ಭಾರತದ ಪರವಾಗಿ ಜಗತ್ತಿನ ವೇದಿಕೆಯಲ್ಲಿ ಮಾತಾಡುವ ಕನಸು ನಿಮ್ಮದಾ?
ನವದೆಹಲಿ, ವಾಷಿಂಗ್ಟನ್, ಲಂಡನ್, ಟೋಕಿಯೋ, ಪ್ಯಾರಿಸ್, ಯುಎನ್ ಪ್ರಧಾನ ಕಚೇರಿ… ಇಂತಹ ಜಾಗಗಳಲ್ಲಿ ಭಾರತದ ಪರವಾಗಿ ಮಾತಾಡುವ ಅಧಿಕಾರಿಗಳು ಯಾರು ಗೊತ್ತೇ? ಅವರೇ ಭಾರತೀಯ ವಿದೇಶಾಂಗ ಸೇವೆ – Indian Foreign Service (IFS) ಅಧಿಕಾರಿಗಳು.
ಭಾರತದ ವಿದೇಶಾಂಗ ನೀತಿಯನ್ನು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿಧಿಸುವ ಈ ಹುದ್ದೆ ದೇಶದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಸೇವೆಗಳಲ್ಲಿ ಒಂದಾಗಿದೆ. ಐಎಎಸ್ ದೇಶದ ಒಳ ಆಡಳಿತ ನೋಡಿದರೆ, ಐಎಫ್ ಎಸ್ ಜಗತ್ತಿನ ಮುಂದೆ ಭಾರತದ ಮುಖವಾಗಿರುತ್ತದೆ.
ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಅತ್ಯುತ್ತಮ ರ್ಯಾಂಕ್ ಪಡೆದ ಕೆಲವೇ ಅಭ್ಯರ್ಥಿಗಳಿಗೆ ಐಎಫ್ಎಸ್ ಸೇವೆ ದೊರೆಯುತ್ತದೆ.
IFS ಅಧಿಕಾರಿ ಯಾರು?
ಭಾರತೀಯ ವಿದೇಶ ಸೇವೆ (IFS) ಅಧಿಕಾರಿಗಳು ಭಾರತದ ವಿದೇಶಾಂಗ ಸಚಿವಾಲಯದ (Ministry of External Affairs) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
ಇವರು,
- ಭಾರತದ ರಾಯಭಾರ ಕಚೇರಿಗಳಲ್ಲಿ (Embassy)
- ಹೈಕಮಿಷನ್ಗಳಲ್ಲಿ
- ಕಾನ್ಸುಲೇಟ್ಗಳಲ್ಲಿ
- ವಿಶ್ವಸಂಸ್ಥೆ (UN)
- ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ
ಭಾರತದ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾರೆ. ಸರಳವಾಗಿ ಹೇಳುವುದಾದರೆ, ಒಬ್ಬ ಐಎಫ್ ಎಸ್ ಅಧಿಕಾರಿ ಭಾರತ ಮತ್ತು ಜಗತ್ತಿನ ನಡುವಿನ ಅಧಿಕೃತ ಸೇತುವೆ ಯಾಗಿರುತ್ತಾರೆ.
IFS ಅಧಿಕಾರಿಯ ಕೆಲಸಗಳೇನು?
ಐಎಫ್ ಎಸ್ ಅಧಿಕಾರಿಯ ಕೆಲಸ ಕೇವಲ ಸಭೆಗಳಲ್ಲಿ ಭಾಗವಹಿಸುವುದಲ್ಲ.
ಅವರ ಜವಾಬ್ದಾರಿಗಳು:
- ಭಾರತದ ವಿದೇಶಾಂಗ ನೀತಿಯನ್ನು ಅನುಷ್ಠಾನಗೊಳಿಸುವುದು
- ಇತರ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಮಾತುಕತೆ
- ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವೃದ್ಧಿಸುವುದು
- ವಿದೇಶದಲ್ಲಿರುವ ಭಾರತೀಯರ ಸಮಸ್ಯೆಗಳಿಗೆ ನೆರವು
- ಪಾಸ್ಪೋರ್ಟ್ ಹಾಗೂ ವೀಸಾ ಸೇವೆಗಳ ಮೇಲ್ವಿಚಾರಣೆ
- ಯುದ್ಧ ಅಥವಾ ತುರ್ತು ಪರಿಸ್ಥಿತಿಯಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದು
- ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಭಾರತದ ಪರವಾಗಿ ಮಾತುಕತೆ ನಡೆಸುವುದು
ವಿದ್ಯಾರ್ಹತೆ
ಐಎಫ್ ಎಸ್ ಆಗಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಅಂಗೀಕೃತ ವಿಶ್ವವಿದ್ಯಾಲಯದಿಂದ
- ಬಿಎ
- ಬಿಕಾಂ
- ಬಿಎಸ್ಸಿ
- ಬಿಇ
- ಬಿ.ಟೆಕ್
- ಎಂ ಬಿ ಬಿ ಎಸ್
- ಎಲ್ ಎಲ್ ಬಿ ಸೇರಿದಂತೆ
- ಯಾವುದೇ ಪದವಿ
ಸಾಕು.
ವಯೋಮಿತಿ
ಯುಪಿಎಸ್ ಸಿ ನಿಯಮಗಳ ಪ್ರಕಾರ
- ಸಾಮಾನ್ಯ ವರ್ಗ: 21–32 ವರ್ಷ
- ಒಬಿಸಿ: 35 ವರ್ಷ
- ಎಸ್ ಸಿ/ ಎಸ್ ಟಿ: 37 ವರ್ಷ
(ಸರ್ಕಾರದ ನಿಯಮಗಳಂತೆ ಬದಲಾವಣೆಗಳಿರಬಹುದು.)
ಆಯ್ಕೆ ಪ್ರಕ್ರಿಯೆ
ಐಎಫ್ ಎಸ್ ಅಧಿಕಾರಿಯಾಗಲು ಯುಪಿಎಸ್ ಸಿ ನಾಗರಿಕ ಸೇವೆಗಳ ಪರೀಕ್ಷೆ ಪಾಸಾಗಬೇಕು.
ಹಂತ 1
ಪೂರ್ವಭಾವಿ ಪರೀಕ್ಷೆ
- ಎರಡು ಬಹು ಆಯ್ಕೆಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಬೇಕು. ಈ ಹಂತದಲ್ಲಿ ಲಕ್ಷಾಂತರ ಸ್ಪರ್ಧಾಳುಗಳಲ್ಲಿ ಕೇವಲ ಸಾವಿರಗಳಷ್ಟು ಜನ ಮುಂದಿನ ಪರೀಕ್ಷೆಗೆ ಆಯ್ಕೆಯಾಗುತ್ತಾರೆ. ಆದ್ದರಿಂದ ಪೂರ್ವಭಾವಿ ಪರೀಕ್ಷೆಗೆ ಸಾಕಷ್ಟು ತಯಾರಿ ಅವಶ್ಯಕ.
ಹಂತ 2
ಮುಖ ಪರೀಕ್ಷೆ
- ಆಯ್ಕೆ ಮಾಡಿಕೊಂಡ ವಿಷಯಗಳ ಮೇಲೆ 9 ವಿವರಣಾತ್ಮಕ ಲೇಖನಗಳ ಪರೀಕ್ಷೆ ಇರುತ್ತದೆ.
ಇಲ್ಲಿ ಅಭ್ಯರ್ಥಿಯ ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.
ಹಂತ 3
ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ)
ಸುಮಾರು 275 ಅಂಕಗಳ ಸಂದರ್ಶನ.
ಇಲ್ಲಿ ಅಭ್ಯರ್ಥಿಯ
- ವ್ಯಕ್ತಿತ್ವ
- ನಿರ್ಧಾರ ಸಾಮರ್ಥ್ಯ
- ದೇಶದ ಬಗ್ಗೆ ಅರಿವು
- ಜಾಗತಿಕ ವಿಚಾರಗಳ ತಿಳುವಳಿಕೆ
ಇವುಗಳನ್ನು ಪರೀಕ್ಷಿಸಲಾಗುತ್ತದೆ.
IFS ಪಡೆಯಲು ಎಷ್ಟು Rank ಬೇಕು?
ಇದು ಪ್ರತಿವರ್ಷ ಖಾಲಿ ಹುದ್ದೆಗಳ ಮೇಲೆ ಅವಲಂಬಿತವಾಗಿರುತ್ತದೆ.
ಸಾಮಾನ್ಯವಾಗಿ
ಯುಪಿಎಸ್ ಸಿ ಟಾಪ್ 100 ರ್ಯಾಂಕ್ ಒಳಗೆ ಬಂದರೆ ಐಎಫ್ ಎಸ್ ಪಡೆಯುವ ಸಾಧ್ಯತೆ ಹೆಚ್ಚು.
ಆದ್ದರಿಂದ ಐಎಫ್ ಎಸ್ ಭಾರತದ ಅತ್ಯಂತ ಸ್ಪರ್ಧಾತ್ಮಕ ಸೇವೆಗಳಲ್ಲಿ ಒಂದು.
ತರಬೇತಿ ಹೇಗಿರುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳು ಮಸ್ಸೂರಿಯಲ್ಲಿರುವ ಲಾಲ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್ ಬಿಎಸ್ ಎನ್ ಈ) ಯಲ್ಲಿ ಆರಂಭಿಕ ತರಬೇತಿ ಪಡೆಯುತ್ತಾರೆ. ನಂತರ ನವದೆಹಲಿಯ ವಿದೇಶ ಸೇವೆ ಸಂಸ್ಥೆಯಲ್ಲಿ (Foreign Service Institute ,New Delhi) ಯಲ್ಲಿ ವಿಶೇಷ ರಾಜತಾಂತ್ರಿಕ ತರಬೇತಿ ನೀಡಲಾಗುತ್ತದೆ.
ಅದರ ಜೊತೆಗೆ
- ವಿದೇಶಿ ಭಾಷೆ ಕಲಿಯಬೇಕು
- ಅಂತರರಾಷ್ಟ್ರೀಯ ಕಾನೂನು
- ರಾಜತಾಂತ್ರಿಕ ಸಂವಹನ
- ಜಾಗತಿಕ ರಾಜಕೀಯ
- ವಿದೇಶಾಂಗ ನೀತಿ
ಇತ್ಯಾದಿಗಳಲ್ಲಿ ತರಬೇತಿ ಪಡೆಯುತ್ತಾರೆ.
ಯಾವ ಭಾಷೆಗಳನ್ನು ಕಲಿಯಬೇಕು?
ಐಎಫ್ ಎಸ್ ಅಧಿಕಾರಿಗಳಿಗೆ ಸಾಮಾನ್ಯವಾಗಿ ಒಂದು ವಿದೇಶಿ ಭಾಷೆಯನ್ನು ಕಡ್ಡಾಯವಾಗಿ ಕಲಿಸಲಾಗುತ್ತದೆ. ಉದಾಹರಣೆಗೆ ಫ್ರೆಂಚ್, ಸ್ಪ್ಯಾನಿಷ, ಅರೆಬಿಕ್, ರಷಿಯನ್, ಜಪನೀಸ್, ಜರ್ಮನ್, ಚೈನೀಸ್ ಮತ್ತಿತರ ಭಾಷೆಗಳನ್ನು ಕಲಿಸಲಾಗುತ್ತದೆ. ಇದು ಅವರ ಮೊದಲ ವಿದೇಶಿ ನಿಯೋಜನೆಗೆ ಅನುಗುಣವಾಗಿ ನಿರ್ಧಾರವಾಗುತ್ತದೆ.
ಸಂಬಳ ಎಷ್ಟು?
7ನೇ ವೇತನ ಆಯೋಗದ ಪ್ರಕಾರ
ಆರಂಭಿಕ ಮೂಲ ವೇತನ ಸುಮಾರು
₹56,100
ಆದರೆ ವಿದೇಶಿ ಪೋಸ್ಟಿಂಗ್ನಲ್ಲಿ
- ವಿದೇಶ ಭತ್ಯೆ
- ವಸತಿ
- ವಾಸ ಕಚೇರಿ
- ವಾಹನ
- ವೈದ್ಯಕೀಯ
- ಮಕ್ಕಳ ಶಿಕ್ಷಣ
ಹೀಗೆ ಅನೇಕ ಸೌಲಭ್ಯಗಳು ದೊರೆಯುತ್ತವೆ.
ಹಲವು ರಾಷ್ಟ್ರಗಳಲ್ಲಿ ಒಟ್ಟಾರೆ ವೇತನ ಮತ್ತು ಭತ್ಯೆಗಳು ತಿಂಗಳಿಗೆ ಹಲವು ಲಕ್ಷ ರೂಪಾಯಿಗಳ ಸಮಾನ ಮೌಲ್ಯವನ್ನು ತಲುಪಬಹುದು.
ಉದ್ಯೋಗದ ಬೆಳವಣಿಗೆ
ವೃತ್ತಿ ಬೆಳವಣಿಗೆ ಹೀಗಿರುತ್ತೆ :
- ಅಧೀನ ಕಾರ್ಯದರ್ಶಿ – Under Secretary
- ಉಪ ಕಾರ್ಯದರ್ಶಿ – Deputy Secretary
- ನಿರ್ದೇಶಕರು – Director
- ಜಂಟಿ ಕಾರ್ಯದರ್ಶಿ – Joint Secretary
- ರಾಯಭಾರಿ – Ambassador
- ಹೈ ಕಮೀಷನರ್ – High Commissioner
- ವಿಶ್ವಸಂಸ್ಥೆಗೆ ಖಾಯಂ ಪ್ರತಿನಿಧಿ – Permanent Representative to UN
- ವಿದೇಶ ಕಾರ್ಯದರ್ಶಿ – Foreign Secretary
ವಿದೇಶ ಕಾರ್ಯದರ್ಶಿ ಭಾರತ ಸರ್ಕಾರದ ಅತ್ಯುನ್ನತ ವಿದೇಶಾಂಗ ಅಧಿಕಾರಿಯಾಗಿರುತ್ತಾರೆ.
ಈ ಹುದ್ದೆಗೆ ಬೇಕಾದ ಕೌಶಲ್ಯಗಳು
ಐಎಫ್ ಎಸ್ ಅಧಿಕಾರಿಯಾಗಲು
- ಅತ್ಯುತ್ತಮ ಇಂಗ್ಲಿಷ್ ಸಂವಹನ
- ವಿಶ್ಲೇಷಣಾ ಸಾಮರ್ಥ್ಯ
- ಮಾತುಕತೆ ಕೌಶಲ್ಯ
- ನಾಯಕತ್ವ
- ಸಾರ್ವಜನಿಕ ಭಾಷಣ
- ಅಂತರಾಷ್ಟ್ರೀಯ ಸಂಬಂಧಗಳ ಜ್ಞಾನ
- ಭಾವನಾತ್ಮಕ ಬುದ್ದಿವಂತಿಕೆ
- ಆಪತ್ತು ನಿರ್ವಹಣೆ
- ಸಾಂಸ್ಕೃತಿಕ ಹೊಂದಾಣಿಕೆ
ಇವು ಅತ್ಯಗತ್ಯ.
AI ಬಂದ ನಂತರ IFS ಉದ್ಯೋಗಕ್ಕೆ ಅಪಾಯವಿದೆಯೇ?
ಎಐ ಅನುವಾದ, ಮಾಹಿತಿ ವಿಶ್ಲೇಷಣೆ ಮತ್ತು ಡೇಟಾ ಸಂಗ್ರಹಣೆಯಲ್ಲಿ ಸಹಾಯ ಮಾಡಬಹುದು. ಆದರೆ ರಾಜತಾಂತ್ರಿಕ ಮಾತುಕತೆ, ವಿಶ್ವಾಸ ನಿರ್ಮಾಣ, ರಾಷ್ಟ್ರಗಳ ನಡುವಿನ ಸಂಬಂಧ ನಿರ್ವಹಣೆ, ಸಂಕಷ್ಟ ನಿರ್ವಹಣೆ ಮತ್ತು ರಾಜಕೀಯ ನಿರ್ಧಾರಗಳಲ್ಲಿ ಮಾನವೀಯ ವಿವೇಕ, ಅನುಭವ ಮತ್ತು ತಂತ್ರಜ್ಞಾನಕ್ಕಿಂತ ಹೆಚ್ಚಿನ ರಾಜತಾಂತ್ರಿಕ ನೈಪುಣ್ಯ ಅಗತ್ಯವಿರುತ್ತದೆ. ಹೀಗಾಗಿ ಎಐ, ಐಎಫ್ ಎಸ್ ಅಧಿಕಾರಿಯನ್ನು ಬದಲಿಸುವುದಿಲ್ಲ; ಬದಲಿಗೆ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಧನವಾಗಲಿದೆ.
ಈ ಹುದ್ದೆ ಯಾರಿಗೆ ಸೂಕ್ತ?
ಈ ಗುಣಗಳಿರುವವರಿಗೆ ಐಎಫ್ ಎಸ್ ಅತ್ಯುತ್ತಮ ವೃತ್ತಿ.
- ದೇಶಸೇವೆಯ ಆಸಕ್ತಿ
- ಜಾಗತಿಕ ರಾಜಕೀಯದಲ್ಲಿ ಆಸಕ್ತಿ
- ಪ್ರವಾಸ ಮಾಡಲು ಇಷ್ಟ
- ವಿವಿಧ ಸಂಸ್ಕೃತಿಗಳೊಂದಿಗೆ ಕೆಲಸ ಮಾಡುವ ಮನೋಭಾವ
- ನಾಯಕತ್ವದ ಗುಣ
- ಉತ್ತಮ ಸಂವಹನ ಕೌಶಲ್ಯ
ಸವಾಲುಗಳೇನು?
ಐಎಫ್ ಎಸ್ ವೃತ್ತಿಯಲ್ಲಿ ಸವಾಲುಗಳೂ ಇವೆ.
- ಕುಟುಂಬದಿಂದ ದೂರ ವಾಸ
- ನಿರಂತರ ದೇಶಾಂತರ ವರ್ಗಾವಣೆ
- ರಾಜಕೀಯ ಸೂಕ್ಷ್ಮತೆ
- ಸಂಕಷ್ಟ ಸಂದರ್ಭಗಳಲ್ಲಿ ಒತ್ತಡ
- ವಿವಿಧ ಸಂಸ್ಕೃತಿಗಳಿಗೆ ಹೊಂದಿಕೊಳ್ಳುವ ಅಗತ್ಯ
ಆದರೆ ಇದೇ ಸವಾಲುಗಳು ಈ ಸೇವೆಯನ್ನು ಅತ್ಯಂತ ಗೌರವಾನ್ವಿತವಾಗಿಯೂ ರೂಪಿಸುತ್ತವೆ.
ವೃತ್ತಿ ಒಳನೋಟ
ಭಾರತ ಇಂದು ಜಾಗತಿಕ ರಾಜಕೀಯ, ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ವೇಗವಾಗಿ ವಿಸ್ತರಿಸುತ್ತಿದೆ. ಈ ಬೆಳವಣಿಗೆಯಲ್ಲಿ ಭಾರತೀಯ ವಿದೇಶ ಸೇವೆ ಅಧಿಕಾರಿಗಳ ಪಾತ್ರ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಇದು ಕೇವಲ ಸರ್ಕಾರಿ ಉದ್ಯೋಗವಲ್ಲ; ಭಾರತದ ಧ್ವನಿಯನ್ನು ವಿಶ್ವದ ವೇದಿಕೆಯಲ್ಲಿ ಪ್ರತಿನಿಧಿಸುವ ಜವಾಬ್ದಾರಿಯುತ ಸೇವೆ.
ಭಾರತ ವಿದೇಶಗಳಲ್ಲಿ ತನ್ನದೇ ಅಸ್ತಿತ್ವ, ಪ್ರಾತಿನಿಧಿತ್ವ ಹೊಂದಿದ್ದರೆ, ತನ್ನ ಅಲಿಪ್ತ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಿರಬಹುದು, ಶಾಂತಿ ಸ್ಥಾಪನೆ ಮುಂದುವರಿಕೆ ಇರಬಹುದು ಇವೆಲ್ಲವೂ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಗಳ ಶ್ರಮವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಅಸ್ತಿತ್ವ ನಿರೂಪಣೆಗೆ ಹೊಸ ಭಾಷ್ಯ ಬರೆಯುವ ಅವಕಾಶ ಇದು.
ಯುಪಿಎಸ್ ಸಿ ಪರೀಕ್ಷೆಗೆ ದೀರ್ಘಕಾಲದ ಯೋಜನೆ, ನಿರಂತರ ಅಧ್ಯಯನ, ಉತ್ತಮ ಬರವಣಿಗೆ ಹಾಗೂ ಸಮಕಾಲೀನ ಘಟನೆಗಳ ಆಳವಾದ ಅರಿವು ಹೊಂದಿರುವ ಅಭ್ಯರ್ಥಿಗಳಿಗೆ ಐಎಫ್ ಎಸ್ ಒಂದು ಅತ್ಯುನ್ನತ ಗುರಿಯಾಗಬಹುದು. ದೇಶದ ಗಡಿಗಳನ್ನು ಮೀರಿ ಭಾರತದ ಹಿತಾಸಕ್ತಿಗಾಗಿ ಕೆಲಸ ಮಾಡುವ ಕನಸು ಇದ್ದರೆ, ಐಎಫ್ ಎಸ್ ನಿಮ್ಮ ವೃತ್ತಿಜೀವನದ ಅತ್ಯಂತ ಹೆಮ್ಮೆಯ ಆಯ್ಕೆಯಾಗಬಹುದು.






