ಕೊಪ್ಪಳ : ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ನಾಳೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ನಂತರ ಕಾಂಗ್ರೆಸ್ ಸೇರುವ ಬಗ್ಗೆ ಅವರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಕೊಪ್ಪಳ ಸಂಸದರಾಗಿರುವ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ, ಇದರಿಂದಾಗಿ ಅವರು ನೊಂದುಕೊಂಡಿದ್ದಾರೆ. ಅವರ ಬೆಂಬಲಿಗರಿಗೂ ಬೇಸರವಾಗಿದೆ. ಕಳೆದ ಕೆಲವು ದಿನಗಳಿಂದ ಅವರ ಬೆಂಬಲಿಗರು ರಾಜಕೀಯ ನಿರ್ಧಾರ ಕೈಗೊಳ್ಳುವಂತೆ ಕರಡಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈ ನಡುವೆ ಸಂಸದ ಸಂಗಣ್ಣ ಕರಡಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಲಕ್ಷ್ಮಣ್ ಸವದಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಭೇಟಿಗೂ ವ್ಯವಸ್ಥೆ ಮಾಡಿದ್ದಾರೆ.
ಕೊಪ್ಪಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜಶೇಖರ ಹಿಟ್ನಾಳ ಅವರು ಸಂಸದ ಕರಡಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ತಮಗೆ ಬೆಂಬಲ ನೀಡುವಂತೆಯೂ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನ ಇನ್ನೂ ಕೆಲವು ನಾಯಕರು ಸಂಗಣ್ಣ ಕರಡಿ ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ,
ಬಿಜೆಪಿಯಿಂದ ಜನಾರ್ಧನ ರೆಡ್ಡಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ತಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಸಂಗಣ್ಣ ಕರಡಿ ತಿಳಿಸಿದ್ದಾರೆ.






