ಬೆಂಗಳೂರು: ಉಪಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ರಾಜಕೀಯವಾಗಿ ಪ್ರತಿಷ್ಠಾಪನೆ ಮಾಡಲು ಹೊರಟ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿಯವರಿಗೆ ಮತದಾರರು ಬುದ್ಧಿ ಕಲಿಸಿದ್ದಾರೆ. ವಂಶಪಾರಂಪರ್ಯ ರಾಜಕಾರಣ ನಡೆಯುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಜನತೆಯ ತೀರ್ಮಾನವನ್ನು ಆಮ್ ಆದ್ಮಿ ಪಾರ್ಟಿ ಪ್ರಶಂಸಿಸುತ್ತದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದ್ದಾರೆ.

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಅನೇಕ ಅಕ್ರಮಗಳು ನಡೆದಿದೆ. ಚನ್ನಪಟ್ಟಣದಲ್ಲಿ ಚುನಾವಣೆಗೆ ಒಂದು ತಿಂಗಳು ಮುಂಚೆ ಸರ್ಕಾರಿ ಜಮೀನಿನಲ್ಲಿ ಸಾವಿರಾರು ಸೈಟುಗಳನ್ನು ಮಾಡಿ ಬೃಹತ್ ಕಾರ್ಯಕ್ರಮ ನಡೆಸಿ ವಿತರಣೆ ಮಾಡಲಾಗಿದೆ ಎಂದರು. ಉಪಚುನಾವಣೆಗೆ 48 ಗಂಟೆಗಳ ಮೊದಲು ಗೃಹಲಕ್ಷ್ಮಿ ಯೋಜನೆಯ ಬಾಕಿ ಇದ್ದ ಹಣವನ್ನು ಖಾತೆಗೆ ಹಾಕಿದ್ದಾರೆ. ಅಂದಾಜಿನ ಪ್ರಕಾರ ಮೂರು ಕ್ಷೇತ್ರಗಳ ಉಪಚುನಾವಣೆಗೆ 600 ಕೋಟಿ ರೂ. ಖರ್ಚು ಮಾಡಲಾಗಿದೆ. ನಾವು ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ಸತತವಾಗಿ ಒತ್ತಾಯಿಸಿದರೂ, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳದೆ ನಿಷ್ಕ್ರಿಯವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಎರಡೂ ರಾಜ್ಯಗಳ ಮತದಾರರು ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡಿದ್ದು, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಮಾತ್ರ ಉಳಿಗಾಲ ಎನ್ನುವ ಸಂದೇಶ ನಿಡಿದ್ದಾರೆ. ಹಾಗಾಗಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಬೀಗುವ ಅಗತ್ಯವಿಲ್ಲ. ದೆಹಲಿ ಚುನಾವಣೆಗೂ ಮಹಾರಾಷ್ಟ್ರ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ 10 ವರ್ಷಗಳಿಂದ ಜನಪರ ಆಡಳಿತ ನೀಡುತ್ತಿದ್ದಾರೆ. ದೆಹಲಿಯ ಜನ ಅರವಿಂದ ಕೇಜ್ರಿವಾಲ್ ಅವರನ್ನು ಮನೆ ಮಗನಂತೆ ಬೆಂಬಲಿಸುತ್ತಾರೆ. ಪುನಃ ದೆಹಲಿಯಲ್ಲಿ ಸದೃಢ ಸರ್ಕಾರ ರಚನೆಯಾಗಲಿದೆ. ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಪರಿಪೂರ್ಣ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ರಾಜ್ಯದಲ್ಲಿ ವಕ್ಫ್‌ ವಿಚಾರ ಮುಂದಿಟ್ಟುಕೊಂಡು ಕೋಮು ಸೌಹಾರ್ದತೆ ಹಾಳು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. 2018-2023 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪನವರ ಸದನ ಸಮಿತಿ ನಿರಂತರವಾಗಿ ವಕ್ಫ್‌ ಸಭೆ ಮಾಡಿ, ಇಂದು ಪಹಣಿಯಲ್ಲಿ ವಕ್ಫ್‌ ಹೆಸರು ಬರುವಂತೆ ಮಾಡಿದೆ. ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ ಅವರು ಹೋರಾಟ ಮಾಡುವುದಾದರೆ ಅವರದೇ ಪಕ್ಷದ ನಾಯಕರ ವಿರುದ್ಧವೇ ಹೋರಾಟ ಮಾಡಲಿ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಶಶಿಧರ್ ಆರಾಧ್ಯ ಕಿಡಿಕಾರಿದರು.

ಈ ಸಂದರ್ಭ ಪಕ್ಷದ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *