ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದೆಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಅದನ್ನು ವಿರೋಧಿಸುವ ಡಿಎಂಕೆ ಜತೆಗೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಡಿಎಂಕೆಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯಿಂದ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಡಿಎಂಕೆ ವಿರೋಧಿಸುವುದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಕಾಂಗ್ರೆಸ್ ಈ ಬಗ್ಗೆ ದಂದ್ವ ನಿಲುವು ಅನುಸರಿಸುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರ ಅಸಮಾಧಾನ ಶಮನಗೊಳಿಸಲಾಗುವುದು, ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡಿ, ಸಮಾಧಾನ ಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರೊಬ್ಬ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೋವಾಗುವುದು ಸಹಜ. ಈಶ್ವರಪ್ಪ ಸೇರಿದಂತೆ ಕರಡಿ ಸಂಗಣ್ಣ, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ಮಾಡಿ ಸಮಾಧಾನಪಡಿಸಲಿದ್ದಾರೆ ಎಂದರು.

Author

error: