ಹಾವೇರಿ (ಶಿಗ್ಗಾವಿ): “17 ವರ್ಷಗಳ ಕಾಲ ಶಿಗ್ಗಾವಿಯನ್ನು ಪ್ರತಿನಿಧಿಸಿ, ರಾಜ್ಯದ ಮುಖ್ಯಮಂತ್ರಿಯಾದರೂ ಯಾವುದೇ ಸಾಕ್ಷಿಗುಡ್ಡೆಗಳನ್ನು ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಜನತೆಗೆ ನೀಡಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಂತೆ ಒಂದೇ ಒಂದು ಗುರುತರವಾದ ಯೋಜನೆಗಳನ್ನು ಅವರು ಜಾರಿಗೊಳಿಸಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತರಾಟೆ ತೆಗೆದುಕೊಂಡರು.
ಶಿಗ್ಗಾವಿ ಉಪಚುನಾವಣೆ ಅಂಗವಾಗಿ ಕ್ಷೇತ್ರದ ದುಂಡಸಿಯಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬೊಮ್ಮಾಯಿ ಅವರ ನಡೆಯ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ಬಸವರಾಜ ಬೊಮ್ಮಾಯಿ ಅವರೇ ನೀವು ಎರಡೂವರೆ ವರ್ಷಗಳ ಕಾಲ ಸಿಎಂ ಆಗಿದ್ದಿರಿ, ಜೊತೆಗೆ ಕೇಂದ್ರದಲ್ಲಿಯೂ ನಿಮ್ಮ ಸರ್ಕಾರ ಅಧಿಕಾರದಲ್ಲಿತ್ತು. ಅಧಿಕಾರ ಇದ್ದರೂ ನಿಮ್ಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು? ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದೀರಿ?” ಎಂದು ಪ್ರಶ್ನಿಸಿದರು.
ಮಹದಾಯಿಗೆ ಅನುಮತಿ ಕೊಡಿಸಲಿಲ್ಲ :
“ಬೊಮ್ಮಾಯಿ ಅವರು ಮಹದಾಯಿ ಯೋಜನೆಗೆ ಅನುಮತಿ ಸಿಕ್ಕೇಬಿಟ್ಟಿತು ಎಂದು ಪಟಾಕಿ ಹೊಡೆದು ಸಂಭ್ರಮಿಸಿದರು. ಆದರೆ ಇದಕ್ಕೆ ಕೇಂದ್ರ ಪರಿಸರ ಇಲಾಖೆಯವರು ಇನ್ನೂ ಅನುಮತಿ ಕೊಟ್ಟಿಲ್ಲ. ಬಿಜೆಪಿಯಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು. ಇದುವರೆಗೂ ಸಾಮಾನ್ಯ ಜನರ ಬದುಕಿಗೆ ಯಾವ ಸಹಾಯವನ್ನೂ ಬಿಜೆಪಿ ಮಾಡಿಲ್ಲ” ಎಂದರು.
“ಶಿಗ್ಗಾವಿ ಪಕ್ಕದ ಸೊರಬ ಕ್ಷೇತ್ರದಿಂದ ಬಂಗಾರಪ್ಪ ಅವರು ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ಆರಾಧನಾ, ಆಶ್ರಯ, ವಿಶ್ವ – ಹೀಗೆ ಹಲವಾರು ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತರ ಪಂಪಸೆಟ್ ಗೆ ಉಚಿತ ವಿದ್ಯುತ್ ಯೋಜನೆ ಕೊಟ್ಟರು” ಎಂದು ತಿಳಿಸಿದರು.
“ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಗರ್ ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ಇಂದಿರಾ ಗಾಂಧಿ ಅವರು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ಸಾಲ ಪಡೆದು ಹೆಚ್ಚು ಬಡ್ಡಿಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದ ಜನರನ್ನು ಕಾಪಾಡಿದರು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು” ಎಂದರು.
“ಎಸ್.ಎಂ.ಕೃಷ್ಣ ಅವರು ಮಕ್ಕಳಿಗೆ ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿದರು. ನಾವು 2023 ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದೆವು. ಏಕೆಂದರೆ ಬಿಜೆಪಿಯ ದುರಾಡಳಿತದಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಆದ ಕಾರಣಕ್ಕೆ ನಾವು ಮಹಿಳೆಯರ ಅಭಿಪ್ರಾಯ ಪಡೆದು ಶಕ್ರಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಎನ್ನುವ ಐದು ಗ್ಯಾರಂಟಿಗಳನ್ನು ಮನೆ, ಮನೆಗೆ ಮುಟ್ಟಿಸುತ್ತಿದ್ದೇವೆ” ಎಂದರು.
ಕಾಂಗ್ರೆಸ್ ಯಿಂದ ರೈತರ ಸಾಲಮನ್ನಾ :
“ಮನಮೋಹನ್ ಸಿಂಗ್ ಅವರು ಸಾಲ ಮನ್ನಾ ಮಾಡಿದ್ದರು. 2013 ರ ಸರ್ಕಾರದಲ್ಲಿ ಸಹಕಾರಿ ಸಂಘಗಳಲ್ಲಿದ್ದ ರೈತರ 50 ಸಾವಿರ ಸಾಲಮನ್ನಾ ಮಾಡಲಾಯಿತು. ಕೊರೋನಾ ಸಮಯದಲ್ಲಿ ಯಾವ ಕಾರ್ಮಿಕರಿಗೂ ಹಣ ಸಹಾಯ ಮಾಡಲಿಲ್ಲ. ಜನರ ಆರ್ಥಿಕ ಶಕ್ತಿ ಗಟ್ಟಿಗೊಳಿಸಲು ಕಾಂಗ್ರೆಸ್ ದ ಕೆಲಸ ಮಾಡುತ್ತಿದೆ” ಎಂದರು.
ಬೊಮ್ಮಾಯಿ ಸ್ಥಿತಿ ಶೋಚನೀಯ :
“ಬಸವರಾಜ ಬೊಮ್ಮಾಯಿ ಅವರ ತಂದೆಯವರು ಮುಖ್ಯಮಂತ್ರಿಗಳಾಗಿದ್ದರು. ಬೊಮ್ಮಯಿ ಅವರು ಮುಖ್ಯಮಂತ್ರಿಗಳಾದರು. ಈಗ ಕ್ಷೇತ್ರದ ಟಿಕೆಟ್ ಅನ್ನು ಕಾರ್ಯಕರ್ತರಿಗೆ ಕೊಡುತ್ತೇನೆ ಎಂದು ಹೇಳಿ ತಮ್ಮ ಮಗನಿಗೆ ಕೊಡಿಸಿದ್ದಾರೆ ಎಂದು ನಾನು ಮಾಧ್ಯಮಗಳಲ್ಲಿ ಓದಿದ್ದೆ. ಯಾರಿಗೋ ಹೆಣ್ಣು ನೋಡಲು ಹೋಗಿ ತಾನೇ ಮದುವೆ ಆದನಂತೆ. ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಅದೇ ರೀತಿ ಆಗಿದೆ” ಎಂದರು.
ಶಿಗ್ಗಾವಿ ಜನರ ಸೇವೆಗೆ ಪಠಾಣ್ ಇರಲಿ :
“ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಉಪಕಾರ ಸ್ಮರಣೆ ಇರುವ ಅಭ್ಯರ್ಥಿ. ಅವರನ್ನು ನೀವು ವಿಧಾನಸಭೆಗೆ ಕಳುಹಿಸಬೇಕು. ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಇರಲಿ, ನಿಮ್ಮ ಸೇವಗೆ ಪಠಾಣ್ ಇರಲಿ. ಮುಂದೆಯೂ ಕಾಂಗ್ರೆಸ್ ಸರ್ಕಾರ ಇರಲಿದ್ದು, ನಿಮ್ಮ ಎಲ್ಲಾ ಕೆಲಸಗಳನ್ನು ಈಡೇರಿಸುತ್ತೇವೆ” ಎಂದರು.
“ಬಿಜೆಪಿಯಿಂದ ಟಿಕೆಟ್ ಗಾಗಿ ಮೂರ್ನಾಲ್ಕು ಜನ ಮಾತ್ರ ಅರ್ಜಿ ಹಾಕಿದ್ದರು. ಕಾಂಗ್ರೆಸ್ ಪಕ್ಷದಿಂದ ಹತ್ತು ಮಂದಿ ಅರ್ಜಿ ಹಾಕಿದ್ದರು. ಏಕೆಂದರೆ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಉತ್ತಮ ಮತಗಳು ಬಂದಿದ್ದವು. ನಮ್ಮ ಅಭ್ಯರ್ಥಿ 7 ಸಾವಿರ ಮತಗಳ ಅಂತರದಿಂದ ಮಾತ್ರ ಸೋತರು. ಆದರೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ” ಎಂದರು.
“ಕ್ಷೇತ್ರದಲ್ಲಿ ಘಟಾನುಘಟಿ ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಒಬ್ಬೊಬ್ಬರಿಗೂ ನೂರಾರು ಮತಗಳನ್ನು ಸೆಳೆಯುವ ಶಕ್ತಿಯಿದೆ. ಬಿಜೆಪಿ ಮುಂದಿನ ದಿನಗಳಲ್ಲಿ ಇರುವುದಿಲ್ಲ ಎನ್ನುವುದು ಅರ್ಥವಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ” ಎಂದರು.
“ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ನಿಲ್ಲಿಸುವುದಿಲ್ಲ. ನಮ್ಮ ಪಂಚ ಗ್ಯಾರಂಟಿಗಳು ನೇರವಾಗಿ ಜನರಿಗೆ ತಲುಪುತ್ತಿವೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ಜನರು ಅಧಿಕಾರಕ್ಕೆ ಬಂದಂತೆ” ಎಂದರು.
ಬೊಮ್ಮಾಯಿ ಭೇಟಿಗೆ ಏಜೆಂಟ್ ಗಳು ಬೇಕಂತೆ :
“ನಾವು ಯಾವುದೇ ಜಾತಿ ಮತಗಳನ್ನು ನೋಡದೆ ಯೋಜನೆಗಳನ್ನು ನೀಡುತ್ತಿದ್ದೇವೆ. ಬಿಜೆಪಿ ಪಕ್ಷಕ್ಕೆ ಮತ ಹಾಕಿದವರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಕ್ಷೇತ್ರದ ಜನರಿಗೆ ಸಾಧ್ಯವಾಗುತ್ತಿಲ್ಲ. ಭೇಟಿ ಮಾಡಬೇಕು ಎಂದರೆ ಏಜೆಂಟ್ ಅಥವಾ ಮುಖಂಡರು ಜೊತೆಯಲ್ಲಿ ಇರಬೇಕಂತೆ. ನಮ್ಮನ್ನು ಭೇಟಿಯಾಗಲು ಯಾರೂ ಬೇಡ. ಯಾಸಿರ್ ಪಠಾಣ್ ಗೆದ್ದರೆ ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆ ಮಾಡುತ್ತಾರೆ” ಎಂದು ಹೇಳಿದರು.
“ಶಿಗ್ಗಾವಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ 60 ಕೋಟಿ ಕೊಟ್ಟಿದ್ದೇವೆ. ಇತರೇ ಕ್ಷೇತ್ರಗಳ ಅಭಿವೃದ್ದಿಗೆ 100 ಕೋಟಿ ವಿಶೇಷ ಅನುದಾನ ನೀಡಲಾಗಿದೆ. ದುಂಡಸಿ ಗ್ರಾಮದಲ್ಲಿ ಹರಿಯುವ ಬೆಣ್ಣೆಹಳ್ಳಕ್ಕೆ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಇದರಿಂದ 16 ಟಿಎಂಸಿಯಷ್ಟು ನೀರು ಸಂಗ್ರವಾಗುತ್ತಿದೆ. ಈ ಕೆಲಸವನ್ನು ಈ ಹಿಂದೆ ನೀರಾವರಿ ಸಚಿವರಾಗಿದ್ದ ಬೊಮ್ಮಾಯಿ ಅವರು ಮಾಡಬೇಕಾಗಿತ್ತು. ಆದರೆ, ನಮ್ಮ ಸರ್ಕಾರ ಮಾಡಿದೆ. ಸೇವಾಲಾಲ್ ಜಯಂತಿ ಆಚರಣೆ ಪ್ರಾರಂಭ ಮಾಡಿದ್ದು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಸರ್ಕಾರ” ಎಂದರು.
ಮೊಮ್ಮಗನ ಬಗ್ಗೆ ದೇವೇಗೌಡರಿಗೆ ಕಣ್ಣಲ್ಲಿ ನೀರು ಬರಲಿಲ್ಲ ಚನ್ನಪಟ್ಟಣದ ಚುನಾವಣಾ ಪ್ರಚಾರದ ಬಗ್ಗೆ ಕೇಳಿದಾಗ,“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರದಂದು ದೇವೇಗೌಡರ ಇಬ್ಬಗೆಯ ನೀತಿ ಬಗ್ಗೆ ಹೇಳಿದ್ದಾರೆ. ಒನ್ನೊಬ್ಬ ಮೊಮ್ಮಗ ಏನೋ ಮಾಡಿದಾಗ ಕಣ್ಣಲ್ಲಿ ನೀರು ಬರಲಿಲ್ಲ. ಆದರೆ ಈಗ?. ದೊಡ್ಡವರಾದ ಕಾರಣ ಅವರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.
“ದೇವೇಗೌಡರು ಈ ನಾಡಿನ ಹಿರಿಯ ರಾಜಕಾರಣಿ. ಅವರ ಬಗ್ಗೆ ಅಪಾರವಾದ ಗೌರವವಿದೆ. ನಾನೇನಾದರೂ ಲೂಟಿ ಮಾಡಿದ್ದರೆ ನನ್ನ ಕ್ಷೇತ್ರದ ಜನರು 1 ಲಕ್ಷದ 23 ಸಾವಿರ ಮತಗಳ ಅಂತರದಿಂದ 8 ಬಾರಿ ನನ್ನ ಆಯ್ಕೆ ಮಾಡುತ್ತಿದ್ದಾರಾ? ದೇವೇಗೌಡರ ಸುಪುತ್ರ ಕುಮಾರಸ್ವಾಮಿ ಅವರ ವಿರುದ್ದವೂ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ನನಗೆ ದೇವರು ಇದ್ದಂತೆ. ಅವರ ಬದುಕಿನಲ್ಲಿ ಬದಲಾವಣೆ ತರಲು ಶ್ರಮ ಪಡುತ್ತಾ ಇದ್ದೇನೆ” ಎಂದು ಹೇಳಿದರು.
ಮಹಾರಾಷ್ಟ್ರದ ಮಹಾಯುತಿ ನಾಯಕರಿಗೆ ವಿಶೇಷ ಬಸ್, ವಿಮಾನ ಆಯೋಜಿಸುವೆ :
“ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಮಹಾರಾಷ್ಟ್ರದಲ್ಲಿ ಆಡಳಿತರೂಡಾ ಪಕ್ಷಗಳು ಸುಳ್ಳು ಹೇಳುತ್ತಿವೆ. ಅಲ್ಲಿನ ಮಹಾಯುತಿ ಸರ್ಕಾರದ ಬಿಜೆಪಿ, ಶಿವಸೇನಾ (ಶಿಂಧೆ ಬಣ) ಎನ್ ಸಿಪಿ (ಅಜಿತ್ ಪವಾರ್ ಬಣ) ಎಂಎಲ್ ಎಗಳಿಗೆ ಕರ್ನಾಟಕಕ್ಕೆ ಭೇಟಿ ಮಾಡಲು ಬಸ್ ಅಥವಾ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತೇನೆ. ಅವರುಗಳು ಇಲ್ಲಿಗೆ ನೇರವಾಗಿ ಬಂದು ಜನರನ್ನು ಕೇಳಬಹುದು. ಜೊತೆಗೆ ಬಿಜೆಪಿ ಕಾರ್ಯಕರ್ತರ ಬಳಿಯೂ ಅಭಿಪ್ರಾಯ ತಿಳಿದುಕೊಳ್ಳಬಹುದು” ಎಂದು ಸವಾಲು ಹಾಕಿದರು.
“1.29 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಹಣ 2 ಸಾವಿರ ಹಣ ಬರುತ್ತಿದೆ. ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 50- 52 ಸಾವಿರ ಕೋಟಿ ಹಣ ಗ್ಯಾರಂಟಿಗಳಿಗೆ ಎಂದು ಮೀಸಲಿಡಲಾಗಿದೆ” ಎಂದರು.
“ನಮ್ಮ ಸಾಧನೆ ಬಗ್ಗೆ ಮಹಾರಾಷ್ಟದಲ್ಲಿ ಜಾಹೀರಾತು ನೀಡುತ್ತೇವೆ. ಮಹಾಯುತಿ ನಾಯಕರೆಲ್ಲಾ ಸುಳ್ಳುಗಾರರು. ಕರ್ನಾಟಕ ಮಾಡೆಲ್ ಇಡೀ ದೇಶಕ್ಕೆ ಮಾದರಿಯಾಗಿದೆ. ಇದು ಬಸವಣ್ಣನ ನಾಡು. ನಾವು ನುಡಿದಂತೆ ನಡೆಯುತ್ತೇವೆ, ನಡೆಯುತ್ತಿದ್ದೇವೆ” ಎಂದರು.
ಬೊಮ್ಮಾಯಿ, ಸೋಮಣ್ಣ ಸಮಿತಿಯ ಸದಸ್ಯರೇ? :
ವಕ್ಫ್ ವಿಚಾರವಾಗಿ ಜೆಪಿಸಿ (ಜಂಟಿ ಪಾರ್ಲಿಮೆಂಟ್ ಸಮಿತಿ) ರಾಜ್ಯಕ್ಕೆ ಭೇಟಿ ಕೊಟ್ಟಿರುವ ಬಗ್ಗೆ ಕೇಳಿದಾಗ “ಯಾವ ಜಂಟಿ ಪಾರ್ಲಿಮೆಂಟ್ ಸಮಿತಿ ಎನ್ನುವುದು ಇಲ್ಲ. ಕೇವಲ ಬಿಜೆಪಿಯ ನಾಯಕರು ಭೇಟಿ ಕೊಟ್ಟಿದ್ದಾರೆ. ಬೊಮ್ಮಾಯಿ, ಸೋಮಣ್ಣ ಆ ಸಮಿತಿಯಲ್ಲಿ ಇದ್ದಾರೆಯೇ? ತೇಜಸ್ವಿ ಸೂರ್ಯ ರಾಜಕೀಯಕ್ಕಾಗಿ ಹೆಲಿಕಾಪ್ಟರ್ ಅಲ್ಲಿ ಬಂದು ಹೋಗಿದ್ದಾರೆ. ಸಮಿತಿ ಭೇಟಿಯ ಬಗ್ಗೆ ಯಾವುದಾದರೂ ಅಧಿಕಾರಿಗಳಿಗೆ ತಿಳಿಸಿದ್ದಾರೆಯೇ? ಭೇಟಿ ಮಾಡಿ ಎಂದು ಯಾರಾದರೂ ಮನವಿ ಮಾಡಿದ್ದರೇ?. ಬಿಜೆಪಿ ಕಾಲದಲ್ಲಿಯೇ ಎಲ್ಲಾ ಪಹಣಿಗಳನ್ನು ಬದಲಾವಣೆ ಮಾಡಲಾಯಿತು. ಶೀಘ್ರದಲ್ಲಿಯೇ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ” ಎಂದರು.
ಬಿಜೆಪಿ 2010 ರಲ್ಲಿಯೇ ವಕ್ಫ್ ಬಗ್ಗೆ ಸುತ್ತೋಲೆ ಹೊರಡಿಸಿತ್ತು ಎಂದು ಕೇಳಿದಾಗ “2010 ಸೇರಿದಂತೆ 2020 ರಲ್ಲಿಯೂ ಎಲ್ಲಾ ಪಹಣಿಗಳನ್ನು ಬದಲಾಯಿಸಿದ್ದೇ ಬಿಜೆಪಿ. ಎಲ್ಲಾ ದಾಖಲೆಗಳು ನಮ್ಮ ಬಳಿಯಿದೆ. ಧಾರವಾಡದಲ್ಲಿಯೂ ಇವೆ ಎಲ್ಲವನ್ನೂ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.






