ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜೂನ್ 9ರವರೆಗೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಕರಾವಳಿಯ ಉತ್ತರ ಕನ್ನಡದಲ್ಲಿ ಭಾರಿ ಮಳೆಗೆ ಗುಡುಗು ಸಾಥ್ ನೀಡಲಿದೆ. ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆಯಲ್ಲಿ ಗುಡುಗು ಸಹಿತ ಭಾರೀ ಮಳೆಯೊಂದಿಗೆ ಗಾಳಿಯ ವೇಗವು 30-40 ಕಿ.ಮೀ. ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪುತ್ತೂರು, ಶಿರಹಟ್ಟಿ, ಉಪ್ಪಿನಂಗಡಿ, ಗುಂಡ್ಲುಪೇಟೆ, ಗೋಕರ್ಣ, ಚನ್ನಪಟ್ಟಣದಲ್ಲಿ ಮಳೆಯಾಗಿದೆ. ಕುಮಟಾ, ಹರಪನಹಳ್ಳಿ, ಕದ್ರಾ, ಧರ್ಮಸ್ಥಳ, ಮಾಣಿ, ಕಾರವಾರ, ಕುಂದಗೋಳ, ಬೆಳ್ಳಟ್ಟಿ, ಸೋಮವಾರಪೇಟೆ, ಅಂಕೋಲಾ, ಹೊನ್ನಾವರ, ಹಾರಂಗಿ, ಪೊನ್ನಂಪೇಟೆ, ನಾಪೋಕ್ಲು, ಭಾಗಮಂಡಲ, ಮೈಸೂರಿನಲ್ಲಿ ಮಳೆಯಾಗಿದೆ.
ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಲಾಶಯಗಳ ಒಳಹರಿವು ಹೆಚ್ಚಳ :
ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿರುವುದರಿಂದ ನದಿಗಳಿಗೆ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದೆ. ನೀರಿಲ್ಲದೆ ಪರದಾಡುತ್ತಿದ್ದ ಪ್ರದೇಶದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿ ಚಟುವಟಿಕೆಗಳು ಆರಂಭವಾಗಿವೆ.






