ಕೃಷಿ ನಮ್ಮ ದೇಶದ ಭವಿಷ್ಯ- ಕೃಷಿಕರ ಕೊಡುಗೆ ಅಪಾರ : ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ

ಕೃಷಿ ಉತ್ಪನ್ನಗಳು ಸಾಕಷ್ಟಿದ್ದು ಈ ಬಗ್ಗೆ ಜನರಿಗೆ ತಿಳಿಸುವಲ್ಲಿ ಹಿಂದೆ ಉಳಿದಿದ್ದೇವೆ. ಈ ಕೆಲಸವನ್ನು ನಾವು ಮಾಡಬೇಕಿದೆ. ಹಾಗೂ ಕೃಷಿ ಕೋರ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ  ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು

ಶಿವಮೊಗ್ಗ: ಕೃಷಿ ನಮ್ಮ ದೇಶದ ಭವಿಷ್ಯವಾಗಿದ್ದು, ಕೃಷಿಗೆ ಎಂದಿಗೂ ಪ್ರಾಮುಖ್ಯತೆ ಇದೆ. ಕೃಷಿ ಮತ್ತು ತೋಟಗಾರಿಕೆ ಕೋರ್ಸ್‍ಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದರ ಸದುಪಯೋಗ ಪಡೆಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ),ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.29 ರಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಶಿಕ್ಷಣ ಸುಗ್ಗಿ-2024  ಕಾರ್ಯ ಕ್ರಮ ಉದ್ಘಾಟಿಸಿ ಅವರಿ ಮಾತನಾಡಿದರು.

ಕೃಷಿ ಭವಿಷ್ಯದಲ್ಲಿ ಬೇಡಿಕೆ ಇರುವ ವಲಯ ಆಗಲಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಶೇ.60 ರಷ್ಟು ರೈತರು ಇದ್ದು, ಕೃಷಿ ಕ್ಷೇತ್ರದಿಂದ ಜಿಡಿಪಿಗೆ ಶೇ.17 ಕೊಡುಗೆ ಇದೆ. ದೇಶಕ್ಕೆ ಕೃಷಿಕರ ಕೊಡುಗೆ ಅಪಾರವಾಗಿದೆ.

ವಿದ್ಯಾರ್ಥಿಗಳು, ವಿಶೇಷವಾಗಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಕೃಷಿ, ತೋಟಗಾರಿಕೆ, ಅರಣ್ಯದಂತಹ ಪದವಿ-ಕೋರ್ಸ್‍ಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ವೇದಿಕೆಯಲ್ಲಿ ಹಲವಾರು ಸಾಧಕರು, ಕೃಷಿ ತಜ್ಞರು ಕೃಷಿ ಕೋರ್ಸುಗಳು, ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದು, ವಿದ್ಯಾರ್ಥಿಗಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಬೆಳೆಯುತ್ತದೆ.

ಕೃಷಿ ಉತ್ಪನ್ನಗಳು ಸಾಕಷ್ಟಿದ್ದು ಈ ಬಗ್ಗೆ ಜನರಿಗೆ ತಿಳಿಸುವಲ್ಲಿ ಹಿಂದೆ ಉಳಿದಿದ್ದೇವೆ. ಈ ಕೆಲಸವನ್ನು ನಾವು ಮಾಡಬೇಕಿದೆ. ಹಾಗೂ ಕೃಷಿ ಕೋರ್ಸ್‍ಗಳಿಗೆ ಸಾಕಷ್ಟು ಬೇಡಿಕೆ ಇದ್ದು ವಿದ್ಯಾರ್ಥಿಗಳು ಈ  ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.  

ವಿದ್ಯಾರ್ಥಿಗಳೇ ದೇಶದ ಸಂಪನ್ಮೂಲ. ಯಾವುದೇ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಯಲ್ಲಿ ಅನುತ್ತೀರ್ಣರಾಗಬಾರದು ಹಾಗೂ ಉತ್ತಮ ಅಂಕ ಗಳಿಕೆಯ ಉದ್ದೇಶದಿಂದ ಮೂರು ಪರೀಕ್ಷೆಗಳನ್ನು ಮಾಡಿ ಅದರಲ್ಲಿ ಉತ್ತಮವಾಗಿ ಗಳಿಸಿದ ಅಂಕಗಳನ್ನು ಉಳಿಸಿಕೊಳ್ಳುವ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆ ರಾಷ್ಟ್ರದಲ್ಲೇ ಮೊದಲನೆ ಪ್ರಯತ್ನವಾಗಿದೆ. ಇದರಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಸಂಭವ ಕಡಿಮೆ ಇದ್ದು ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.

ಅನೇಕ ವಿದ್ಯಾರ್ಥಿಗಳಿಗೆ ನೀಟ್ ತರಬೇತಿ ಪಡೆಯುವುದು ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ ಮೊದಲ ಬಾರಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಕೋಚಿಂಗ್ ನೀಡಲಾಗುವುದು. ಮೊದಲ ಹಂತದಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವ ಉದ್ದೇಶ ಹೊಂದಲಾಗಿದೆ.

ಕುವೆಂಪು ರಂಗಮಂದಿರ ಆವರಣದಲ್ಲಿ ಕೃಷಿ ಉತ್ಪನ್ನಗಳು, ಕೀಟಗಳು, ಚಿಟ್ಟೆಗಳು, ವಿವಿಧ ಭತ್ತದ ಬೀಜದ ತಳಿ, ಸಾವಯವ ಕೃಷಿ, ಜೇನು ಸಾಕಾಣಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಪ್ರದರ್ಶನ ಏರ್ಪಡಿಸಲಾಗಿತ್ತು.

ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್, ಶಾಸಕರು ಜಿ.ಹೆಚ್.ಶ್ರೀನಿವಾಸ್, ಡಿಡಿಪಿಯು ಕೃಷ್ಣಪ್ಪ, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ, ಕುಲಸಚಿವರಾದ ಕೆ.ಸಿ ಶಶಿಧರ್, ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *