–ವಿಶೇಷ ವರದಿ
ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ಗೆ ಭದ್ರಬುನಾದಿಯಾಗಿರುವ ಕರ್ನಾಟಕದಲ್ಲೂ ಪಕ್ಷ ಮನೆಯೊಂದು ಮೂರು ಬಾಗಿಲಾಗಿದೆ. ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಬಣದ ಮಧ್ಯೆ ಕಾಳಗ ಇದೀಗ ತಾರಕಕ್ಕೇರಿದೆ. ಸಿದ್ದರಾಮಯ್ಯ ಬಳಿಕ ಸಿಎಂ ಸ್ಥಾನಕ್ಕೆ ಟವಲ್ ಹಾಕಿರುವ ಡಿಕೆಶಿ ಆಸೆಗೆ ತಣ್ಣೀರೆರಚಲು ಸಿದ್ದು ಬಣದ ನಾಯಕರು ಮುಂದಾಗಿದ್ದಾರೆ. ಡಿಸಿಎಂ ವಿರುದ್ಧ ದಲಿತಾಸ್ತ್ರ ಬಿಡಲು ಸಿದ್ದರಾಮಯ್ಯ ಬೆಂಬಲಿಗರು ಹೊರಟ್ಟಿದ್ದಾರೆ. ಹೀಗಾಗಿ ಡಿನ್ನರ್ ಮಿಟಿಂಗ್ ನೆಪದಲ್ಲಿ ಡಿಸಿಎಂ ವಿರುದ್ಧ ರಣತಂತ್ರ ರೂಪಿಸುತ್ತಿದ್ದರು.
ಸಿಎಂ ಬೆಂಬಲಿಗರ ತಂತ್ರ ಅರಿತ ಕಾಂಗ್ರೆಸ್ನ ಚುನಾವಣಾ ಚಾಣಕ್ಯ ಡಿಕೆಶಿ ಇದೀಗ ವಿರೋಧಿಗಳಿಗೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಡಿನ್ನರ್ ಕೂಟಗಳಿಗೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿದ್ದಾರೆ. ಯಾವುದೇ ರೀತಿಯ ಡಿನ್ನರ್ ಪಾಲಿಟಿಕ್ಸ್ ನಡೆಸದಂತೆ ಹೈಕಮಾಂಡ್ ನಿಂದ ಖಡಕ್ ಸೂಚನೆ ಹೊರಡಿಸುವಲ್ಲಿ ಚಾಣಕ್ಯ ಡಿಕೆಶಿ ಸಫಲರಾಗಿದ್ದಾರೆ.
ಆದರೆ, ಇದು ಸಿಎಂ ಬೆಂಬಲಿಗರನ್ನ ಕೆರಳಿಸಿದ್ದು, ಸಚಿವ ಕೆ ಎನ್ ರಾಜಣ್ಣ ಬಹಿರಂಗವಾಗಿಯೇ ಡಿಸಿಎಂ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವದಕ್ಕೂ ಸೊಪ್ಪುಹಾಕದ ‘ಕನಕಪುರ ಬಂಡೆ’ ಇಷ್ಟಾರ್ಥ ಸಿದ್ಧಿಗಾಗಿ ಟೆಂಪಲ್ ರನ್ ಪ್ರಾರಂಭಿಸಿದ್ದಾರೆ. ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಡಿ.ಕೆ ಶಿವಕುಮಾರ್ ಟೆಂಪಲ್ರನ್!
- ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಪ್ರಯಾಣ
- ಪ್ರತ್ಯಂಗೀರಾ ದೇವರು & ಕಾಂಚೀಪುರಂನ ದೇಗುಲಕ್ಕೆ ಭೇಟಿ
- ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ಭೇಟಿಯ ಮಾಹಿತಿ
- ಬೆಳಿಗ್ಗೆ 10:30ಕ್ಕೆ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಕೆ
- ಬೆಳಗ್ಗೆ 11:30ಕ್ಕೆ ವರದರಾಜು ಪೆರುಮಾಳ್ ದೇವರ ದರ್ಶನ
- 2 ದೇಗುಲಗಳ ದರ್ಶನ ಬಳಿಕ ಸಂಜೆ ಬೆಂಗಳೂರಿಗೆ ವಾಪಸ್
ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದರು. ಅಲ್ಲಿ ಪ್ರತ್ಯಂಗೀರಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನ ಮಾಡಿಸಿದರು. ಬಳಿಕ 11:30ಕ್ಕೆ ಕಾಂಚಿಪುರಂನ ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿಕೆಶಿ ಭೇಟಿ :
ಈ ಹಿಂದೆ ಕುಂಭಕೋಣಂನಿಂದ ಬೆಂಗಳೂರಿಗೆ ಆಗಮಿಸಿ ಅರ್ಚಕರ ಸಮ್ಮುಖದಲ್ಲಿ ಹೋಮ- ಹವನ ನಡೆಸಿದ್ದರು. ಹೀಗಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಅಂತ ಅರ್ಚಕರು ಸಲಹೆ ನೀಡಿದ್ದರು. ಈ ಹಿನ್ನೆಲೆ ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಇನ್ನು ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಇದರ ನಡುವೆ ಡಿ.ಕೆ ಶಿವಕುಮಾರ್ ಆರಂಭಿಸಿದ ಟೆಂಪಲ್ ರನ್ ಕುತೂಹಲಕ್ಕೆ ಕಾರಣವಾಗಿದೆ.






