ಬೆಂಗಳೂರು : ನಮ್ಮ ರಾಜ್ಯ ವಿಶ್ವದಲ್ಲಿಯೇ ಶ್ರೇಷ್ಠ ಪ್ರವಾಸಿತಾಣವಾಗಬೇಕು ಎಂಬುದು ನಮ್ಮ ಗುರಿ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್ ಕೆ ಪಾಟೀಲ್ ಅವರು ತಿಳಿಸಿದರು.
ಇಂದು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸೋದ್ಯಮ ನೀತಿ 2024-29ಅನ್ನು ಜಾರಿಗೆ ತರುವ ಕುರಿತು ಚರ್ಚಿಸುವ ಸಂಬಂಧ ಕಾರ್ಯಾಗಾವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕದ ಪ್ರವಾಸೋದ್ಯಮ ಮತ್ತು ಉದ್ಯಮದ ಭವಿಷ್ಯವನ್ನು ರೂಪಿಸಲು ಪ್ರವಾಸೋದ್ಯಮ ಭಾಗೀದಾರ ಸಮಾಲೋಚನಾ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ನಮ್ಮ ರಾಜ್ಯವು ಶ್ರೇಷ್ಠ ತಾಣವಾಗಲು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಭಾಗೀದಾರರು ಉತ್ತಮ ಸಲಹೆಗಳನ್ನು ನೀಡಬೇಕು ಎಂದರು.
ರಾಜ್ಯವು ಪ್ರವಾಸೋದ್ಯಕ್ಕೆ ಪ್ರಸಿದ್ದಿ ಹೊಂದಿದ್ದು, “ಒಂದು ರಾಜ್ಯ ಹಲವು ಜಗತ್ತುಗಳು” ಘೋಷ ವಾಕ್ಯವಾಗಿದೆ. ಸಾಂಸ್ಕೃತಿಕ, ವೈವಿಧ್ಯಮಯ ಭೂದೃಶ್ಯಗಳು, ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಶ್ರೀಮಂತಿಕೆಯನ್ನು ನಮ್ಮ ರಾಜ್ಯವು ಹೊಂದಿದೆ ಎಂದು ತಿಳಿಸಿದರು.
ಇತಿಹಾಸವನ್ನು ಬಲ್ಲವರು ಇತಿಹಾಸ ಸೃಷ್ಟಿ ಮಾಡಬಲ್ಲರು. ಈ ದಿಸೆಯಲ್ಲಿ ಯುವಕರು ಹಾಗೂ ಮುಂದಿನ ಪೀಳಿಗೆಗೆ ಪ್ರವಾಸೋದ್ಯಮದಲ್ಲಿ ಆಸಕ್ತಿ ಮೂಡಿಸಿ, ಪ್ರವಾಸದ ಕುರಿತು ಮಾಹಿತಿ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಇತ್ತೀಚಿಗೆ ಜನರು ಐಷಾರಾಮಿ ಪ್ರವಾಸಕ್ಕೆ ಮಹತ್ವ ನೀಡುತ್ತಿದ್ದಾರೆ. ಅದರ ಜೊತೆಗೆ ಕಲೆ ಮತ್ತು ಸಂಸ್ಕೃತಿ ಸಂಪತ್ತಿನ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸಿದರೆ ನಮ್ಮ ರಾಜ್ಯವು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದರು.
ಐಷಾರಾಮಿ ಪ್ರವಾಸದ ಜೊತೆಗೆ ಶೈಕ್ಷಣಿಕ, ಕೃಷಿ, ಸಾಹಸಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡಬೇಕು. ಕರಾವಳಿ, ಚಿಕ್ಕಮಂಗಳೂರು, ಮೈಸೂರು ಮುಂತಾದ ಸ್ಥಳಗಳು ಅರಣ್ಯ ಶ್ರೀಮಂತಿಕೆಗೆ ಪ್ರಸಿದ್ದಿಯನ್ನು ಹೊಂದಿದೆ. ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳಿಗೆ ಜ್ಞಾನ, ಶಿಕ್ಷಣ, ಮನರಂಜನೆ, ಸಂಸ್ಕೃತಿ ಯ ಬಗ್ಗೆ ಅರಿವು ಮೂಡಿಸಬೇಕು. ಸಾಹಸಿ ಪ್ರವಾಸ ತಾಣಗಳನ್ನು ದಂಡೆಗಳ ಹತ್ತಿರ ಮಾಡಬಹುದು. ಕರಾವಳಿ ಪ್ರದೇಶದ ಕ್ರೀಡೆ ಎಲ್ಲರನ್ನು ಆಕರ್ಷಣೆ ಮಾಡುತ್ತಿದೆ ಎಂದರು.
ರಾಜ್ಯವು ತಂತ್ರಜ್ಞಾನದಲ್ಲಿ ಮುಂದುವರೆದಿದ್ದು ಕುಳಿತ ಜಾಗದಲ್ಲಿ ನಾವು ಯಾವ ಸ್ಥಳಕ್ಕೆ ಹೋಗಬೇಕು ಎಂದು ನಿರ್ಣಯಿಸಬಹುದು. ಹಂಪಿ, ಬಾದಾಮಿ, ಐಹೊಳೆ ಪಟ್ಟದಕಲ್ಲು ಸೋಮನಾಥಪುರ ಐತಿಹಾಸಿಕ ತಾಣವಾಗಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಯು ನಮ್ಮ ಮಹತ್ವಾಕಾಂಕ್ಷೆಯಾಗಿದ್ದು, ಅದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.
ರಾಜ್ಯದ ಕಡಿಮೆ-ಪರಿಶೋಧನೆಯ ಭಾಗಗಳಿಗೆ ಭೇಟಿ ನೀಡಲು ನಾವು ಪ್ರವಾಸಿಗರನ್ನು ಪ್ರೋತ್ಸಾಹಿಸಬೇಕು. ಅವರಿಗೆ ವೈವಿಧ್ಯಮಯ ಪ್ರದೇಶಗಳ ಸೌಂದರ್ಯವನ್ನು ಅನುಭವಿಸಲು ಅನುವು ಮಾಡಿಕೊಟ್ಟಂತ್ತಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇತ್ತೀಚಿಗೆ ನಡೆದ ದಕ್ಷಿಣ ಭಾರತ್ ಉತ್ಸವ 2024ರಲ್ಲಿ ಹೂಡಿಕೆದಾರರು ಒಪ್ಪಂದಗಳಿಗೆ ಸಹಿ ಹಾಕಿದ್ದು, ಪ್ರವಾಸೋದ್ಯಮ ನೀತಿಯು ಹೆಚ್ಚಿನ ಹೂಡಿಕೆ, ಭಾಗೀದಾರರಿಗೆ ಹೆಚ್ಚಿನ ಆದಾಯ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದರು.
ಪರಿಷ್ಕøತ ಪ್ರವಾಸೋದ್ಯಮ ನೀತಿಯು ರಾಜ್ಯವನ್ನು ಉನ್ನತ ಶ್ರೇಣಿಯ ಪ್ರವಾಸೋದ್ಯಮ ತಾಣವಾಗಿಸುತ್ತದೆ. ಈ ದಿಸೆಯಲ್ಲಿ ಹೂಡಿಕೆ, ಮೂಲಸೌಕರ್ಯ, ಪರಂಪರೆ, ತಂತ್ರಜ್ಞಾನದ ಕಡೆಗೆ ಗಮನ ಹರಿಸಲಾಗುತ್ತಿದೆ. ಇಲಾಖೆ, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು ಒಟ್ಟಾಗಿ ಪ್ರವಾಸೋದ್ಯಮದ ಬೆಳವಣಿಗೆಗೆ ಹೆಜ್ಜೆ ಇಡೋಣ ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ನಿರ್ದೇಶಕ ಡಾ. ರಾಮಪ್ರಸಾತ್ ಮನೋಹರ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
