ಬೆಂಗಳೂರು : ಉತ್ತಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ನಿಂತಿದ್ದು, ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಹಂತದಲ್ಲಿಯೇ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ಆರೋಗ್ಯ ಇಲಾಖೆಯಿಂದ ಹಲವು ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರಗಳನ್ನ ನಡೆಸಲಾಗ್ತಿದೆ. ಆರೋಗ್ಯ ಶಿಬಿರಗಳ ಮೂಲಕ ಜನರ ಬಳಿಗೆ ಆರೋಗ್ಯವನ್ನ ಕೊಂಡೊಯ್ಯುವ ಕಾರ್ಯವನ್ನ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಇತ್ತಿಚೆಗೆ ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ಕಾಯಿಲೆಗಳು ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನ ಬೀರುತ್ತಿವೆ. ಇದಕ್ಕೆ ಇವತ್ತಿನ ನಮ್ಮ ಜೀವನ ಶೈಲಿ ನಾವು ಸೇವಿಸುವ ಆಹಾರವೇ ಮುಖ್ಯ ಕಾರಣ ಎಂದರು.
ಸಮತೋಲನದ ಆಹಾರ ಸೇವನೆ ನಮ್ಮ ಆರೋಗ್ಯವನ್ನ ಕಾಪಾಡುವಲ್ಲಿ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ದೈನಂದಿನ ಕೆಲಸ ಕಾರ್ಯಗಳ ಒತ್ತಡದ ನಡುವೆ ದೈಹಿಕ ಚಟುವಟಿಕೆಗಳು ಇಲ್ಲದಿದ್ದರೆ ಅನಾರೋಗ್ಯ ಹೆಚ್ಚಾಗುತ್ತದೆ. ಹೀಗಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಸಮತೋಲನದಲ್ಲಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆಯು ರಾಜ್ಯದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಎಂದರು.






