ಶಿವಮೊಗ್ಗ : ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರö್ಯ ಲಭಿಸಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಹಾಗೂ ಪ್ರೀತಿ-ವಿಶ್ವಾಸದಿಂದ ಬಾಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ 155 ನೇ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಸ್ವಾತಂತ್ರ‍್ಯ ಸುಲಭದಿಂದ ಬಂದಿಲ್ಲ. ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದಿಂದ ಲಭಿಸಿದ್ದು. ಗಾಂಧೀಜಿಯವರು ತಮ್ಮ ಜೀವನಪೂರ್ತಿ ಶಾಂತಿ, ಸಮಾನತೆ, ಸೌಹಾರ್ಧತೆ ಸ್ಥಾಪಿಸಲು ಹೋರಾಡಿದರು. ಅದನ್ನು ನಾವು ಉಳಿಸಿಕೊಂಡು ಹೋಗಬೇಕು. ಸುಮಾರು 84 ದೇಶಗಳು ಗಾಂಧೀಜಿಯವರ ಪ್ರತಿಮೆಯನ್ನು ಹೊಂದಿವೆ. ಸಾಮಾನ್ಯವಾಗಿ ಎಲ್ಲರೂ ಅವರ ಚಿಂತನೆಗೆ ಮಾರು ಹೋಗಿದ್ದಾರೆ.
ಮಕ್ಕಳು ಈ ದೇಶದ ಭವಿಷ್ಯ. ಅವರಿಗೆ ದೇಶವನ್ನು ಬದಲಿಸುವ ಶಕ್ತಿ ಇದೆ. ಗನ್‌ಗಿಂತ ಪೆನ್ ಅತ್ಯಂತ ಬಲಿಷ್ಟವಾಗಿದ್ದು, ವಿದ್ಯಾವಂತರಾಗಿ ದೇಶದ ಒಳಿತಿಗಾಗಿ ಮುಂದೆ ಬರಬೇಕು ಎಂದರು.
ಇಡೀ ದೇಶ ಒಂದೇ ವೇದಿಕೆ. ನಾವೆಲ್ಲ ಒಂದೇ ತಾಯಿ ಮಕ್ಕಳು. ಒಂದೇ ವೇದಿಕೆಯಲ್ಲಿ ಎಲ್ಲ ಧರ್ಮದವರು ಸೇರಲು ಕಾರಣ ಗಾಂಧೀಜಿ ಮತ್ತು ಅಂಬೇಡ್ಕರ್‌ರಂತಹವರು. ನಾವೆಲ್ಲ ನಮ್ಮ ಸಂವಿಧಾನವನ್ನು ತಿಳಿಯಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು. ಅದೇ ಉದ್ದೇಶದಿಂದ ಸೆ. 5 ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದಲು ಆದೇಶಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದುವ ಮೂಲಕ ಗೌರವ ತೋರಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಮೂಡಬೇಕು ಎಂದರು.
ಸ.ಪ್ರ.ದ ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಮಳಮಠ್ ಗಾಂಧಿ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಗಾಂಧಿ ನಮ್ಮಂತೆ ಸಾಮಾನ್ಯವಾಗಿ ಬದುಕಿದವರು. ಅವರನ್ನು ಆರಾಧನಾ ನೆಲೆಯಿಂದ ನೋಡದೆ ಒಬ್ಬ ಮನುಷ್ಯನಾಗಿ ನೋಡಿದಾಗ ಹೆಚ್ಚು ಅರ್ಥ ಆಗುತ್ತಾರೆ. ಸತ್ಯಕ್ಕಾಗಿ ಬದುಕಿದವರು. ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಬೇಕೆಂದು, ಅಸಮಾನತೆ ತೊಡೆದು ಹಾಕಲು ಹೋರಾಡಿದವರು. ಯಾವುದು ಸತ್ಯದ ಪರ, ಅಹಿಂಸೆಯ ಪರ, ಪ್ರೀತಿಯ ಪರವಾಗಿರುತ್ತದೋ ಅದನ್ನು ನಾವು ಒಪ್ಪಿಕೊಳ್ಳಬೇಕೆಂದು ತಿಳಿಸಿದರು.
ಸತ್ಯ ಸಾಗರದಂತೆ ಮತ್ತು ಪ್ರೀತಿ ಪರ್ವತದಂತೆ. ಸಾಗರ ಮತ್ತು ಪರ್ವತದಲ್ಲಿ ಅಗಾಧ ಸಹನೆ ಇರುತ್ತದೆ. ಎಲ್ಲರನ್ನೂ ಒಂದೇ ರೀತಿ ನೋಡುವುದು ಕರುಣೆ ಎಂದು ತಿಳಿಸಿದವರು ಗಾಂಧೀಜಿ. ಜಗತ್ತು ಸುಂದರವಾಗಿ ಕಾಣಲು, ನಾವು ಮನುಷ್ಯರಾಗಿ ಬಾಳಲು, ನಮ್ಮ ಬದುಕು ಹಸನಾಗಲು ಗಾಂಧಿ ನಮಗೆ ಬೇಕು. ಸಂಕುಚಿತ ಮನೋಭಾವ ದೂರ ಮಾಡದಿದ್ದರೆ ನಾವು ಗಾಂಧಿಯನ್ನು ತಲುಪಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದಲ್ಲಿ ಗಾಂಧಿಯವರ ಆಶಯಗಳಿವೆ ಎಂದರು.
ಗಾಂಧಿ ಜಯಂತಿ ಪ್ರಯುಕ್ತ ಫ್ರೌಢಶಾಲೆ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಯಿತು.
ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಇತರರು ಪಾಲ್ಗೊಂಡಿದ್ದರು.






