ದೇವೆಗೌಡರ ಕುಟುಂಬ ಆಯಿತು, ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಕಾಂಗ್ರೆಸ್ ಸಂಚು: H D ಕುಮಾರಸ್ವಾಮಿ ಆರೋಪ

H D Kumaraswamy Reaction: ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿ ಯುವ ಕೆಲಸ ಮಾಡಲಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ

ಬೆಂಗಳೂರು: ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ಆಯಿತು ಈಗ ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕೇಂದ್ರ ಸಚಿವರಾದ ಮೇಲೆ ರಾಜ್ಯಕ್ಕೆ ಮೊದಲ ಭೇಟಿ ಕೊಟ್ಟ ವೇಳೆ ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

82 ವರ್ಷದ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್‌ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿ ಯುವ ಕೆಲಸ ಮಾಡಲಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಡಿಕೆಶಿ ವಿರುದ್ಧ HDK ಆಕ್ರೋಶ :

ನಾಲ್ಕು ತಿಂಗಳ ಹಿಂದಿನ ಪ್ರಕರಣ ಇದು. ಇವತ್ತು ಯಡಿಯೂರಪ್ಪ ಅವರ ಮೇಲೆ ಜಾಮೀನು ರಹಿತ ಕೇಸ್ ಹಾಕಲು ಹೊರಟಿದ್ದಾರೆ. ನಾವು ಎಂಟು ಸ್ಥಾನ ಗೆದ್ದಿದ್ದೀವಿ ಬೀಗುತ್ತಿದ್ದಾರೆ. ಹಾಸನದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಪೆನ್ ಡ್ರೈವ್ ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದವರು ಇವರು. ಪೆನ್ ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತಗೊಂಡರು? ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಾನು  ನಿಮ್ಮ ಮಟ್ಟಕ್ಕೆ ಇಳಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪ್ರಹಾರ ನಡೆಸಿದರು.

ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ನಾನು ಕೇಂದ್ರ ಸರಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವನಾಗಿರಬಹುದು. ರಾಜ್ಯದ ಹಿತವನ್ನು ಎಂದಿಗೂ ಮರೆಯಲಾರೆ. ಬನ್ನಿ, ಯಾವುದೇ ಇಲಾಖೆಯ ಏನೇ ಕೆಲಸಗಳು ಇದ್ದರೂ ಮಾಡಿಕೊಡುತ್ತೇನೆ. ನನಗೆ ಸ್ವಲ್ಪ ಸಮಯ ಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ರಾಜಕೀಯದಲ್ಲಿ ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಿಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿದ್ದರು? ಕಡೆಗೆ ಅನೇಕ ಶಾಸಕರು ಅವರನ್ನು ಬಿಟ್ಟು ಹೋದರು. ಅವರನ್ನು ಜೈಲಿಗೂ ಕಳಿಸಿದರು. ಈಗ ಮತ್ತೆ ಎಷ್ಟು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರು ಎನ್ನುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿಯೂ ಇದು ನಡೆಯುತ್ತದೆ. ಒಂದು ಸಲ ಅವಕಾಶ ಕೊಡಿ ಅಂತಾ ಕೇಳಿದೆ. ನಾನು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಿಡಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದೆ. ಅದಕ್ಕೂ ಅವಹೇಳನ ಮಾಡಿದರು. ಚಕ್ರ ತಿರುಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾರ್ಯಕರ್ತರ ಗೌರವ ಉಳಿಸುವ ನಿಟ್ಟಿನಲ್ಲಿ ನಿಮ್ಮ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಕೇಂದ್ರದ ಸಚಿವರಾಗಿದ್ದಾರೆ. ನಮ್ಮ ಕೈಗೆ ಸಿಗಲ್ಲ ಎಂದು ಯಾರೂ ಭಾವಿಸಬೇಡಿ. ಯಾವುದೇ ಸಮಯದಲ್ಲಿ ಬಂದು ನಿಮ್ಮ ಕಷ್ಟ ಹೇಳಿಕೊಳ್ಳಬಹುದು. ನಾನೆಂದಿಗೂ ನಿಮ್ಮ ಜತೆಯಲ್ಲಿಯೇ ಇರುತ್ತೇನೆ ಎಂದರು ಅವರು.

ಮೋದಿ ಅವರಿಗೆ ಕೃತಜ್ಞತೆ :

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇರಿಸಿ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಹಾಗೆಯೇ ನಾಡಿನ, ದೇಶದ ಹಿತಕ್ಕಾಗಿ ದುಡಿಯುತ್ತೇನೆ. ಉದ್ಯೋಗ ಸೃಷ್ಟಿ, ಉತ್ಪಾದನೆ ಹೆಚ್ಚಳ, ಜಿಡಿಪಿ ವೃದ್ಧಿ ಸೇರಿದಂತೆ ದೇಶಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತೇನೆ. ಕೈಗಾರಿಕಾ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೂ ಉಪಯೋಗ ಆಗುವ ರೀತಿಯಲ್ಲಿ ದುಡಿಯುತ್ತೇನೆ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ :

ಕೇಂದ್ರ ಸಚಿವರಾದ ಮೇಲೆ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಬಳಿಕ ಸಾದಹಳ್ಳಿ ಗೇಟ್ ಟೋಲ್ ಬಳಿಗೆ ಆಗಮಿಸಿದ ಕೇಂದ್ರ ಸಚಿವರನ್ನು ಬೃಹತ್ ಸೇಬಿನ ಹಾರ, ಹೂವಿನ ಹಾರ ಹಾಕಿ ಸ್ವಾಗತ ಮಾಡಿದರು ಕಾರ್ಯಕರ್ತರು.

ರಾಜ್ಯಪಾಲರನ್ನು ಭೇಟಿಯಾದ ಕೇಂದ್ರ ಸಚಿವರು:

ನೂತನ ಕೇಂದ್ರ ಸಚಿವರು ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಭೇಟಿ ನೀಡಿದ ಮೊದಲ ಭೇಟಿ ಸಂದರ್ಭದಲ್ಲಿಯೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರನ್ನು ಸೌಹಾರ್ಧ ಭೇಟಿಯಾದರು.

Author

Leave a Reply

Your email address will not be published. Required fields are marked *