಂದ್ಯ ಮಾತ್ರ. ಇವತ್ತು ಶನಿವಾರ. ಜೈಪುರದ ಮಾನಸಿಂಗ್ ಸ್ಟೇಡಿಯಂ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ ಸಿ ಬಿ ಸೆಣಸಲಿದೆ.
ರಾಜಸ್ಥಾನ್ ರಾಯಲ್ಸ್ ಸದೃಡ ತಂಡ. ಅದು ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವನ್ನು ಪಡೆದಿದೆ. ಈಗ ಅದು ನಾಲ್ಕನೆಯ ಪಂದ್ಯ ಆಡುತ್ತಿದೆ. ರಾಜಸ್ಥಾನ ತಂಡ ಅಂಕ ಪಟ್ಟಿಯಲ್ಲಿ 2 ನೆಯ ಸ್ಥಾನದಲ್ಲಿದೆ. ಆರ್ ಸಿ ಬಿ ಎಂಟನೆಯ ಸ್ಥಾನದಲ್ಲಿದೆ.
ಆರ್ ಸಿ ಬಿ ತನ್ನ ತಂಡದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಒಬ್ಬರಿಗಿಂತ ಒಬ್ಬರು ದಿಗ್ಗಜರು. ಆದರೆ ತಂಡವಾಗಿ ಮಾತ್ರ ಆರ್ ಸಿ ಬಿ ಯಶಸ್ವಿಯಾಗುತ್ತಿಲ್ಲ. ಗೆಲ್ಲಲೇಬೇಕು ಎಂಬ ಛಲ ತಂಡದಲ್ಲಿ ಕಾಣುತ್ತಿಲ್ಲ.
ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರೂನ್ ಗ್ರೀನ್ ಮತ್ತು ರಜತ್ ಪಾಟಿದಾರ್ ಅವರನ್ನೊಳಗೊಂಡ ಆರ್‌ಸಿಬಿ ಅಗ್ರ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದ್ದು, ಈ ಪಂದ್ಯದಲ್ಲಾದರೂ ಅತ್ಯುತ್ತಮ ಪ್ರದರ್ಶನ ನೀಡಬಹುದೆ ? ಗೊತ್ತಿಲ್ಲ. ಯಾಕೆಂದರೆ ಕ್ರಿಕೆಟ್ ಎನ್ನುವುದು ಗಣಿತ ಅಲ್ಲ. ಫಲಿತಾಂಶ ಹೀಘೆ ಬರುತ್ತದೆ ಎಂದು ಹೇಳಲಾಗದು.
ಈ ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದು ಬಿಟ್ಟರೆ, ಆರ್‌ಸಿಬಿಯ ಬೇರೆ ಯಾವುದೇ ಬ್ಯಾಟರ್ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿಲ್ಲ. ಇವತ್ತಾದರೂ ಆರ್ ಸಿ ಬಿ ಗೆಲ್ಲುತ್ತಾ ? ಗೆಲ್ಲಲಿ ಎಂಬುದು ಅಭಿಮಾನಿಗಳ ಹಾರೈಕೆ.






