ಗಣಿತ (Mathematics) ಎಂಬುದು ಕೇವಲ ಅಂಕಿ–ಸಂಖ್ಯೆಗಳ ವಿಷಯವಲ್ಲ. ಅದು ಮಾನವನ ಚಿಂತನೆ, ತಾರ್ಕಿಕತೆ, ಸಮಸ್ಯೆ ಪರಿಹಾರ ಶಕ್ತಿ ಮತ್ತು ನಿರ್ಣಯ ಸಾಮರ್ಥ್ಯವನ್ನು ರೂಪಿಸುವ ಮೂಲ ಶಾಸ್ತ್ರವಾಗಿದೆ. ದಿನನಿತ್ಯದ ಬದುಕಿನಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಹಾಗೂ ಆಡಳಿತವರೆಗೆ ಗಣಿತದ ಪ್ರಭಾವ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಗಣಿತದ ಮಹತ್ವ ಮತ್ತು ಅದರಿಂದ ಉಂಟಾಗುವ ಉದ್ಯೋಗಾವಕಾಶಗಳನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯ.
ದಿನನಿತ್ಯದ ಜೀವನದಲ್ಲಿ ಗಣಿತದ ಪಾತ್ರ
ನಾವು ಪ್ರತಿದಿನವೂ ಅರಿವಿಲ್ಲದೆ ಗಣಿತವನ್ನು ಬಳಸುತ್ತೇವೆ. ಖರ್ಚು–ಆದಾಯ ಲೆಕ್ಕಾಚಾರ, ಸಮಯ ನಿರ್ವಹಣೆ, ಅಳತೆ–ತೂಕಗಳ ಬಳಕೆ, ಬ್ಯಾಂಕ್ ವ್ಯವಹಾರಗಳು, ಬಡ್ಡಿದರ, EMI ಲೆಕ್ಕ, ಮೊಬೈಲ್ ಡೇಟಾ, ಯೂನಿಟ್ ಬಳಕೆ ಸೇರಿದಂತೆ ಗಣಿತ ವಿಜ್ಞಾನದಷ್ಟೇ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಸರಳ ಗಣಿತ ಜ್ಞಾನ ಇಲ್ಲದೆ ಇದ್ದರೆ ಜೀವನವೇ ಅಸ್ತವ್ಯಸ್ತವಾಗುತ್ತದೆ. ಗಣಿತ ನಮ್ಮ ಬದುಕಿಗೆ ಕ್ರಮ ಮತ್ತು ಶಿಸ್ತು ತರುತ್ತದೆ.
ಗಣಿತ ಮತ್ತು ತಾರ್ಕಿಕ ಚಿಂತನೆ
ಗಣಿತವು ಕೇವಲ ಉತ್ತರಗಳನ್ನು ನೀಡುವುದಲ್ಲ, ಪ್ರಶ್ನೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ಕಲಿಸುತ್ತದೆ. ಯಾವುದೇ ಸಮಸ್ಯೆಯ ಪರಿಹಾರಕ್ಕೆ ಬೇಕಾದ ತಾರ್ಕಿಕ ಚಿಂತನೆ, ವಿಶ್ಲೇಷಣಾತ್ಮಕ ದೃಷ್ಟಿಕೋನ ಮತ್ತು ಸಮಸ್ಯೆ ಪರಿಹಾರ ಕೌಶಲ್ಯ ಈ ಮೂರೂ ಗಣಿತದ ಭಾಗವಾಗಿವೆ. ಇವುಗಳು ಯಾವುದೇ ವೃತ್ತಿಜೀವನದಲ್ಲಿ ಅತ್ಯಂತ ಅವಶ್ಯಕ ಗುಣಗಳಾಗಿವೆ.
ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಗಣಿತ
ಗಣಿತವು ಎಲ್ಲಾ ವಿಜ್ಞಾನ ವಿಷಯಗಳ ತಾಯಿ ಎಂಬಂತೆ ಪರಿಗಣಿಸಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ ,ಇಂಜಿನಿಯರಿಂಗ್, ವೈದ್ಯಕೀಯ ಸಂಶೋಧನೆ ಎಲ್ಲವೂ ಗಣಿತದ ತತ್ವಗಳ ಮೇಲೆ ಆಧಾರಿತವಾಗಿವೆ. ಗಣಿತವಿಲ್ಲದೆ ವೈಜ್ಞಾನಿಕ ಪ್ರಗತಿ ಅಸಾಧ್ಯ.
ತಂತ್ರಜ್ಞಾನ ಯುಗದಲ್ಲಿ ಗಣಿತದ ಅಗತ್ಯ
ಡಿಜಿಟಲ್ ಯುಗದಲ್ಲಿ ಗಣಿತದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಕಂಪ್ಯೂಟರ್ ಪ್ರೋಗ್ರಾಮಿಂಗ್ ,ಆಲ್ಗೋರಿದಮ್ಗಳು, ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್ ಮತ್ತು ಸೈಬರ್ ಭದ್ರತೆಗಳ ಮೂಲ ಆಧಾರ ಗಣಿತವೇ ಆಗಿದೆ.
ಗಣಿತದಿಂದ ಉಂಟಾಗುವ ಉದ್ಯೋಗಾವಕಾಶಗಳು
ಇಂತಹ ಗಣಿತವನ್ನು ಗಂಭೀರವಾಗಿ ಪರಿಗಣಿಸಿದವರಿಗೆ ಹಲವಾರು ವೃತ್ತಿಗಳು , ಉದ್ಯೋಗಾವಕಾಶಗಳಿವೆ. ನೀವು ಗಣಿತದಲ್ಲಿ ಎಂ.ಎಸ್ಸಿ, ಪಿ.ಎಚ್.ಡಿ ಮಾಡಿಕೊಂಡರೆ ಗಣಿತ ಶಿಕ್ಷಕ, ಪ್ರಾಧ್ಯಾಪಕ, ಸಂಶೋಧಕರಾಗಿ ಕೆಲಸ ಮಾಡಬಹುದು. ಎಂಜಿನಿಯರಿಂಗ್ ಓದಿದರೆ ಸಾಫ್ಟ್ ವೇರ್ ಎಂಜಿನಿಯರ್, ಡೇಟಾ ಸೈಂಟಿಸ್ಟ್, ಎಐ/ ಮಷಿನ್ ಲರ್ನಿಂಗ್ ತಜ್ಞ, ಸಿಸ್ಟಮ್ ಅನಾಲಿಸ್ಟ್ ನಂತಹ ಕೆಲಸಗಳಿವೆ.ಬಿಕಾಂ, ಎಂಕಾಂ ಗಳಲ್ಲಿ ಅಕೌಂಟೆನ್ಸಿ ತೆಗೆದುಕೊಂಡರೆ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಆಕ್ಚುಅರಿ, ಆರ್ಥಿಕ ವಿಮರ್ಶೆಗಾರರು, ಹೂಡಿಕೆ ಬ್ಯಾಂಕರ್ ಗಳು, ರಿಸ್ಕ್ ಮ್ಯಾನೇಜರ್, ಅಕೌಂಟೆಂಟ್, ಚಾರ್ಟರ್ಡ್ ಅಕೌಂಟೆಂಟ್ ಆಗಿ ಸಹ ಉದ್ಯೋಗಾವಕಾಶ ಪಡೆಯಬಹುದು. ಯುಪಿಎಸ್ ಸಿ/ಕೆಪಿ ಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು. ಸ್ಟಾಟಿಸ್ಟಿಕಲ್ ಆಫಿಸರ್, ಆರ್ಥಿಕ ಸಲಹೆಗಾರ, ಯೋಜನಾ ಆಯೋಗ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಗಣಿತ ವಿಷಯ ಉತ್ತಮವಾಗಿದ್ದವರಿಗೆ ವಿಫುಲ ಅವಕಾಶಗಳಿವೆ. ಗಣಿತ ಉತ್ತಮವಾಗಿರುವವರಿಗೆ ಆಪರೇಷನ್ಸ್ ಮ್ಯಾನೇಜರ್, ಬ್ಯುಸಿನೆಸ್ ಅನಾಲಿಸ್ಟ್ ಹಾಗೂ ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ತಜ್ಞರಾಗಿ ಕೆಲಸ ಮಾಡುವ ಅವಕಾಶಗಳಿರುತ್ತವೆ. ಇವಲ್ಲದೆ ಇತ್ತೀಚೆಗೆ ಕಂಪ್ಯೂಟರ್ ಆಟಗಳ ಅಭಿವೃದ್ಧಿ, ಕ್ರಿಪ್ಟೊಗ್ರಫಿ, ಫಿನ್ ಟೆಕ್ ಮತ್ತು ಡೇಟಾ / ಮಾಹಿತಿ ವಿಮರ್ಶೆ ಇವುಗಳಲ್ಲಿ ಅತಿ ಹೆಚ್ಚಿನ ಅವಕಾಶಗಳಿವೆ.
ಗಣಿತ ಮತ್ತು ಜೀವನ ಮೌಲ್ಯಗಳು
ಗಣಿತ ವ್ಯಕ್ತಿಗೆ ಸಹನಶೀಲತೆ, ನಿಖರತೆ ಮತ್ತು ಶಿಸ್ತು ಕಲಿಸುತ್ತದೆ. ತಪ್ಪುಗಳಿಂದ ಕಲಿಯುವ ಮನೋಭಾವವನ್ನು ಬೆಳೆಸುತ್ತದೆ. ಜೀವನದಲ್ಲೂ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ದೃಷ್ಟಿಕೋನವನ್ನು ನೀಡುತ್ತದೆ. ಗಣಿತವು ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ಜೀವನದ ಅವಿಭಾಜ್ಯ ಅಂಗ. ಉತ್ತಮ ಜೀವನ, ಉತ್ತಮ ವೃತ್ತಿ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಗಣಿತ ಅತ್ಯಂತ ಅಗತ್ಯ. ವಿದ್ಯಾರ್ಥಿಗಳು ಗಣಿತವನ್ನು ಭಯಪಡುವ ಬದಲು, ಅದನ್ನು ಜೀವನ ಕೌಶಲ್ಯವಾಗಿ ಸ್ವೀಕರಿಸಿದರೆ ಭವಿಷ್ಯದಲ್ಲಿ ಅನೇಕ ಅವಕಾಶಗಳ ಬಾಗಿಲು ತೆರೆಯುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗಣಿತವನ್ನು ಭಯದ ವಿಷಯವಾಗಿ ಬೋಧಿಸಲಾಗುತ್ತಿದೆ. ಅಂಕಗಳ ಒತ್ತಡ ಗಣಿತದ ನಿಜವಾದ ಉದ್ದೇಶವನ್ನು ಮರೆಮಾಚಿದೆ. ಗಣಿತ ಅಂದರೆ ಅಂಕಗಳ ಆಟವಲ್ಲ — ಅದು ಬದುಕನ್ನು ಅರ್ಥಮಾಡಿಕೊಳ್ಳುವ ವಿಧಾನ. ಶಿಕ್ಷಣ ವ್ಯವಸ್ಥೆ ಗಣಿತವನ್ನು ಜೀವನ ಕೌಶಲ್ಯವಾಗಿ ಪರಿಚಯಿಸಿದರೆ, ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಾಗುತ್ತಾರೆ. ಗಣಿತದ ಭಯವಲ್ಲ, ಅದನ್ನು ಬೋಧಿಸುವ ವಿಧಾನ ಬದಲಾಗಬೇಕು.
ಗಣಿತದಿಂದ ಲಭ್ಯವಾಗುವ ಉದ್ಯೋಗಾವಕಾಶಗಳು
| ಕ್ರಮ ಸಂಖ್ಯೆ | ಉದ್ಯೋಗ ಕ್ಷೇತ್ರ | ಪ್ರಮುಖ ಹುದ್ದೆಗಳು | ಅಗತ್ಯ ಗಣಿತ ಕೌಶಲ್ಯಗಳು | ಕೆಲಸದ ವಲಯ |
|---|---|---|---|---|
| 1 | ಶಿಕ್ಷಣ ಕ್ಷೇತ್ರ | ಗಣಿತ ಶಿಕ್ಷಕ, ಪ್ರಾಧ್ಯಾಪಕ, ಸಂಶೋಧಕ | ಅಲ್ಜೆಬ್ರಾ, ಕ್ಯಾಲ್ಕುಲಸ್ | ಶಾಲೆ, ಕಾಲೇಜು, ವಿಶ್ವವಿದ್ಯಾಲಯ |
| 2 | ಇಂಜಿನಿಯರಿಂಗ್ | ಸಾಫ್ಟ್ವೇರ್ ಎಂಜಿನಿಯರ್, ಸಿಸ್ಟಂ ಎಂಜಿನಿಯರ್ | ಲಾಜಿಕ್, ಡಿಸ್ಕ್ರೀಟ್ ಮ್ಯಾಥ್ಸ್ | IT ಕಂಪನಿಗಳು |
| 3 | ಡೇಟಾ ಸೈನ್ಸ್ | ಡೇಟಾ ಅನಾಲಿಸ್ಟ್, ಡೇಟಾ ಸೈನ್ಟಿಸ್ಟ್ | ಸ್ಟಾಟಿಸ್ಟಿಕ್ಸ್, ಪ್ರಾಬಬಿಲಿಟಿ | IT, ಕಾರ್ಪೊರೇಟ್ |
| 4 | ಕೃತಕ ಬುದ್ಧಿಮತ್ತೆ (AI) | ML ಎಂಜಿನಿಯರ್, AI ರಿಸರ್ಚರ್ | ಲಿನಿಯರ್ ಅಲ್ಜೆಬ್ರಾ | ಟೆಕ್ ಕಂಪನಿಗಳು |
| 5 | ಬ್ಯಾಂಕಿಂಗ್ & ಫೈನಾನ್ಸ್ | ಫೈನಾನ್ಷಿಯಲ್ ಅನಾಲಿಸ್ಟ್, ಅಕ್ಟ್ಯುರಿ | ಅಂಕಿಅಂಶಗಳು, ಹಣಕಾಸು ಗಣಿತ | ಬ್ಯಾಂಕುಗಳು, ವಿಮಾ ಸಂಸ್ಥೆಗಳು |
| 6 | ಸರ್ಕಾರಿ ಸೇವೆಗಳು | ಸ್ಟಾಟಿಸ್ಟಿಕಲ್ ಆಫೀಸರ್, ಯೋಜನಾ ಅಧಿಕಾರಿ | ಅಂಕಿಅಂಶ ಗಣಿತ | ಕೇಂದ್ರ/ರಾಜ್ಯ ಸರ್ಕಾರ |
| 7 | ಸಂಶೋಧನೆ | ಗಣಿತಜ್ಞ, ವಿಜ್ಞಾನ ಸಂಶೋಧಕ | ಉನ್ನತ ಗಣಿತ ವಿಶ್ಲೇಷಣೆ | ISRO, DRDO, IISc |
| 8 | ಆರ್ಥಿಕತೆ | ಅರ್ಥಶಾಸ್ತ್ರಜ್ಞ, ಪಾಲಿಸಿ ಅನಾಲಿಸ್ಟ್ | ಗಣಿತ ಮಾದರೀಕರಣ | ಥಿಂಕ್ ಟ್ಯಾಂಕ್ಗಳು |
| 9 | ಸೈಬರ್ ಭದ್ರತೆ | ಕ್ರಿಪ್ಟೋಗ್ರಫಿ ತಜ್ಞ | ಸಂಖ್ಯಾ ಸಿದ್ಧಾಂತ | IT ಸುರಕ್ಷತೆ |
| 10 | ಗೇಮ್ ಡೆವಲಪ್ಮೆಂಟ್ | ಗೇಮ್ ಡಿಸೈನರ್, ಪ್ರೋಗ್ರಾಮರ್ | ಜ್ಯಾಮಿತಿ, ಲಾಜಿಕ್ | ಗೇಮಿಂಗ್ ಇಂಡಸ್ಟ್ರಿ |
| 11 | ಫಿನ್ಟೆಕ್ | ರಿಸ್ಕ್ ಅನಾಲಿಸ್ಟ್, ಕ್ವಾಂಟ್ ಅನಾಲಿಸ್ಟ್ | ಪ್ರಾಬಬಿಲಿಟಿ, ಸ್ಟಾಟಿಸ್ಟಿಕ್ಸ್ | ಫಿನ್ಟೆಕ್ ಕಂಪನಿಗಳು |
| 12 | ಲಾಜಿಸ್ಟಿಕ್ಸ್ | ಆಪರೇಷನ್ಸ್ ಮ್ಯಾನೇಜರ್ | ಆಪ್ಟಿಮೈಸೇಶನ್ | ಕೈಗಾರಿಕೆ, ಇ-ಕಾಮರ್ಸ್ |
