ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ಭಾರತದಲ್ಲಿ ನಡೆಯುವ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಗಳ ವಿವರ, ಮಹತ್ವ ಮತ್ತು ಭಾರತೀಯ ಕ್ರಿಕೆಟ್ ನಲ್ಲಿ ಅವುಗಳ ಪಾತ್ರ – SuddiTV ವಿಶೇಷ.
ಕ್ರಿಕೆಟ್ ಭಾರತದಲ್ಲಿ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದು ಒಂದು ಭಾವನೆ. ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ, ಭಾರತೀಯ ದೇಶೀಯ ಕ್ರಿಕೆಟ್ ಟೂರ್ನಿಗಳು ಅನೇಕ ಪ್ರತಿಭಾವಂತ ಆಟಗಾರರನ್ನು ರೂಪಿಸಿ, ರಾಷ್ಟ್ರಮಟ್ಟದ ಕ್ರಿಕೆಟ್‌ಗೆ ಬೆನ್ನೆಲುಬಾಗಿ ನಿಂತಿವೆ. ಈ ದೇಶೀಯ ಟೂರ್ನಿಗಳಿಂದಲೇ ಹಲವಾರು ಆಟಗಾರರು ಭಾರತೀಯ ಕ್ರಿಕೆಟ್ ತಂಡದವರೆಗೆ ಬೆಳೆಯುತ್ತಾರೆ. ರಣಜಿಯಿಂದ ಹಿಡಿದು ವಿಜಯ್ ಹಜಾರೆ ಟ್ರೋಫಿಯ ವರೆಗೆ ದೇಶೀಯ ಟೂರ್ನಿಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ನೋಡೋಣ್ವಾ?
ವಿಜಯ್ ಹಜಾರೆ ಟ್ರೋಫಿ (Vijay Hazare Trophy)
ವಿಜಯ್ ಹಜಾರೆ ಟ್ರೋಫಿ ಭಾರತದಲ್ಲಿನ ಪ್ರಮುಖ ದೇಶೀಯ ಏಕದಿನ (One Day – 50 ಓವರ್) ಕ್ರಿಕೆಟ್ ಟೂರ್ನಿಯಾಗಿದೆ.
ಈ ಟೂರ್ನಿಗೆ ಭಾರತದ ಲೆಜೆಂಡರಿ ಕ್ರಿಕೆಟಿಗ ವಿಜಯ್ ಹಜಾರೆ ಅವರ ಹೆಸರನ್ನು ಇಡಲಾಗಿದೆ. ಈ ಟೂರ್ನಿಯನ್ನು 2002–03 ರಲ್ಲಿ ಆರಂಭಿಸಲಾಯಿತು. ಒಂದು ದಿನದ ಕ್ರಿಕೆಟ್ ಇದಾಗಿದ್ದು, ೫೦ ಓವರ್ ಗಳ ಆಟವಾಗಿದೆ. ರಾಜ್ಯ ಹಾಗೂ ಪ್ರಾದೇಶಿಕ ತಂಡಗಳು ಇದರಲ್ಲಿ ಭಾಗವಹಿಸುತ್ತವೆ. ರಾಷ್ಟ್ರೀಯ , ಅಂತರಾಷ್ಟ್ರೀಯ ಟೂರ್ನಿಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಆಯ್ಕೆಗಾರರ ದೃಷ್ಟಿಯಲ್ಲಿ ಇದು ಅತ್ಯಂತ ಮಹತ್ವದ ಟೂರ್ನಿಯಾಗಿದೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಅನೇಕ ಆಟಗಾರರು ಭಾರತೀಯ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಣಜಿ ಟ್ರೋಫಿ (Ranji Trophy)
ರಣಜಿ ಟ್ರೋಫಿ ಭಾರತದಲ್ಲಿನ ಅತ್ಯಂತ ಹಳೆಯ ಮತ್ತು ಗೌರವಾನ್ವಿತ ಪ್ರಥಮ ದರ್ಜೆ (Test format) ಕ್ರಿಕೆಟ್ ಟೂರ್ನಿಯಾಗಿದೆ. ಭಾರತದ ಮೊಟ್ಟಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ರಣಜಿತ್ ಸಿಂಗ್ ಅವರ ಸ್ಮರಣಾರ್ಥ ಈ ಹೆಸರು ಇಡಲಾಗಿದೆ. 1934ರಲ್ಲೇ ಇದು ಆರಂಭವಾಗಿದ್ದು, ನಾಲ್ಕೈದು ದಿನಗಳ ಟೆಸ್ಟ್ ಪಂದ್ಯವಾಗಿರುತ್ತದೆ. ಈ ಪಂದ್ಯವನ್ನು ಬಿಸಿಸಿಐ ಆಯೋಜನೆ ಮಾಡುತ್ತದೆ. ಪ್ರಾದೇಶಿಕ ಮತ್ತು ರಾಜ್ಯಗಳ ತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಟೆಸ್ಟ್ ಕ್ರಿಕೆಟ್ ಗೆ ಆಟಗಾರರನ್ನು ತಯಾರಿಸುವ ವೇದಿಕೆಯಾಗಿ ಇದು ಪರಿಗಣಿಸಲ್ಪಟ್ಟಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೆಸರು ತಂದ ಅನೇಕ ದಿಗ್ಗಜರು ರಣಜಿ ಟ್ರೋಫಿಯಿಂದಲೇ ಬೆಳೆದಿದ್ದಾರೆ. ಪ್ರಸ್ತುತ ಈ ಟ್ರೋಫಿಗೆ ಭಾರತದ ೨೮ ರಾಜ್ಯಗಳು ಮತ್ತು ೪ ಕೇಂದ್ರಾಡಳಿತ ಪ್ರದೇಶಗಳ ತಂಡಗಳೂ ಸೇರಿದಂತೆ ೩೮ ತಂಡಗಳು ನೋಂದಾಯಿತವಾಗಿವೆ.
ಸಯ್ಯದ್ ಮುಷ್ಟಾಕ್ ಅಲಿ ಟ್ರೋಫಿ (Syed Mushtaq Ali Trophy)
ಈ ಟೂರ್ನಿ ಟಿ20 (Twenty20) ಫಾರ್ಮಾಟ್‌ನ ಪ್ರಮುಖ ದೇಶೀಯ ಕ್ರಿಕೆಟ್ ಟೂರ್ನಿಯಾಗಿದೆ. 2006–07ರಲ್ಲ ಪ್ರಾರಂಭಗೊಂಡ ಟಿ-೨೦ ಟೂರ್ನಿಯಾಗಿದೆ. ಇದನ್ನೂ ಬಿಸಿಸಿ ಐ ಆಯೋಜಿಸುತ್ತಿದ್ದು, ಇಲ್ಲಿ ರಣಜಿ ಟ್ರೋಫಿಯಲ್ಲಿ ಸ್ಪರ್ಧಿಸುವ ತಂಡಗಳೇ ಭಾಗವಹಿಸುತ್ತವೆ. ಟಿ-೨೦ ಟೂರ್ನಿಗೆ ಖ್ಯಾತ ಟೆಸ್ಟ್ ಆಟಗಾರ ಸಯ್ಯದ್ ಮುಷ್ತಾಕ್ ಅಲಿ ಹೆಸರು ಇಟ್ಟಿರುವುದು ವಿಶೇಷ.
ಇದು ಐಪಿಎಲ್ ಆಟಗಾರರ ಆಯ್ಕೆಗೆ ಪ್ರಮುಖ ವೇದಿಕೆ. ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮತ್ತು ಚುರುಕು ಬೌಲರ್‌ಗಳು ಈ ಟೂರ್ನಿಯಿಂದಲೇ ಗುರುತಿಸಿಕೊಳ್ಳುತ್ತಾರೆ. ದೀಪಕ್ ಚಹಾರ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮೊದಲಾದ ಆಟಗಾರರು ಈ ದೇಶೀಯ ಟೂರ್ನಿಗಳಲ್ಲಿನ ಪ್ರದರ್ಶನದ ಮೂಲಕವೇ ಐಪಿಎಲ್ ಮತ್ತು ರಾಷ್ಟ್ರೀಯ ತಂಡದ ಬಾಗಿಲು ತಟ್ಟಿದವರು.
ದಿಯೋದರ್ ಟ್ರೋಫಿ (Deodhar Trophy)
ದಿಯೋದರ್ ಟ್ರೋಫಿ ಒಂದು ದೇಶೀಯ ಏಕದಿನ ಕ್ರಿಕೆಟ್ ಟೂರ್ನಿ. ಕ್ರಿಕೆಟ್ ಪಿತಾಮಹ ಎಂತಲೇ ಕರೆಸಿಕೊಳ್ಳುವ ಸಂಸ್ಕೃತ ಉಪನ್ಯಾಸಕರೂ ಆಗಿದ್ದ ಪ್ರಥಮ ದರ್ಜೆ ಕ್ರಿಕೆಟಿಗ ದಿನಕರ್ ಬಲವಂತ್ ದಿಯೊದರ್ ಅವರ ಹೆಸರಿನಲ್ಲಿ 1973-74 ರಿಂದ ಈ ಟ್ರೋಫಿ ಕೊಡಲಾಗುತ್ತದೆ. ಇದನ್ನು ಐಸಿಐಸಿಐ ಬ್ಯಾಂಕ್ ಪ್ರಾಯೋಜಿಸುತ್ತದೆ. ಭಾರತದಲ್ಲಿ ಬೇರೆ ಬೇರೆ ಟ್ರೋಪಿಗಳಲ್ಲಿ ಗೆದ್ದ ತಂಡಗಳನ್ನು ಎ, ಬಿ, ಸಿ ತಂಡಗಳನ್ನಾಗಿ ವಿಂಗಡಿಸಿ ಆಡಿಸಲಾಗುತ್ತದೆ. ಇಲ್ಲಿ ಆಯ್ಕೆಮಾಡಿದ ಶ್ರೇಷ್ಠ ಆಟಗಾರರ ತಂಡಗಳು ಪರಸ್ಪರ ಸ್ಪರ್ಧಿಸುತ್ತವೆ. ಪ್ರತಿಭಾವಂತ ಆಟಗಾರರಿಗೆ ಹೆಚ್ಚುವರಿ ಅವಕಾಶ ಸಿಗುತ್ತದೆ. ರಾಷ್ಟ್ರಮಟ್ಟದ ಆಯ್ಕೆಗಳಿಗೆ ಸಹಾಯಕವಾಗಿರುತ್ತದೆ.
ದುಲೀಪ್ ಟ್ರೋಫಿ (Duleep Trophy)
ದುಲೀಪ್ ಟ್ರೋಫಿ ಸಹ ಒಬ್ಬ ದೊಡ್ಡ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಹೆಸರಿನಲ್ಲಿ ನಡೆಯುತ್ತದೆ. 1961 ರಿಂದ ಈ ಟೂರ್ನಿ ನಡೆಯುತ್ತಿದೆ. ಪ್ರಥಮ ದರ್ಜೆ ಕ್ರಿಕೆಟ್‌ನ ಮತ್ತೊಂದು ಪ್ರಮುಖ ಟೂರ್ನಿಯಾಗಿದ್ದು, ಸಾಮಾನ್ಯವಾಗಿ ಝೋನ್ ಆಧಾರಿತ ತಂಡಗಳು ಭಾಗವಹಿಸುತ್ತವೆ. ಟೆಸ್ಟ್ ಕ್ರಿಕೆಟ್‌ಗೆ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವಂತದ್ದಾಗಿದೆ. ಇಲ್ಲಿ ಉನ್ನತ ಮಟ್ಟದ ಸ್ಪರ್ಧೆ ಇರಲಿದ್ದು, ಆಟಗಾರರ ನಿಜವಾದ ಪ್ರತಿಭೆಗೆ ಅತ್ಯುತ್ತಮ ಅವಕಾಶವಾಗಿರುತ್ತದೆ.
ಮಹಿಳಾ ಕ್ರಿಕೆಟ್ ಟೂರ್ನಿಗಳು
ಭಾರತದಲ್ಲಿ ಮಹಿಳಾ ಕ್ರಿಕೆಟ್ ಕೂಡ ವೇಗವಾಗಿ ಬೆಳೆಯುತ್ತಿದೆ. ಅವರಿಗಾಗಿ ಮಹಿಳಾ ರಣಜಿ ಟ್ರೋಫಿ, ಮಹಿಳಾ ವಿಜಯ್ ಹಜಾರೆ ಟ್ರೋಫಿ ಮತ್ತು ಮಹಿಳಾ ಟಿ20 ಟ್ರೋಫಿಗಳು ನಡೆಯುತ್ತವೆ. ಇವು ಮಹಿಳಾ ಆಟಗಾರರಿಗೆ ರಾಷ್ಟ್ರಮಟ್ಟದಲ್ಲಿ ಅವಕಾಶ ಒದಗಿಸುತ್ತಿವೆ.
ಭಾರತೀಯ ಕ್ರಿಕೆಟ್‌ನ ಬಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲ, ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿಯೇ ಅಡಗಿದೆ. ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ, ಸಯ್ಯದ್ ಮುಷ್ಟಾಕ್ ಅಲಿ ಟ್ರೋಫಿ ಮುಂತಾದ ಟೂರ್ನಿಗಳು ಹೊಸ ಪ್ರತಿಭೆಗಳಿಗೆ ವೇದಿಕೆ ನೀಡುತ್ತಿವೆ. ದೇಶೀಯ ಕ್ರಿಕೆಟ್ ಬಲಿಷ್ಠವಾಗಿದ್ದರೆ, ರಾಷ್ಟ್ರಮಟ್ಟದ ಕ್ರಿಕೆಟ್ ಸದೃಢವಾಗಿರುತ್ತದೆ. ಇದೇ ಭಾರತೀಯ ಕ್ರಿಕೆಟ್ ಯಶಸ್ಸಿನ ಮೂಲವಾಗಿದೆ.
