ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ದಿನದ ಹಿನ್ನೆಲೆಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಸ್ಥಿತಿ, ಪರಿಣಾಮ ಮತ್ತು ನಿಯಂತ್ರಣದ ಸವಾಲುಗಳ ವಿಶ್ಲೇಷಣೆ.
ಪ್ರತಿ ವರ್ಷ ಡಿಸೆಂಬರ್ 9ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ದಿನ ಆಚರಿಸಲಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಿ, ಪಾರದರ್ಶಕ ಆಡಳಿತ ಮತ್ತು ಜನಪಾಲನೆಗೆ ಬಲ ನೀಡುವ ಉದ್ದೇಶದಿಂದ ಈ ದಿನವನ್ನು ಯುಎನ್‌ಒ ಗುರುತಿಸಿದೆ. ಆದರೆ, 2025ರ ಭಾರತವನ್ನು ನೋಡಿದಾಗ, ಭ್ರಷ್ಟಾಚಾರ ಕಡಿಮೆಯಾಗುತ್ತಿರುವುದಕ್ಕಿಂತ ಹೆಚ್ಚಾಗುತ್ತಿರುವ ಆತಂಕಕಾರಿ ಚಿತ್ರಣವೇ ಸ್ಪಷ್ಟವಾಗಿ ಕಾಣುತ್ತಿದೆ.
ಭಾರತದಲ್ಲಿ ಭ್ರಷ್ಟಾಚಾರದ ಇಂದಿನ ಸ್ಥಿತಿ ಕೇವಲ ಲಂಚದ ಮಟ್ಟಕ್ಕೆ ಸೀಮಿತವಾಗಿಲ್ಲ. ಇಂದು ರಾಜಕೀಯ, ಪೊಲೀಸ್ ಇಲಾಖೆ, ಸರಕಾರಿ ಕಚೇರಿ, ಶಿಕ್ಷಣ ಕ್ಷೇತ್ರ, ಆರೋಗ್ಯ ವ್ಯವಸ್ಥೆ, ಗುತ್ತಿಗೆ ಮತ್ತು ಟೆಂಡರ್ ವ್ಯವಸ್ಥೆ ಸೇರಿದಂತೆ ಕೊನೆಗೆ ಮಾಧ್ಯಮ ಕ್ಷೇತ್ರವನ್ನೂ ಭ್ರಷ್ಟಾಚಾರ ಬಿಟ್ಟಿಲ್ಲ. ಟ್ರಾನ್ಸ್‌ಪೆರನ್ಸಿ ಇಂಟರ್‌ನ್ಯಾಷನಲ್ ನೀಡುವ Corruption Perception Index (CPI) ವರದಿಗಳ ಪ್ರಕಾರ, ಭಾರತವು ಹಲವಾರು ವರ್ಷಗಳಿಂದ ಮಧ್ಯಮ ಸ್ಥಾನದಲ್ಲೇ ನಿಂತುಕೊಂಡಿದೆ. ಭ್ರಷ್ಟಾಚಾರದ ಸ್ವರೂಪ ಅಗಾಧವಾಗಿದೆ. ಇದರ ಮೂಲ ಬೇರು, ಹಣ ಸುರಿದು ನಡೆಸುವ ಚುನಾವಣೆ ಮತ್ತು ಅದರಿಂದ ಹೊಮ್ಮುವ ರಾಜಕೀಯ. ಚುನಾವಣಾ ನಿಧಿಗಾಗಿಯೇ ಎಷ್ಟೊಂದು ಅಡ್ಡದಾರಿಗಳು. ಎಲೆಕ್ಟ್ರಾನಿಕ್ ಬಾಂಡ್, ಪಕ್ಷಗಳ ದೇಣಿಗೆ, ದಾನಿಗ ಉದ್ಯಮಪತಿಗಳ ಓಲೈಕೆ ಒಂದೇ ಎರಡೆ. ಒಟ್ಟಿನಲ್ಲಿ ದೇಶದ ಸ್ವಾಯತ್ತತೆ ಈ ದಾನಿಗಳ ಓಲೈಕೆಯ ಭ್ರಷ್ಟಾಚಾರಕ್ಕೆ ಮೊದಲ ಬಲಿ.
ಚುನಾವಣೆ ಮುಗಿದು ಆರಿಸಿ ಬಂದರೆ ಸಾಕು ಕುರ್ಚಿ ಕಿತ್ತಾಟ, ಒಳಜಗಳಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಭ್ರಷ್ಟಾಚಾರ ಶುರುವಾಗುತ್ತದೆ. ಕೋಟಿ ಕೋಟಿಗಳಲ್ಲಿ ವಿನಿಮಯ ನಡೆದು ಶಾಸಕರು ಮಾರಾಟವಾಗುತ್ತಾರೆ, ಖರೀದಿಯಾಗುತ್ತಾರೆ. ಮತ ಮತ್ತು ಮತದಾರ ಮಾತ್ರ ಅಲ್ಲ, ಚುನಾಯಿತ ಪ್ರತಿನಿಧಿಯೂ ಮಾರಾಟದ ಸರಕಾಗುತ್ತಾನೆ. ಅಂತೂ ಇಂತೂ ಸರಕಾರ ರಚನೆಯಾದರೆ ಪರ್ಸೆಂಟೇಜ್ ವ್ಯಾಪಕವಾಗುತ್ತದೆ. ಚುನಾವಣೆಯಲ್ಲಿ ಖರ್ಚು ಮಾಡಿದ್ದು, ಮುಂದಿನ ಚುನಾವಣೆಗೆ ತಯಾರಿ ಎರಡಕ್ಕೂ ಒಬ್ಬ ಜನಪ್ರತಿನಿಧಿ ಜನಸಾಮಾನ್ಯನ ತೆರಿಗೆ ಹಣದ ಲೂಟಿಗೆ ನಿಂತು ಬಿಡುತ್ತಾನೆ. ರಸ್ತೆ, ನೀರು, ವಿದ್ಯುತ್, ಆಹಾರ, ಔಷಧಿಗಳಂತಹ ಮೂಲಭೂತ ಸೌಕರ್ಯಗಳಿಂದ ಹಿಡಿದು ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲ ಚೀಲಗಳಿಗೆ ತೂತು ಮಾಡಿ ತನ್ನ ಸಂಚಿ ತುಂಬಿಕೊಳ್ಳುತ್ತಾನೆ. ಇನ್ನು ಅರ್ಹರಿಗೆ, ಯೋಗ್ಯತೆಗೆ ಅನ್ನುವುದಕ್ಕಿಂತಲೂ ಹಣಕಾಸು ಮತ್ತಿತರ ಲಾಭಕ್ಕಾಗಿ ಅಧಿಕಾರ ದುರುಪಯೋಗ ಭ್ರಷ್ಟಾಚಾರದ ಕಬಂಧ ಬಾಹುವಿನ ವಿಸ್ತಾರ.
ಸಾಮಾನ್ಯ ಜನರ ಬದುಕಿನ ಮೇಲೆ ಭ್ರಷ್ಟಾಚಾರದ ಪರಿಣಾಮ
ಇವುಗಳಿಂದಾಗಿ ಜನಸಾಮಾನ್ಯನಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುತ್ತದೆ. ಭ್ರಷ್ಟಾಚಾರ ಕೇವಲ ಸರಕಾರಿ ದಾಖಲೆಗಳಲ್ಲಿ ಮಾತ್ರವಲ್ಲ, ಜನಸಾಮಾನ್ಯನ ದಿನನಿತ್ಯದ ಬದುಕನ್ನೇ ಹಿಂಡಿಹಾಕುತ್ತದೆ. ಎಲ್ಲೂ ಕೂಡ ಲಂಚವಿಲ್ಲದೆ ಕೆಲಸವಾಗುವುದಿಲ್ಲ. ಬಡವರಿಗೆ ಸಿಗಬೇಕಾದ ಯೋಜನೆಗಳು ಮಧ್ಯವರ್ತಿಗಳ ಕೈಗೆ ಸೇರುತ್ತವೆ. ಅನ್ನಭಾಗ್ಯ, ಬಿಪಿಎಲ್ ಕಾರ್ಡ್, ಶಕ್ತಿ ಯೋಜನೆ ಇತ್ಯಾದಿಗಳ ಸೇವೆಯನ್ನು ಉಳ್ಳವರೂ ಬಳಸಿಕೊಳ್ಳುವುದು ಇದಕ್ಕೊಂದು ಉದಾಹರಣೆ. ಯುವಕರಿಗಂತೂ ಯೋಗ್ಯತೆಗಿಂತಲೂ ಲಂಚ ಕೊಟ್ಟು ಕೆಲಸಕ್ಕೆ ಸೇರುವ ಅನಿವಾರ್ಯತೆ ಹೆಚ್ಚಾಗುತ್ತಿದೆ. ಯುವಜನರು ಯೋಗ್ಯತೆ ಪಡೆದುಕೊಳ್ಳುವುದಕ್ಕಿಂತಲೂ ಹೆಚ್ಚು “ಏನಾದರೂ ಸರಿ, ಹಣ ಮಾಡುವ” ಅಡ್ಡದಾರಿಗಳಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಧಿಕಾರ ದುರುಪಯೋಗದಿಂದಾಗಿ ಉದ್ಯಮಿಗಳು, ಆಡಳಿತಾರೂಢರ ಲಾಭಕೋರರು ಎಲ್ಲೆಂದರಲ್ಲಿ ಆಡಳಿತದಲ್ಲಿ ಮೂಗುತೂರಿಸುತ್ತಿದ್ದಾರೆ. ಇವುಗಳಿಂದಾಗಿ ದೇಶದ ಆರ್ಥಿಕತೆ ಹಳ್ಳಹಿಡಿದಿದೆ.
ಇವೆಲ್ಲ ಸರಕಾರಕ್ಕೆ ಗೊತ್ತಿಲ್ಲ ಎಂದಲ್ಲ. ನೋಟು ಅಮಾನ್ಯೀಕರಣ, ಜಿಎಸ್ ಟಿ, ಡಿಜಿಟಲೈಜೇಷನ್ ಇವೆಲ್ಲ ಭ್ರಷ್ಟಾಚಾರವನ್ನು ನಿಯಂತ್ರಿಸುತ್ತವೆ ಎಂದು ಹೇಳಲಾಯಿತು. ಡಿಜಿಟಲೈಸೇಷನ್ ಒಂದು ಸ್ವಲ್ಪ ಭ್ರಷ್ಟಾಚರಕ್ಕೆ ಕಡಿವಾಣ ಹಾಕಿದೆ ಎನ್ನುವುದು ಬಿಟ್ಟರೆ ಬೇರೆಯೆಲ್ಲ ಕೇವಲ ಬಾಯಿಮಾತಿನಲ್ಲೇ ಉಳಿದುಬಿಟ್ಟವು. ಭ್ರಷ್ಟಾಚಾರ ತಡೆಯಲು ಭಾರತದಲ್ಲಿ ಹಲವು ಕಾನೂನುಗಳು ಜಾರಿಯಲ್ಲಿವೆಯಾದರೂ ಅವುಗಳ ಶಕ್ತಿ ಹಲ್ಲು ಕಿತ್ತ ನಾಗರದಂತೆ. ಭ್ರಷ್ಟಾಚಾರ ನಿರೋಧಕ ಕಾಯಿದೆ, ಲೋಕಪಾಲ್ ಮತ್ತು ಲೋಕಾಯುಕ್ತ ವ್ಯವಸ್ಥೆ, ಸಿಬಿಐ, ಇಡಿ, ಎಸಿಬಿ ಮೊದಲಾದ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದ ನಿಯಂತ್ರಣ ಮಾಡುವ ಬದಲು ಅಧಿಕಾರಕ್ಕಾಗಿ, ಸ್ವಹಿತ, ಸ್ವಪಕ್ಷಪಾತದಿಂದ ಹೊಸ ರೂಪದ ಭ್ರಷ್ಟಾಚಾರಕ್ಕೆ ಉದಾಹರಣೆ ನೀಡುತ್ತಿವೆ. ಕಾನೂನು ಇದ್ದರೂ ಅದರ ಪರಿಣಾಮಕಾರಿ ಅನುಷ್ಠಾನದಲ್ಲಿ ಅಡೆತಡೆಗಳೇ ಹೆಚ್ಚಾಗಿವೆ. ರಾಜಕೀಯ ಪ್ರಭಾವ, ಪ್ರಕರಣಗಳ ವಿಳಂಬ, ಸಾಕ್ಷ್ಯಗಳ ನಾಶ — ಇವೆಲ್ಲಾ ಭ್ರಷ್ಟರನ್ನು ರಕ್ಷಿಸುವ ಅಸ್ತ್ರಗಳಾಗಿವೆ.
ಡಿಜಿಟಲೀಕರಣದಿಂದ ಪಾರದರ್ಶಕತೆ – ಎಷ್ಟರ ಮಟ್ಟಿಗೆ?
ಡಿಜಿಟಲ್ ಇಂಡಿಯಾ, ಆನ್‌ಲೈನ್ ಸೇವೆಗಳು, DBT (Direct Benefit Transfer) ಮೂಲಕ ಸರ್ಕಾರ ಪಾರದರ್ಶಕತೆ ತರುವ ಪ್ರಯತ್ನ ಮಾಡಿದೆ.
ಕೆಲವು ಮಟ್ಟಿಗೆ ಲಂಚದ ಪ್ರಮಾಣ ಕಡಿಮೆಯಾಗಿದೆ. ಆದರೂ ದೊಡ್ಡ ಮಟ್ಟದ ಭ್ರಷ್ಟಾಚಾರ ಇನ್ನೂ ಜೀವಂತವಾಗಿಯೇ ಇದೆ. ಡಿಜಿಟಲ್ ವ್ಯವಸ್ಥೆಗಳನ್ನೇ ದುರುಪಯೋಗ ಮಾಡುವ ಹೊಸ ಮಾದರಿಯ ಭ್ರಷ್ಟಾಚಾರವೂ ಉದಯಿಸುತ್ತಿದೆ.
ಜನಜಾಗೃತಿ ಮತ್ತು ಮಾಧ್ಯಮದ ಪಾತ್ರ
ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಮತ್ತು ಜಾಗೃತ ನಾಗರಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಬಿಗ್ ಬ್ರೇಕಿಂಗ್ ಸುದ್ದಿಗಳು, ಸ್ಟಿಂಗ್ ಆಪರೇಷನ್‌ಗಳು, RTI ಅರ್ಜಿಗಳು ಅನೇಕ ಭ್ರಷ್ಟಾಚಾರಗಳನ್ನು ಬಯಲು ಮಾಡಿವೆ. ಆದರೆ, ಸತ್ಯ ಅನಾವರಣ ಮಾಡಿದವರೇ ಅನೇಕ ಬಾರಿ ಬೆದರಿಕೆ, ದೌರ್ಜನ್ಯ ಮತ್ತು ಒತ್ತಡಕ್ಕೆ ಒಳಗಾಗುತ್ತಿರುವುದು ದುಃಖಕರ ಸಂಗತಿ.
ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಯಂತ್ರಣ ದಿನ – ಕೇವಲ ಆಚರಣೆಯಲ್ಲ, ಆತ್ಮಪರಿಶೀಲನೆಯ ದಿನ
ಡಿಸೆಂಬರ್ 9 ಕೇವಲ ಒಂದು “ದಿನ”ವಾಗದೆ, ಪ್ರತಿ ನಾಗರಿಕ ತನ್ನ ಜವಾಬ್ದಾರಿಯನ್ನು ನೆನಪಿಸದೇ ಇರಲು ಸಾಧ್ಯವಿಲ್ಲದ ದಿನವಾಗಬೇಕು.
ಭ್ರಷ್ಟಾಚಾರ ವಿರೋಧಿ ಹೋರಾಟ ಸರ್ಕಾರದ ಹೊಣೆ ಮಾತ್ರವಲ್ಲ —
* ಲಂಚ ಕೊಡುವುದನ್ನೂ ನಿರಾಕರಿಸುವುದು
* ತಪ್ಪನ್ನು ಕಂಡರೆ ಮೌನವಾಗದಿರುವುದು
* ನ್ಯಾಯ ಮತ್ತು ಪಾರದರ್ಶಕತೆಯನ್ನು ಬೇಡುವುದು.
ಈ ಎಲ್ಲವೂ ಪ್ರತಿ ಭಾರತೀಯನ ಕರ್ತವ್ಯ.
