ಮೈಸೂರು : ಈ ವರ್ಷದ ಮಾನ್ಸೂನ್ ಚುರುಕಾಗಿದ್ದು, ರಾಜ್ಯದ 1763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಅಲ್ಲದೆ, ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಪ್ರತಿಯೊಂದು ಸಮಸ್ಯಾತ್ಮಕ ಪಂಚಾಯತ್ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೈಸೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ ಈ ವರ್ಷದ ಮಾನ್ಸೂನ್‌ನಲ್ಲಿ ರಾಜ್ಯದ 1763 ಗ್ರಾಮಗಳಲ್ಲಿ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಅವರ ಜಿಲ್ಲೆಯ ಯಾವ ಭಾಗದ ಯಾವ ಗ್ರಾಮದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಗಳ ಸಂಭವನೀಯ ಪಟ್ಟಿ ನೀಡಲಾಗಿದೆ.
ಅಲ್ಲದೆ, ಪ್ರತಿಯೊಂದು ವಾರವೂ ಅವರಿಗೆ ಮುಂದಿನ 7 ರಿಂದ 9 ದಿನಗಳ ವರೆಗಿನ ಹವಾಮಾನ ವರದಿಯನ್ನೂ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಈ ಮಾಹಿತಿಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪ್ರತಿಯೊಂದು ಸಮಸ್ಯಾತ್ಮಕ ಗ್ರಾಮ ಪಂಚಾಯಿತಿಯಲ್ಲೂ ಅಧಿಕಾರಿಗಳ ಟಾಸ್ಕ್‌ಫೋರ್ಸ್ ರಚಿಸಿ ಮುನ್ನೆಚ್ಚರಿಕಾ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.
ನಾಡಿನ ಯಾವುದೇ ಭಾಗದಲ್ಲಿ ಸಮಸ್ಯೆ ಕಂಡು ಬಂದ ನಂತರ ಸರ್ಕಾರ ಪರಿಹಾರ ಕ್ರಮ ಜರುಗಿಸುವುದು ಸಾಮಾನ್ಯ. ಆದರೆ, ಸಮಸ್ಯೆ ಕಂಡು ಬರುವ ಮುನ್ನೆಚ್ಚರಿಕೆ ಕ್ರಮ ಜರುಗಿಸುವುದು ಹಾಗೂ ಜನ-ಜಾನುವಾರುಗಳ ಜೀವಗಳನ್ನು ಉಳಿಸುವುದು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಟಾಸ್ಕ್‌ಫೋರ್ಸ್ ರಚನೆಗೆ ಮುಂದಾಗಿದ್ದು, ಈ ಟಾಸ್ಕ್‌ಫೋರ್ಸ್‌ನಲ್ಲಿ ಕಂದಾಯ ಇಲಾಖೆ ನೌಕರರು, ಪಂಚಾಯತ್ ರಾಜ್ ಇಂಜಿನಯರ್ ವಿಭಾಗ, ಅಗ್ನಿಶಾಮಕ ವಿಭಾಗ, ಪೊಲೀಸ್ ಇಲಾಖೆ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳು ಇರಲಿದ್ದಾರೆ. ಈ ತಂಡಕ್ಕೆ ವಿಕೋಪ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದ್ದು, ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿಯೂ ನೇಮಕ ಮಾಡಲಾಗುವುದು. ಈ ತಂಡ ಪ್ರವಾಹ ಉಂಟಾಗಬಹುದಾದ ಗ್ರಾಮಗಳಿಗೆ ತತಕ್ಷಣ ಭೇಟಿ ನೀಡಿ ಡ್ರಿಲ್ ನಡೆಸಬೇಕು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಟಾಸ್ಕ್‌ಫೋರ್ಸ್‌ಗೆ ಏನೆಲ್ಲಾ ಅಧಿಕಾರ? :
ಯಾವುದೇ ಗ್ರಾಮದಲ್ಲಿ ಸತತ ಎರಡು-ಮೂರು ದಿನಕ್ಕೂ ಹೆಚ್ಚು ಮಳೆ ಬರುವ ಸಾಧ್ಯತೆ ಕಂಡುಬಂದಲ್ಲಿ ಟಾಸ್ಕ್‌ಫೋರ್ಸ್ ಅಂತಹ ಗ್ರಾಮಕ್ಕೆ ತೆರಳಿ ಮೊಕ್ಕಾಂ ಹೂಡಬೇಕು. ಪರಿಸ್ಥಿತಿಗೆ ತಕ್ಕಂತೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಪ್ರವಾಹ ಕಾರಣಕ್ಕೆ ಅಪಾಯ ಕಂಡುಬರುವ ಸಾಧ್ಯತೆ ಇದ್ದರೆ, ಹಳ್ಳ ಕಾಲಸಂಕ, ಸೇತುವೆ ಸೇರಿದಂತೆ ಯಾವುದೇ ಭಾಗಕ್ಕೆ ಜನರಿಗೆ ನಿರ್ಬಂಧ ಹೇರುವ ಅಧಿಕಾರ ಟಾಸ್ಕಕಪೋರ್ಸ್‌ಗೆ ಇರಲಿದೆ. ಇದರ ಜೊತೆಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಮಳೆಗೆ ಕುಸಿಯಬಹುದಾದ ಮನೆಗಳನ್ನು ಗುರುತಿಸಿ ಅಂತಹ ಮನೆಗಳಿಂದ ಜನರನ್ನು ಖಾಲಿ ಮಾಡಿಸುವ ಅಧಿಕಾರವನ್ನೂ ಟಾಸ್ಕ್‌ಫೋರ್ಸ್ ತಂಡಕ್ಕೆ ನೀಡಲಾಗಿದೆ.
ಅನಾಹುತಗಳು ಸಂಭವಿಸುವ ಮೊದಲೇ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಟಾಸ್ಕ್‌ಫೋರ್ಸ್‌ಗೆ ನೀಡಲಾಗಿದ್ದು, ಸಾರ್ವಜನಿಕರು ಈ ನಿರ್ಧಾರಕ್ಕೆ ಸಹಕರಿಸಬೇಕು. ಟಾಸ್ಕ್‌ಫೊರ್ಸ್ ಜೊತೆ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿರಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು.
ಕಾಳಜಿ ಕೇಂದ್ರಗಳ ರಚನೆಗೆ ಸೂಚನೆ :
ಪ್ರವಾಹ ಸಾಧ್ಯತೆ ಇರುವ ತಾಲೂಕುಗಳಲ್ಲಿ ಶೀಘ್ರ ಕಾಳಜಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಮುಂಜಾಗರೂಕತೆಯ ಕ್ರಮವಾಗಿ ಸ್ಥಳ ಗುರುತಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಪಿ.ಡಿ. ಖಾತೆಗಳಲ್ಲಿ ಈಗಾಗಲೇ 787 ಕೋಟಿ ರೂ. ಹಣ ಇದ್ದು, ಈ ಹಣವನ್ನು ಪರಿಹಾರ ಹಾಗೂ ಕಾಳಜಿ ಕೇಂದ್ರಗಳ ಸ್ಥಾಪನೆಗೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಅಗತ್ಯವಿದ್ದರೆ ರಾಜ್ಯ ಸರ್ಕಾರ ಮತ್ತಷ್ಟು ಹಣ ನೀಡಲು ಸಿದ್ದವಿದೆ ಎಂದೂ ಸಚಿವರು ಮಾಹಿತಿ ನೀಡಿದರು.
ವಿವಿಧ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ದಳದ ತುಕಡಿ ಮೊಕ್ಕಾಂ :
ಪ್ರವಾಹ ಸ್ಥಿತಿ ನಿಯಂತ್ರಣಕ್ಕಾಗಿ ಈಗಾಗಲೇ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತುಕಡಿ ಮೊಕ್ಕಾಂ ಹೂಡಿದೆ. ರಾಯಚೂರಿನಲ್ಲೂ ಒಂದು ತುಕಡಿಯನ್ನು ನಿಯೋಜಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಬೆಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ರಾಜ್ಯ ವಿಪತ್ತು ದಳದ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು
ಅಲ್ಲದೆ, ಅತಿವೃಷ್ಟಿಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿಯಂತ್ರಿಸಲು ಮುಂಜಾಗ್ರತೆ ವಹಿಸಲಾಗಿದೆ. ಜನ ಜಾನುವಾರು ಪ್ರಾಣ ಹಾಗೂ ಜನರ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುವ ಸರ್ಕಾರ ಏನೆಲ್ಲಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕೋ ಆ ಎಲ್ಲಾ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದರು.
ಬಗರ್‌ಹುಕುಂ ಅರ್ಜಿ ವಿಲೇಗೆ ಗಡುವು..! :
ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ತಹಶೀಲ್ದಾರರಿಗೆ 8 ತಿಂಗಳ ಗಡುವು ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಬಡ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಕ್ರಮ ಸಾಗುವಳಿಯ ಸಕ್ರಮೀಕರಣಕ್ಕಾಗಿ ಬಗರ್‌ಹುಕುಂ ಅಡಿ ರಾಜ್ಯ ಸರ್ಕಾರ ಅರ್ಜಿ ಸ್ವೀಕರಿಸಿದೆ. ಲಕ್ಷಾಂತರ ಅರ್ಜಿಗಳು ಈಗಾಗಲೇ ಸಲ್ಲಿಕೆಯಾಗಿದ್ದು, ಈ ಎಲ್ಲಾ ಅರ್ಜಿಗಳನ್ನು ಮುಂದಿನ 8 ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.
ರಾಜ್ಯಾದ್ಯಂತ 163 ಕ್ಷೇತ್ರಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲಾಗಿದೆ. ಜುಲೈ ತಿಂಗಳಿಂದ ಆರಂಭಿಸಿ ಪ್ರತಿ ತಿಂಗಳೂ ತಾಲೂಕವಾರು ತಿಂಗಳಿಗೆ ಇಷ್ಟು ಅರ್ಜಿ ವಿಲೇಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ಗೆ ಸೂಚಿಸಬೇಕು. ಶಾಸಕರ ನೇತೃತ್ವದ ಸಮಿತಿಯಲ್ಲಿ ತಹಶೀಲ್ದಾರರು ಈ ಎಲ್ಲಾ ಅರ್ಜಿಗಳಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅವರಿಗೆ ಆ ಜಾಗದ ಕಳೆದ 10 ವರ್ಷದ ಸ್ಯಾಟಲೈಟ್ ಇಮೇಜ್ ಒದಗಿಸಲಾಗುವುದು. ಇದರ ಆಧಾರದಲ್ಲಿ ಸಾಗುವಳಿ ಬಗ್ಗೆ ಖಾತರಿ ಪಡಿಸಿಕೊಂಡು, ಬೋಗಸ್ ಅರ್ಜಿಗಳಿಗೆ ಅವಕಾಶ ನೀಡದಂತೆ ಅರ್ಹ ರೈತರಿಗೆ ಭೂ ಮಂಜೂರು ಮಾಡಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಬಡ ರೈತರಿಗೆ ಶೇ.100 ನೆಮ್ಮದಿ ನೀಡಬೇಕು ಮುಂದಿನ ದಿನಗಳಲ್ಲಿ ಅವರ ದಾಖಲೆಗಳ ಬಗ್ಗೆ ಸಾಸಿವೆ ಕಾಳಿನಷ್ಟೂ ಅನುಮಾನ ಇರಬಾರದು, ಕೋರ್ಟ್ ಕಚೇರಿ ಸುತ್ತುವಂತೆ ಆಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಗರ್ ಹುಕುಂ ಜಮೀನನ್ನು ದುರಸ್ಥಿಗೊಳಿಸಿ ಹೊಸ ಹಿಸ್ಸಾ ನಂಬರ್ ಜೊತೆಗೆ ಸಾಗುವಳಿ ಚೀಟಿಯನ್ನು ಡಿಜಿಟಲೀಕರಣ ಗೊಳಿಸಿ ನೀಡಬೇಕು ಹಾಗೂ ಭೂಮಿಯನ್ನು ಕ್ರಮ (ರಿಜಿಸ್ಟರ್) ಮಾಡಿ ರೈತರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ…! :
ರಾಜ್ಯದಾದ್ಯಂತ ಸುಮಾರು 4 ಕೋಟಿ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಮೈಸೂರು ವಿಭಾಗದಲ್ಲಿ 1.37 ಕೋಟಿ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 36 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 35 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಇದೇ ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್, ಇನ್ಪುಟ್ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಸಾರ್ವಜನಿಕರೂ ಸಹ ತನಮ್ಮ ಜಮೀನಿನ ಮಾಲೀಕತ್ವಕ್ಕೆ ಭದ್ರತೆ ಅಗತ್ಯವಿದ್ದರೆ ಅಭಿಯಾನಕ್ಕೆ ರೈತರು ಮುಂದೆ ಬಂದು ಸಹಕಾರ ನೀಡಬೇಕು. ಇದರ ಮೂಲಕ ನಕಲಿ ವ್ಯವಹಾರ ಆಗುವುದನ್ನು ತಡೆಯಬಹುದು. ಜಮೀನಿನ ಮಾಲೀಕತ್ವಕ್ಕೆ ನೆಮ್ಮದಿಯ ಗ್ಯಾರಂಟಿ ನೀಡಬಹುದು ಎಂದು ಅವರು ಕರೆ ನೀಡಿದರು.
ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನ :
ರಾಜ್ಯದಲ್ಲಿ ಶೀಘ್ರ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, “ರಾಜ್ಯದಲ್ಲಿ 22 ಲಕ್ಷ ಖಾಸಗಿ ಆರ್‌ಟಿಸಿ ಗಳಿಗೆ ಪೋಡಿ ಆಗಿಲ್ಲ. ಪ್ರತಿಯೊಂದು ಆರ್‌ಟಿಸಿಯಲ್ಲಿ ಮೂರು ರಿಂದ ನಾಲ್ಕು ಜನ ಆರ್‌ಟಿಸಿ ಮಾಲೀಕರು ಇರುತ್ತಾರೆ. ಈ ಜಮೀನುಗಳ ಪೋಡಿ ಆಗಿಲ್ಲ. ಇನ್ನೂ ಸರ್ಕಾರಿಂದ ಭೂ ಮಂಜೂರಾದವ ಜಮೀನುಗಳೂ ಪೋಡಿ ಆಗಿಲ್ಲ. ಹೀಗಾಗಿ ಪೋಡಿ ಮುಕ್ತ ಅಭಿಯಾನದ ಅಡಿಯಲ್ಲಿ ಇಂತಹ ಜನರನ್ನು ನಾವೇ ಗುರುತಿಸಿ ಸರ್ಕಾರದಿಂದ ನಾವೇ ಪೋಡಿ ಮಾಡಿಕೊಡಲಿದ್ದೇವೆ. ಕೇಸ್ ಬೈ ಕೇಸ್ ಮಾಡುವುದರಿಂದ ಬಡವರಿಗೆ ಅನುಕೂಲವಾಗಲ್ಲ. ಹೀಗಾಗಿ ಪೋಡಿ ಮುಕ್ತ ಗ್ರಾಮಗಳ ಉದ್ದೇಶದಿಂದ ಆಯವ್ಯಯದಲ್ಲಿ ಘೋಷಿಸಿದಂತೆ ಪೋಡಿಮುಕ್ತ ಅಭಿಯಾನಕ್ಕೆ ಶೀಘ್ರವೇ ಚಾಲನೇ ನೀಡಲಾಗುವುದು
ಗ್ರಾಮ ಲೆಕ್ಕಿಗರು 1,000 ಹಾಗೂ 750 ಜನ ಸರ್ವೇಯರ್ ಭರ್ತಿ:
ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಬಹು ಮಾಲೀಕತ್ವದ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.
ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು :
ಸಭೆಯಲ್ಲಿ ಆಧಾರ್-ಆರ್‌ಟಿಸಿ ಜೋಡಣೆ ಕೆಲಸದಲ್ಲಿ ಮಂದಗತಿಯಿಂದ ಮುಂದುವರೆಯುತ್ತಿದ್ದ ತರಿಕರೆ, ಕಡೂರು ಹಾಗೂ ಕೆಆರ್ ನಗರ ತಹಶೀಲ್ದಾರ್ ರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಕಟುವಾಗಿ ಎಚ್ಚರಿಸಿದರು.
ಸಭೆಯಲ್ಲೇ ಅಧಿಕಾರಿಗಳ ಚಳಿ ಬಿಡಿಸಿದ ಅವರು, “ರೈತರ ಆಸ್ತಿಗಳು ನಕಲು ಆಗಬಾರದು ಅವರಿಗೆ ನೆಮ್ಮದಿಯ ಮಾಲೀಕತ್ವ ನೀಡಬೇಕು ಎಂಬ ಕಾರಣಕ್ಕೆ ಆಧಾರ್ ಸೀಡಿಂಗ್ ನಡೆಸಲಾಗುತ್ತಿದೆ. ಆದರೆ, ನಿಮ್ಮ ಸೋಮಾರಿ ತನದಿಂದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನಿರೀಕ್ಷಿತ ವೇಗ ತಲುಪಬೇಕಿದೆ. ಹೀಗಾಗಿ ಜುಲೈ ಅಂತ್ಯದೊಳಗೆ ಶೇ.90ರಷ್ಟು ಆಧಾರ್ ಸೀಡಿಂಗೆ ಕೆಲಸ ಮುಗಿಸಬೇಕು” ಎಂದು ಅವರು ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.
ಸರ್ಕಾರಿ ಭೂಮಿ ಬೀಟ್ ಸಿಸ್ಟಂಗೆ ಒತ್ತು :
ತಹಶೀಲ್ದಾರರು ಅವರ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ತಹಶೀಲ್ದಾರರು ತಾಲೂಕು ಮಟ್ಟದ ದಂಡಾಧಿಕಾರಿಗಳೂ ಆಗಿದ್ದು, ಸರ್ಕಾರಿ ಜಮೀನನ್ನು ಉಳಿಸುವ ನಿಟ್ಟಿನಲ್ಲಿ “ಬೀಟ್ ಸಿಸ್ಟಂ” ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸರ್ಕಾರಿ ಜಮೀನುಗಳನ್ನು ಉಳಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಖಡಕ್ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ “ಬೀಟ್ ಸಿಸ್ಟಂ ಆ್ಯಪ್”ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಆ್ಯಪ್ ಮೂಲಕ ಈಗಾಗಲೇ ಶೇ.70 ರಷ್ಟು ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಶೀಘ್ರ ಶೇ.100 ರಷ್ಟು ಜಮೀನನ್ನೂ ಗುರುತಿಸಬೇಕು. ತಹಶೀಲ್ದಾರರೇ ಮುಂದೆ ನಿಂತು ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಶುರು ಮಾಡಬೇಕು ಎಂದರು.
ಅಲ್ಲದೆ, ಹಲವು ಕಡೆಗಳಲ್ಲಿ ಕೆರೆ ಮತ್ತು ಸ್ಮಶಾನ ಜಾಗಗಳನ್ನೇ ಒತ್ತುವರಿ ಮಾಡಲಾಗಿದೆ. ಇಂತಹ ಎಲ್ಲಾ ಜಮೀನಿನಲ್ಲೂ ಒತ್ತುವರಿ ತೆರವುಗೊಳಿಸಬೇಕು, ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರಿ ಜಮೀನಿಗೆ ಬೀಟ್ ಹಾಕಬೇಕು. ಆ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು” ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು






