ಯಾಕೋ ಶೋಭಕ್ಕನ ಲಕ್ ಸರಿಯಿಲ್ಲ. ಮೊದಲು ಕ್ಷೇತ್ರ ಹೋಯಿತು. ಯಡಿಯೂರಪ್ಪ ಪ್ರಯತ್ನ ಪಟ್ಟು ಇನ್ನೊಂದು ಕ್ಷೇತ್ರ ಕೊಡಿಸಿದರು. ಅಲ್ಲಿ ಬಂಡಾಯದ ಬೇಗುದಿ.
ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಕಾರಿನ ಡೋರ್ ತಗುಲಿ ಬೈಕ್ ಪಲ್ಟಿ; ಖಾಸಗಿ ಬಸ್ ಹರಿದು ಬಿಜೆಪಿ ಕಾರ್ಯಕರ್ತ ದುರ್ಮರಣ
ಶೋಭಕ್ಕ ಇವತ್ತು ಕೆ,ಆರ್. ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ವಿನಾಯಕ ದೇವಾಲಯದ ಬಳಿ ಬಂದಾಗ ದೇವರ ದರ್ಶನ ಮಾಡೋಣ ಅನ್ನಿಸಿತು. ದೇವಾಲಯದ ಒಳಗೆ ನಡೆದರು.
ಅವರ ಕಾರು ಕೆ ಆರ್ ಪುರಾ ಬಸ್ ನಿಲ್ದಾಣದ ಬಳಿ ನಿಂತಿತ್ತು. ವಾಹನ ಚಾಲಕ ಕಾರಿನ ಬಾಗಿಲು ತೆಗೆದ. ಹಿಂದೆ ಮುಂದೆ ನೋಡಿದನೋ ಬಿಟ್ಟನೋ ? ಕೇಂದ್ರ ಮಂತ್ರಿಗಳ ಕಾರ್ ಚಾಲಕ ತಾನೇ. ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ.
ಸರಿ ಅಪಘಾತ ನಡೆದೇ ಹೋಯಿತು. ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಕಾಶ್ ಎಂಬವರು ಕಾರಿನ ಡೋರ್ ಗೆ ಬಡಿದು ಬಿಟ್ಟರು. ಹಾಗೆ ಬಿದ್ದರು. ಅವರ ಮೇಲೆ ಅಲ್ಲಿಯೇ ಬರುತ್ತಿದ್ದ ಬಸ್ ಬರಿದು ಹೋಯಿತು.ಪ್ರಕಾಶ್ ಮೃತ ಪಟ್ಟರು.
ಅವರಿಗೆ ೬೦ ವರ್ಷ ವಯಸ್ಸಾಗಿತ್ತು.
ಸ್ಥಳಕ್ಕೆ ಕೆ.ಆರ್. ಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಕೆಆರ್ ಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಅಪಘಾತ ಸಂಬಂಧ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ನೀಡಿದ ವಿವರಣೆ;
, ಮೃತ ಪ್ರಕಾಶ್ ಬಿಜೆಪಿ ಕಾರ್ಯಕರ್ತ. ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಡೋರ್ ತೆರೆಯುವಾಗ ಬೈಕ್‌ನಲ್ಲಿ ಬಂದು ಗುದ್ದಿದ್ದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್ ಅವರ ಮೇಲೆ ಹರಿದು ಮೃತಪಟ್ಟಿದ್ದಾರೆ. ಈ ಘಟನೆ ನಿಜಕ್ಕೂ ದುಃಖ ತಂದಿದೆ. ಅವರ ಕುಟುಂಬಸ್ಥರ ಜತೆಗೆ ನಾವಿದ್ದೇವೆ. ಪಾರ್ಟಿ ವತಿಯಿಂದ ಪರಿಹಾರ ಕೊಡುತ್ತೇವೆ.
