ಬೆಂಗಳೂರು : ದೇವೇಗೌಡರ ಕುಟುಂಬದ ಪರಂಪರೆ ಅದು. ಈ ಪರಂಪರೆಯನ್ನು ಪ್ರಾರಂಭಿಸಿದವರು ಸನ್ಮಾನ್ಯ ದೇವೇಗೌಡರು. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ. ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಾಗ ಅವರ ಕಣ್ಣಿನಲ್ಲಿ ನೀರು ಬಂದಿತ್ತು ಈ ಪರಂಪರೆಯನ್ನು ಕುಮಾರಸ್ವಾಮಿ ಅವರು ಮುಂದುವರಿಸಿದರು. ಬಿಜೆಪಿ ತಮಗೆ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದಾಗ ಅವರು ಕಣ್ಣೀರು ಹಾಕಿದ್ದರು. ನಂತರ ಹಲವು ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದ್ದರು.
ಕರ್ನಾಟಕದ ಜನರಿಗೆ ದೇವೇಗೌಡರ ಕುಟುಂಬ ಅಂದರೆ ಅಷ್ಟು ಪ್ರೀತಿ. ಅವರು ಕಣ್ಣೀರು ಹಾಕಿದಾಗ ಜನ ಮರುಗಿದ್ದಾರೆ. ಅವರ ಕಣ್ಣೀರು ಒರೆಸಿದ್ದಾರೆ. ತಾವೂ ಕಣ್ಣೀರು ಹಾಕಿದ್ದಾರೆ. ಹೀಗಾಗಿ ದೇವೇಗೌಡರು ಕುಟುಂಬ ಮತ್ತು ಕರ್ನಾಟಕದ ಜನರನ್ನು ಬೆಸೆಯುವುದೇ ಕಣ್ಣೀರು. ಕುಮಾರಸ್ವಾಮಿ ಅವರು ನಮ್ಮದು ಬಡ ಪಕ್ಷ. ನಮ್ಮ ಬಳಿ ಚುನಾವಣೆ ಎದುರಿಸಲು ಹಣ ಇಲ್ಲ ಎಂದಾಗ ಅಯ್ಯೋ ಹಣ ಇಲ್ಲಂತೆ ನಾವೇ ಕೊಡಬಹುದೇನೋ ಎಂದು ಯೋಚಿಸಿದವರು ಹಲವರು.
ದೇವೇಗೌಡರ ಕುಟುಂಬ ರಾಜ್ಯ ರಾಜಕಾರಣದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲಿ ಕಣ್ಣೀರು ಕೂಡ ಒಂದು. ಅವರು ಹರಿಸಿದ ಕಣ್ಣೀರು ಎಷ್ಟು ಟಿಎಂ ಸಿ ಆಗಬಹುದು ಎಂದು ಕರ್ನಾಟಕದ ಜನ ತಲೆ ಕೆಡಿಸಿಕೊಂಡಿದ್ದೂ ಉಂಟು.
ಆದರೆ ಇವತ್ತು ಹೇಳಲು ಹೊರಟಿದ್ದು ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ. ನಿಖಿಲ್ ಕುಮಾರಸ್ವಾಮಿ ಅವರ ಉತ್ತರಾಧಿಕಾರಿ. ಈ ಸೂಚನೆಯನ್ನು ಕುಮಾರಣ್ಣ ಈಗಾಗಲೇ ನೀಡಿದ್ದಾರೆ. ದೆಹಲಿಗೆ ಹೋಗುವಾಗ, ಅಮಿತ್ ಶಾ, ಮೋದಿ ಅವರನ್ನು ನೋಡುವಾಗ ನಿಖಿಲ್ ಅವರನ್ನು ಕರೆದುಕೊಂಡೇ ಹೋಗಿದ್ದಾರೆ ಕುಮಾರಸ್ವಾಮಿ. ಈಗಲೇ ಎಲ್ಲರ ಜೊತೆ ಸಂಪರ್ಕ ಬೆಳಸಲಿ ಎಂಬ ಕಾರಣವೂ ಇರಬಹುದು.
ಇವತ್ತಿನ ಮಹತ್ವದ ವಿಚಾರ ಎಂದರೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು. ಈ ಮೂಲಕ ಅವರು ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿದರು. ಮಂಡ್ಯ ಮತ್ತು ರಾಮ ನಗರ ಚುನಾವಣೆಯಲ್ಲಿ ಸೋತ ವಿಚಾರವನ್ನು ಪ್ರಸ್ತಾಪಿಸಿ ಅವರು ಕಣ್ಣೀರು ಒರೆಸಿಕೊಂಡರು. ಈ ಮೂಲಕ ಅವರು ತಾವು ದೇವೇಗೌಡರ ಕುಟುಂಬಕ್ಕೆ ಸೇರಿದವರು ಎಂದು ಮತ್ತೊಮ್ಮೆ ಸಾಭಿತುಪಡಿಸಿದರು.
