ಸಂವಿಧಾನದಲ್ಲಿರುವ ಹಕ್ಕುಗಳನ್ನು ತಿಳಿಯಲು ಸಂವಿಧಾನ ಓದಲೇಬೇಕಾದ ಅಗತ್ಯವಿದೆ: CM ಸಿದ್ದರಾಮಯ್ಯ

CM SIddaramaiah: ಸ್ವಾತಂತ್ರ್ಯ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ಸಿಗಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದಲೇ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು.

ಬೆಂಗಳೂರು : ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಸಂವಿಧಾನ ಓದು ಅಭಿಯಾನ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.

ವಿಶ್ವದ ಎಲ್ಲ ಸಂವಿಧಾನಗಳಲ್ಲಿ ನಮ್ಮದು ಅತ್ಯಂತ ಶ್ರೇಷ್ಠ ಸಂವಿಧಾನ. ಸಂವಿಧಾನ ಪ್ರತಿಪಾದಿಸುವುದು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವನ್ನು. ಸಂವಿಧಾನ ಒಳ್ಳೆಯವರ ಕೈಯಲ್ಲಿ ಹೋದಾಗ ಒಳ್ಳೆಯದು, ಕೆಟ್ಟವರ ಕೈಯಲ್ಲಿದ್ದಾಗ ಕೆಟ್ಟದ್ದು ಆಗುವ ಸಂಭವವಿರುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿರುವಂತೆ ಸಂವಿಧಾನದ ಸಫಲತೆ, ವಿಫಲತೆ ಇರುವುದು ಕಾರ್ಯರೂಪಕ್ಕೆ ತರುವವರ ಕೈಯಲ್ಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂವಿಧಾನ ಪೀಠಿಕೆಯಲ್ಲಿ ಇಡೀ ಸಂವಿಧಾನದ ಸಾರಾಂಶ ಇದೆ. ಸಂವಿಧಾನ ಅಂಗೀಕಾರಗೊಂಡ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ಸಾಮಾಜಿಕ ವೈರುಧ್ಯವಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಎಚ್ಚರಿಸಿದ್ದರು. ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಲು ಕಾರಣ ಜಾತಿ ವ್ಯವಸ್ಥೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಸಮಾನ ಅವಕಾಶಗಳನ್ನು ನೀಡದೇ ಹೋದಲ್ಲಿ ಸಮಾಜದಲ್ಲಿ ಸಮಾನತೆ ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ಸ್ವಾತಂತ್ರ್ಯ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ಸಿಗಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದಲೇ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಅದರ ಆಶಯಗಳನ್ನು ತಿಳಿದುಕೊಳ್ಳಬೇಕು ಎಂದರು.

ಪ್ರತಿ ಸರ್ಕಾರವೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಮೂಲಭೂತವಾಗಿ ನಾವೆಲ್ಲ ಮನುಷ್ಯರು ಪರಸ್ಪರ ಪ್ರೀತಿ, ಗೌರವಗಳಿರಬೇಕು ಅದೇ ನಾಡು ನುಡಿ ದೇಶಕ್ಕೆ ನೀಡುವ ಕೊಡುಗೆ ಎಂದರು.

ಕುವೆಂಪು ಅವರು ಹೇಳಿರುವಂತೆ ವಿಶ್ವಮಾನವರಾಗಿ ಹುಟ್ಟುತ್ತೇವೆ, ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗಿ ಬಿಡುತ್ತೇವೆ. ಕಂದಾಚಾರ, ಮೌಢ್ಯ ಗಳಿಗೆ ಸಂವಿಧಾನದಲ್ಲಿ ಜಾಗವಿಲ್ಲ. 850 ವರ್ಷಗಳ ಹಿಂದೆ ಬಸವಾದಿ ಶರಣರು ಪ್ರತಿಪಾದಿಸುವುದು ಇದನ್ನೇ. ಅವರು ಹೇಳಿರುವುದೂ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದೇ ಎಂದು ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ತಿಳಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ 2018ರಲ್ಲಿ ಸಂವಿಧಾನ ಓದು ಪುಸ್ತಕ ರಚನೆ ಮಾಡಿದ್ದಾರೆ. ವಿದ್ಯಾರ್ಥಿಗಳು, ವಕೀಲರು, ನಾಗರಿಕರು, ಸಂಘ ಸಂಸ್ಥೆಗಳು ಪ್ರತಿಯೊಬ್ಬರಲ್ಲೂ ಸಂವಿಧಾನ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ರಾಜ್ಯದಾದ್ಯಂತ ಪದವಿ, ಸ್ನಾತಕೋತ್ತರ ಸೇರಿದಂತೆ ಒಟ್ಟು 200 ಕಾಲೇಜುಗಳ 397 ವಿದ್ಯಾರ್ಥಿಗಳು ಸಂವಿಧಾನ ಓದು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕೋಲಾರದ ಬಸವೇಶ್ವರ ಕಾನೂನು ಕಾಲೇಜು ವಿದ್ಯಾರ್ಥಿ ಹೆಚ್.ಹೆಚ್. ಶ್ರೀವಿದ್ಯಾ ಪ್ರಥಮ, ಕೊಪ್ಪಳದ ಎಸ್.ಪಿ.ಎಸ್.ಜೆ.ಎಸ್ ಕಾಲೇಜಿನ ಶಶಿಕಲಾ ಶಂಕರಪ್ಪ ದ್ವಿತೀಯ ಸ್ಥಾನ ಹಾಗೂ ಸಿರಿಗೆರೆ, ಚಿತ್ರದುರ್ಗ ಜಿಲ್ಲೆಯ ಎಂ.ಎಂ.ಬಿ.ಆರ್.ಡಿ.ಎಸ್ ಕಾಲೇಜಿನ ಶ್ರೀರಕ್ಷಾ ಕೆ.ಎಂ ತೃತೀಯ ಸ್ಥಾನ ಪಡೆದಿದ್ದಾರೆ.

ಮೊದಲ ಮೂವರು ವಿಜೇತ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 15,000, ರೂ.10000 ಹಾಗೂ ರೂ. 5000 ದಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಒಟ್ಟು 30 ವಿದ್ಯಾರ್ಥಿಗಳಿಗೆ ತಲಾ ರೂ. 1000 ಸಮಾಧಾನಕರ ಬಹುಮಾನ ವಿತರಿಸಲಾಯಿತು.

Author

error: