ರಾಜ್ಯದ ರಾಜಧಾನಿ ಬೆಂಗಳೂರು ಒಂದು ಕಾಲದಲ್ಲಿ ಹವಾನಿಯಂತ್ರಿತ ನಗರ ಎಂಬ ಹೆಸರು ಪಡೆದಿತ್ತು. ಇಂದು ಬೆಂಗಳೂರು ಬದಲಾಗಿದೆ. ತಾಪಮಾನ ಗರಿಷ್ಟ 40 ಡಿಗ್ರಿ ದಾಟಿದೆ. ಕನಿಷ್ಟ ತಾಪಮಾನದಲ್ಲೂ ಏರಿಕೆಯಾಗುತ್ತಿದೆ. ಒಟ್ಟಿನಲ್ಲಿ ಬೆಂಗಳೂರು ಅಪಾಯದಲ್ಲಿದೆ.
ಪ್ರಸಕ್ತ ವರ್ಷ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಿಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಉರಿ ಬಿಸಿಲು, ಬಿಸಿ ಗಾಳಿ ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಈಗಾಲೇ ಆರೋಗ್ಯ ಇಲಾಖೆ ಉರಿ ಬಿಸಿಲಿನಲ್ಲಿ ಪ್ರಯಾಣ, ಕೆಲಸಗಳಿಂದ ದೂರವಿರುವಂತೆ ಸೂಚನೆ ನೀಡಿದೆ.
ಈ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷದ ಗರಿಷ್ಠ 41.8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಬೆಂಗಳೂರು ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ.
ಕೆಂಗೇರಿಯಲ್ಲಿ ಮಂಗಳವಾರ ಗರಿಷ್ಠ ತಾಪಮಾನ 41.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ದಿನ ಬೆಂಗಳೂರಿನ ಬಿದರಹಳ್ಳಿಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ,
ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿರುವ ಸಾಧ್ಯತೆ ಇದೆ. ತಾಪಮಾನ ಏರಿಕೆಯಲ್ಲಿ ಆಯಾ ಸ್ಥಳಗಳಲ್ಲಿ ಸ್ಥಳೀಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಹಸಿರು ಕಡಿಮೆಯಾಗುತ್ತಿದೆ. ಇದು ಈಗ ಕಾಂಕ್ರೀಟ್ ನಗರವಾಗಿ ಬದಲಾಗಿದೆ.
ಇಲ್ಲಿದ್ದ ನೂರಾರು ಕೆರೆಗಳನ್ನು ಮುಚ್ಚಿ ಲೇಔಟ್ ಮಾಡಲಾಗಿದೆ. ರಸ್ತೆ ಪಕ್ಕದಲ್ಲಿದ್ದ ಗಿಡ ಮರಗಳನ್ನು ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಡಿದು ಹಾಕಲಾಗಿದೆ. ಬೆಂಗಳೂರು ನಗರಕ್ಕೆ ನಗರ ಯೋಜನೆ ಅನ್ನುವುದು ಇಲ್ಲವಾಗಿದೆ. ಕಳೆದ ಎರಡು ಮೂರು ದಶಕಗಳಿಂದ ಅಧಿಕಾರಕ್ಕೆ ಬಂದ ಸರ್ಕಾರಗಳು ಈ ನಗರದ ಹತ್ಯೆಗೆ ತಮ್ಮದೇ ಆದ ಕಾಣಿಕೆ ನೀಡುತ್ತಿವೆ.
