ಹಾವೇರಿ: ಶಿಗ್ಗಾವಿ ಕ್ಷೇತ್ರದ ಚುನಾವಣೆಯ ಗೆಲುವು, ಈ ಕ್ಷೇತದ ಭವಿಷ್ಯ, ಅಭಿವೃದ್ಧಿ ಮತ್ತು ಕ್ಷೇತ್ರದ ಸಾಮರಸ್ಯದ ಬದುಕು ಕಾಪಾಡಲಿದೆ. ಈ ಕ್ಷೇತ್ರದಲ್ಲಿ ಸಾಮರಸ್ಯ ಕದಲುತ್ತಿದೆ. ದ್ವೇಷದ ರಾಜಕಾರಣ ಬರುತ್ತಿದೆ. ಪೊಲೀಸ್ ಸ್ಟೇಷನ್ ರಾಜಕಾರಣ ಮಾಡುತ್ತಿದೆ. ಇದು ಮುಂದುವರೆಯಬಾರದು. ನಮಗೆ ಜಾತಿ, ಮತ ಧರ್ಮ ಇಲ್ಲ. ನಮ್ಮಲ್ಲಿ ನ್ಯಾಯ, ನೀತಿ ಇದೆ. ಈ ಚುನಾವಣೆ ನಮ್ಮ ನಿಮ್ಮೆಲ್ಲರ ಭವಿಷ್ಯದ ಚುನಾವಣೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಹೇಳಿದರು.
ಅವರು ಶಿಗ್ಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇವತ್ತು ಪಕ್ಷದ ವರಿಷ್ಠರು ಉಪ ಚುನಾವಣೆ ವಿಶೇಷ ಸಂದರ್ಭ ಇದನ್ನು ಗೆಲ್ಲುವ ಅವಕಾಶ ಇದೆ. ಮೂರು ಸರ್ವೆ ಮಾಡಿದ್ದೇವೆ. ಇದು ನಮ್ಮ ನಿರ್ಣಯ, ನೀವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಮಾತನಾಡುವ ಮೊದಲೇ ಪಟ್ಟಿ ಸಿದ್ಧಪಡಿಸಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಸಿದ್ದರಾಗಿದ್ದರು. ನಾನು ಎಷ್ಟೇ ಪಯತ್ನ ಮಾಡಿದರೂ ನಿಮ್ಮ ಛಲ, ನಿಮ್ಮ ಹಠ ಜಯಗಳಿಸಿದೆ. ನನ್ನ ಛಲ ಹಠ ನಿಮ್ಮ ಮುಂದೆ ನಾನು ತಲೆ ಬಾಗಿದ್ದೇನೆ. ನಾಯಕರಿಗಿಂತ ನಾಯಕರನ್ನು ಮಾಡಿದ ಮಹಾಜನತೆಯ ಶಕ್ತಿ ದೊಡ್ಡದು ಎಂದು ತಾವು ತೋರಿಸಿದ್ದೀರಿ ಎಂದು ಹೇಳಿದರು.
ವಿಶ್ವಾಸ, ಸಂಬಂಧ ಆತ್ಮೀಯತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾವ ಜನ್ಮದ ಋಣ ಇದೆಯೋ ಗೊತ್ತಿಲ್ಲ. ಕರ್ನಾಟಕದ ಯಾವ ರಾಜಕಾರಣಿಗೆ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಅಷ್ಟು ಪೀತಿ ವಿಶ್ವಾಸ ನನಗೆ ಸಿಕ್ಕಿದೆ. ರಾಜಕೀಯ, ನೈಸರ್ಗಿಕ, ಆಡಳಿತಾತ್ಮಕ ಸಂಕಷ್ಟ, ಸಾಮಾಜಿಕ ಸಂಕಷ್ಟ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಪ್ರವಾಹ ಬಂದ ಸಂದರ್ಭದಲ್ಲಿ ಹಲವಾರು ಮನೆಗಳು ಬಿದ್ದವು. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಐದು ಲಕ್ಷ ರೂಪಾಯಿ ಪರಿಹಾರ ನೀಡಿ, ಸುಮಾರು 18 ಸಾವಿರ ಮನೆಗಳನ್ನು ಈ ಕ್ಷೇತದಲ್ಲಿ ಕಟ್ಟಿದ್ದೇವೆ. ಇದೊಂದು ದೊಡ್ಡ ದಾಖಲೆ ಎಂದು ಹೇಳಿದರು.
ನಾನು ಯಾವುದಾದರೂ ಊರಿಗೆ ಹೋದರೆ, ಜನರು ತಮ್ಮ ಮನೆಗೆ ಕರೆದು ಇದು ನೀವು ಕಟ್ಟಿದ ಮನೆ ಎಂದು ತೋರಿಸಿ ಪ್ರೀತಿ ತೋರಿಸಿದ್ದಾರೆ. ಆ ಮನೆಗಳನ್ನು ನೋಡಿ ನನ್ನ ಮನೆಕ್ಕಿಂತ ಹೆಚ್ಚು ಸಂತೋಷ ಪಟ್ಟಿದ್ದೇನೆ. ಬಡ ಕುಟುಂಬಕ್ಕೆ ಆಶ್ರಯ ಸಿಕ್ಕಿದೆ. ಹೆಂಡತಿ ಮಕ್ಕಳು ಸುಖವಾಗಿರುತ್ತಾರೆ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಕಲಿಯುತ್ತಾರೆ. ಅವರಿಗೆ ಆರ್‌ಸಿಸಿ ಮನೆ ಸಿಗುತ್ತದೆ ಎಂದು ಜೀವನದಲ್ಲಿ ಕನಸು ಕಂಡಿರಲಿಲ್ಲ. ಬಡವರು ಏನೂ ಕೇಳುವುದಿಲ್ಲ. ಕೇವಲ ಗೌರವ ಕೇಳುತ್ತಾರೆ. ಗೌರವ ಸ್ವಾಭಿಮಾನ ಹೇಗೆ ಬರುತ್ತದೆ ಎಂದರೆ ತಲೆಗೊಂದು ಸೂರು ಮೈಮೇಲೆ ಬಟ್ಟೆ, ಕೈಗೊಂದು ಕೆಲಸ, ಹೊಟ್ಟೆಗೆ ಅನ್ನ ಸಿಕ್ಕಾಗ ಗೌರವ ಸ್ವಾಭಿಮಾನ ಬರುತ್ತದೆ ಎಂದರು.
ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದೇನೆ :
2008 ರಲ್ಲಿ ಕ್ಷೇತ್ರಕ್ಕೆ ಬಂದಾಗ ಅಭಿವೃದ್ಧಿಯ ಕಲ್ಪನೆಯನ್ನು ಹಂಚಿಕೊಂಡಿದ್ದೆ, ಆಗ ನಾನು ನಿಮ್ಮ ಜೊತೆಗೆ ಬದುಕುತ್ತೇನೆ. ನಿಮ್ಮ ಜೊತೆಗೆ ಸಾಯುತ್ತೇನೆ ಎಂದು ಹೇಳಿದ್ದೆ. ಬಂದುಗಳೆ ಈ ಚುನಾವಣೆ ಬಂದಾನ ನಾನು ನಿರ್ಲಿಪ್ತನಾಗಿದ್ದೇನೆ. ನನ್ನ ಮೇಲೆ ಒತ್ತಡವನ್ನು ಹಾಕಿದ್ದೀರಿ, ನೀವು ಜಯಶಾಲಿಯಾಗಿದ್ದೀರಿ. ನಾನು ಯಾರಿಗೂ ಆಶ್ವಾಸನೆಯನ್ನು ಕೊಟ್ಟಿರಲಿಲ್ಲ. ಹಲವಾರು ಜನರು ಬಂದಿದ್ದರು. ಸುಮಾರು 57 ಜನರು ಅರ್ಜಿ ಹಾಕಿದ್ದರು. ಸುಮಾರು ಎಂಟು ಹತ್ತು ಜನ ದೊಡ್ಡ ಪ್ರಮಾಣದಲ್ಲಿ ಓಡಾಡಿದ್ದರು. ಅಷ್ಟು ಜನರು ಆಕಾಂಕ್ಷಿಗಳಿದ್ದಾಗ ಯಾರೋ ಒಬ್ಬರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಲು ಸಾಧ್ಯವೇ ? ರಾಜಕೀಯ ಅನುಭವ ಇರುವವರು ಯಾರೂ ಹೇಳುವುದಿಲ್ಲ. ನಾನು ಯಾರಿಗೂ ಮಾತು ಕೊಟ್ಟಿಲ್ಲ. ಮಾತು ತಪ್ಪಿಲ್ಲ. ನನಗೆ ಯಾವಾಗ ಅವಕಾಶ ಸಿಕ್ಕಿದೆ. ಎಲ್ಲ ಸಮುದಾಯಗಳ ಕಾರ್ಯಕರ್ತರಿಗೆ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ನಾನು ಈ ಕ್ಷೇತಕ್ಕೆ ಬರುವ ಮೊದಲು ಇಲ್ಲಿಂದ ಯಾರೂ ವಿಧಾನ ಪರಿಷತ್ ಸದಸ್ಯರಾಗಿರಲಿಲ್ಲ. ನಿಗಮಗಳ ಅಧ್ಯಕ್ಷರಾಗಿರಲಿಲ್ಲ. ಯಾವುದೇ ಪ್ರಶಸ್ತಿಗಳು ಬಂದಿರಲಿಲ್ಲ. ಯಾರೂ ಗುರುತಿಸಿರಲಿಲ್ಲ. ಸಾಕಷ್ಟು ಹುದ್ದೆಗಳು ಸಿಕ್ಕಿವೆ. ಇದು ನನಗೆ ಸಮಾಧಾನ ಇದೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.
ಭಾವೈಕ್ಯದ ನಾಡು :
ಸಂತ ಶಿಶುನಾಳ ಶರೀಫರು ಹುಟ್ಟಿದ ನಾಡಿದು, ಗೋವಿಂದಾಚಾರ್ಯರ ಕರ್ಮಭೂಮಿ, ಭಾವೈಕ್ಯದ ನಾಡು. ನಾನು ಬಂದ ಮೇಲೆ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇದರಿಂದ ನನಗೆ ಸಂತೋಷ, ಸಮಾಧಾನ ಇದೆ. ಯಾರೂ ಅರ್ಜಿ ಕೊಟ್ಟು ಹುಟ್ಟಿರುವುದಿಲ್ಲ. ಸಾವು ನಮ್ಮ ಕೈಯಲ್ಲಿಲ್ಲ. ಬದುಕು ನಮ್ಮ ಕೈಯಲ್ಲಿದೆ. ಯಾವುದಾದರೂ ಪ್ರಾಣಿಗೆ ಅಭಿವ್ಯಕ್ತಿ ಶಕ್ತಿ ಕೊಟ್ಟಿದ್ದರೆ ಅದು ಮಾನವನಿಗೆ ಮಾತ್ರ.
ಕನಕದಾಸರು ಕುಲಕುಲವೆಂದು ಹೊಡೆದಾಡದಿರಿ ನೀವು ಯಾವ ಕುಲುವೆಂದು ಬಲ್ಲಿರಾ ಎಂದು ಹೇಳಿದ್ದಾರೆ. ಅವರು ನಮ್ಮ ನಾಡಿನಲ್ಲಿ ಹುಟ್ಟಿದ್ದಾರೆ. ಅವರ ಬಗ್ಗೆ ಒಂದು ಸಣ್ಣ ಕುರುಹೂ ಇರಲಿಲ್ಲ. ಇಡೀ ಜಗತ್ತು ಅವರ ವಿಚಾರಧಾರೆಗಳನ್ನು ನೋಡುವಂತೆ ಅದ್ಭುತ ಕೋಟೆ ನಿರ್ಮಾಣ ಮಾಡಿದ್ದೇವೆ. ಸಂತ ಶಿಶುನಾಳ ಶರೀಫರ ನಾಡನ್ನು ಅದ್ಭುತವಾಗಿ ಜನ ಸಮೂಹ ನೋಡುವಂತೆ ಮಾಡಿದ್ದೇವೆ. ಅಷ್ಟೇ ಅಲ್ಲ, ಈ ನಾಡನ್ನು ಆಳಿದ ಸವಣೂರು ನವಾಬರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದರು. ಅವರ ಕಾಲದಲ್ಲಿ ಸವಣೂರು ಅಭಿವೃದ್ಧಿ, ಕೆರೆ ಕಟ್ಟೆ ನಿರ್ಮಾಣ ಮಾಡಿದ್ದರು. ಅವರ ಅರಮನೆಯನ್ನು ಅಭಿವೃದ್ಧಿ ಮಾಡಿದ್ದೇವೆ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಹಿತ ರಕ್ಷಣೆ ಮಾಡುತ್ತೇವೆ ಎಂದವರು ತಿರುಗಿಯೂ ನೋಡಿರಲಿಲ್ಲ ಎಂದು ಹೇಳಿದರು.
ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ :
ನಾನು ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ನಾನು ಅನ್ಯಾಯ ಮಾಡಿಲ್ಲ. ನನ್ನ ನೀತಿ, ನ್ಯಾಯ ಎಲ್ಲಿಯೂ ಬದಲಾಗಿಲ್ಲ. ನನಗೆ ಸಂತೋಷ ಇದೆ. ನಾನು ಬೆಳೆಸಿವ ಹುಡುಗರು ಶಕ್ತಿಶಾಲಿಯಾಗಿದ್ದಾರೆ. ನನಗೆ ಸಂತೋಷ ಇದೆ. ಆ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕು. ನೀವು ನನ್ನ ವರಿಷ್ಠರು. ಪಕ್ಷದ ವರಿಷ್ಠರ ತೀರ್ಮಾನ ನಿಮ್ಮ ತೀರ್ಮಾನ ಒಂದೇ ಆಗಿದೆ. ನೀವು ಗೆದ್ದಿದ್ದೀರಿ, ಚುನಾವಣೆಯನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮಮೇಲಿದೆ. ಪ್ರತಿಯೊಂದು ಬೂತ್‌ಗೆ ಹೋಗಿ, ಪ್ರತಿಯೊಂದು ಮನೆಗೂ ಹೋಗಿ ಮತ ಕೇಳಬೇಕು. ನಾವು ಅಧಿಕಾರದಲ್ಲಿದ್ದಾಗ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಸ್ತ್ರೀ ಶಕ್ತಿ ಸಂಘಗಳಿಗೆ ಅನುದಾನ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಸುಮಾರು 5 ಸಾವಿರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ಹತ್ತು ಸಾವಿರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ. ಒಂದೇ ಒಂದು ಕೈಗಾರಿಕೆ ಇರಲಿಲ್ಲ. ಮೂಲಭೂತ ಸೌಕರ್ಯಗಳು ಇರಲಿಲ್ಲ. ಸಾವಿರಾರು ಕಿಮೀ ರಸ್ತೆಗಳ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಿದ್ದೇವೆ. ಆರೋಗ ಶಿಕ್ಷಣಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದೇವೆ ಎಂದರು.
ಹಬ್ಬ ಹರಿದಿನಗಳ ಆಚರಣೆ, ಜಾತ್ರೆಗಳ ಆಚರಣೆ ಸಂದರ್ಭದಲ್ಲಿ ಎಲ್ಲ ಸಮುದಾಯಗಳಿಗೂ ಸಹಾಯ ಮಾಡಿದ್ದೇನೆ. ನನಗೆ ಯಾರು ಮತ ಹಾಕಿದ್ದಾರೆ. ಯಾರು ಹಾಕಿಲ್ಲ ಎಂದು ನೋಡದೇ ಸಹಾಯ ಮಾಡಿದ್ದೇನೆ. ಸ್ವಚ್ಛ ಆಡಳಿತವನ್ನು ನೀಡಿದ್ದೇನೆ. ಅಭಿವದ್ಧಿಯ ಪರ್ವದ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ನೀಡುವ, ದೀನ ದಲಿತರ, ಬಡವರ, ರೈತರ ಕೆಲಸವನ್ನು, ಹೆಣ್ಣು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕೆಲಸ ಮಾಡಿದ್ದೇನೆ. ಎರಡು ಪಾಲಿಟೆಕ್ನಿಕ್ ಎರಡು ಐಲು, ಮೆಡಿಕಲ್ ಕಾಲೇಜು ತಂದಿದ್ದೇವೆ ಎಂದರು
ನಿಮ್ಮ ಮಡಿಲಿಗೆ ಹಾಕುತ್ತೇನೆ :
ನಾನು ನಿಮ್ಮ ಸೇವೆ ಮಾಡಲು ಭರತನನ್ನು ನಿಮ್ಮ ಮಡಿಲಿಗೆ ಹಾಕುತ್ತೇನೆ. ನಿಮ್ಮ ಮಗನಾಗಿ, ನಿಮ್ಮ ಸಹೋದರನಾಗಿ ಅವನಿಗೆ ಆಶೀರ್ವಾದ ಮಾಡಿ, ನಿಮ್ಮ ಸೇವೆ ಮಾಡಲು ಅವನಿಗೆ ಅವಕಾಶ ಮಾಡಿಕೊಡಿ, ಒಂದು ಇತಿಹಾಸ ನಿರ್ಮಾಣ ಆಗಲಿದೆ ಎಂದರು.
ಇದೇ ವೇಳೆ ಭರತ್ ಬೊಮ್ಮಾಯಿಗೆ ನೀನು ದೀನದಲಿತರು, ಬಡವರು, ತಾಯಂದಿರು, ಯುವಕರ ಹಿತ ಕಾಯುವ ಕೆಲಸ ಮಾಡಬೇಕು. ಮುಂದಿನ ಸಾರ್ವಜನಿಕ ಜೀವನದಲ್ಲಿ ಜನರು ಮಾಡುವ ಆದೇಶ ಪಾಲನೆ ಮಾಡಬೇಕು. ನನಗಿಂತ ಹೆಚ್ಚು ಅಭಿವೃದ್ಧಿ ಮಾಡಿ, ಹೆಚ್ಚು ಪ್ರೀತಿ ವಾತ್ಸಲ್ಯ ಪಡೆದುಕೊ, ಅದಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೃದಯ ಶ್ರೀಮಂತಿಕೆಯ ಜನ ಇದ್ದಾರೆ. ಅವರು ಯಾರ ಮಾತನ್ನೂ ಕೇಳದೇ ಆತ್ಮಸಾಕ್ಷಿಯಾಗಿ ಚುನಾವಣೆ ಮಾಡಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಅಕ್ಟೋಬರ್ 25 ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದೇನೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು. ಅಂದೇ ಈ ಚುನಾವಣೆಯ ಭವಿಷ್ಯ ಬರೆಯಬೇಕು. ಅವತ್ತೇ ವಿಜಯೋತ್ಸವ ಆಗಬೇಕು. ಅಧಿಕಾರ ‘ಇರಲಿ ಅಧಿಕಾರ ಇಲ್ಲದಿರಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಸಿ. ಪಾಟೀಲ್, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.
