ಶಿವಮೊಗ್ಗ: ಬಗರ್‌ಹುಕುಂ ಸಾಗುವಳಿದಾರರನ್ನುಒಕ್ಕಲೆಬ್ಬಿಸುವುದಿಲ್ಲ. ರೈತರು ಧೃತಿಗೆಡಬಾರದು, ರಾಜ್ಯ ಸರ್ಕಾರ ರೈತರ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದರು.

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 21ಕ್ಕೆ ಸಾಗರದಲ್ಲಿ ಅರಣ್ಯ ಭೂಮಿ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಕೆಲಸ ಮಾಡುತ್ತಿದೆ. ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಂಬಂಧ ಸುಪ್ರೀಂ ಕೋರ್ಟ್​​ನಲ್ಲಿ ಉತ್ತಮ ನ್ಯಾಯವಾದಿಗಳನ್ನು ನೇಮಿಸಿ ಐಎ ಹಾಕಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಮತ್ತು ನ್ಯಾಯ ಒದಗಿಸಲು ಎಲ್ಲ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ. ರೈತರಿಗೆ ಒಳ್ಳೆಯ ಸುದ್ದಿಯನ್ನೇ ನಿಡುತ್ತೇವೆ. ಕೋರ್ಟ್ ವಿಚಾರ ಸೂಕ್ಷಮವಾಗಿದ್ದು ಹುಷಾರಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಇಂದಿನ ಸಮಸ್ಯೆಯಲ್ಲ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸಂತ್ರಸ್ತರು ಧೃತಿಗೆಡಬಾರದು ಎಂದರು.

ಸಂತ್ರಸ್ತರ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ. ಅದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು. ಮುಳುಗಡೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಹೋರಾಟ ನಡೆಯುತ್ತಿದೆ. ರೈತರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಲ್ಲ. ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. 2015 ರೊಳಗೆ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ರೀತಿಯ ನೋಟಿಸ್ ನೀಡುವುದು, ತೊಂದರೆ ನೀಡದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೂ ಎಲ್ಲ ರೀತಿಯ ಭೂ ಕಬಳಿಕೆ ಪ್ರಕರಣ ನಿರ್ವಹಿಸಲು ಜನಪ್ರತಿಧಿಗಳು, ಅಧಿಕಾರಿಗನ್ನೊಳಗೊಂಡ ಅರಣ್ಯ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

ತುಂಗಾ ನದಿಗೆ ಕಲುಷಿತ ನೀರು ಹೋಗದಂತೆ ಕ್ರಮ ವಹಿಸಲು ಸಮಿತಿ ರಚಿಸಲಾಗುವುದು. ನದಿ ಈಗಾಗಲೇ ಸಾಕಷ್ಟು ಕಲುಷಿತವಾಗಿದೆ. ಮುಂದೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ನದಿ ಸಂರಕ್ಷಣೆಗೆ ಶಾಶ್ವತ ಪರಿಹಾರದ ಕುರಿತು ಪಕ್ಷಾತೀತವಾಗಿ ಯೋಚಿಸಲಾಗುತ್ತಿದೆ. ಬೃಹತ್ ನೀರಾವರಿ ಮತ್ತು ಪಾಲಿಕೆ ಅಧಿಕಾರಿಗಳು ಈ ಕುರಿತು ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ನೋಟಿಸ್ ನೀಡುವುದು-ಒಕ್ಕಲೆಬ್ಬಿಸುವುದು ಮಾಡದಂತೆ ಅರಣ್ಯ ಇಲಾಖೆಗೆ ಸೂಚನೆ:

2015 ನೇ ಸಾಲಿನ ಒಳಗೆ 3 ಎಕರೆ ಒಳಗಿರುವ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವುದು, ನೋಟಿಸ್ ನೀಡುವುದಾಗಲಿ ಮಾಡಬಾರದೆಂದು ಸಚಿವರು ಸೂಚನೆ ನೀಡಿದರು.

ಕೋರ್ಟ್ ಪ್ರಕರಣ, ಲೋಕಾಯುಕ್ತ ಪ್ರಕರಣಗಳನ್ನು ಹೊರತುಪಡಿಸಿ 3 ಎಕರೆ ಒಳಗೆ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುವಂತಿಲ್ಲ. ಸಣ್ಣ ಹಿಡುವಳಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಬಾರದು. 3 ಎಕರೆಗಿಂತ ಹೆಚ್ಚಿನ ಭೂಮಿ ಸಾಗುವಳಿ ಮಾಡುತ್ತಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಗ್ರಾಮಗಳಲ್ಲಿ ಗ್ರಾಮ ಸಭೆ ಮಾಡಿ ಸಾಗುವಳಿದಾರರು, ಅವರ ಜಮೀನಿನ ಕುರಿತು ಮಾಹಿತಿ ತೆಗೆದುಕೊಳ್ಳಬೇಕು. ಬಗರ್‌ಹುಕುಂ ಸಮಸ್ಯೆಗಳನ್ನು ನಿರ್ವಹಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು ಎಂದರು.

ಯುಜಿಡಿ ಅನುದಾನಕ್ಕೆ ಪ್ರಸ್ತಾವನೆ :

ಯುಜಿಟಿ ಕಾಮಗಾರಿ ಕೈಗೊಳ್ಳಲು ಆನವಟ್ಟಿಗೆ ರೂ.138 ಕೋಟಿ ಮತ್ತು ಸೊರಬಕ್ಕೆ 180.5 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶಿವಮೊಗ್ಗ ನಗರಕ್ಕೆ ಈಗಾಗಲೇ ರೂ.40 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಎಂಎಡಿಬಿ ಅಧ್ಯಕ್ಷರಾದ ಆರ್.ಎಂ ಮಂಜುನಾಥ ಗೌಡ, ಬೃಹತ್, ಸಣ್ಣ ನೀರಾವರಿ, ಅರಣ್ಯ ಇಲಾಖೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *