ಬೆಂಗಳೂರು: ಮುಂದಿನ ವರ್ಷದಿಂದ SSLC ಗ್ರೇಸ್ ಮಾರ್ಕ್ಸ್ ರದ್ದು ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಧಾನಸೌಧದಲ್ಲಿ ನಡೆದ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡ ಅವರು, ಈ ವರ್ಷ ಗ್ರೇಸ್ ಮಾರ್ಕ್ಸ್ ಕೊಟ್ಟ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ. ಯಾವ ಕಾರಣ ಮತ್ತು ಉದ್ದೇಶದಿಂದ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡರು.
ವಿದ್ಯಾರ್ಥಿಗಳು ಅವರ ಅರ್ಹತೆ ಆಧಾರದಲ್ಲಿ ಪ್ರಗತಿ ಸಾಧಿಸಬೇಕು. ಗ್ರೇಸ್ ಮಾರ್ಕ್ಸ್ ನೀಡಿದರೆ ಸ್ಪರ್ಧಾ ಸಾಮರ್ಥ್ಯ ಕಡಿಮೆ ಆಗಲ್ವಾ? ಕಡಿಮೆ ಅಂಕ ಪಡೆದರೆ ವಿದ್ಯಾರ್ಥಿಗಳು ಅನರ್ಹರಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಶಿವಕುಮಾರ್ ಮಾತಿಗೆ ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದರು.
ಮಕ್ಕಳನ್ನ ಸುಧಾರಣೆ ಮಾಡೋಕೆ ಇದನ್ನ ಮಾಡಿದ್ದೆವು : ಸಚಿವ ಮಧು ಬಂಗಾರಪ್ಪ
ಬರುವ ವರ್ಷದಿಂದ SSLC ಸಿ ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಎಂದು ವಿಧಾನಸೌಧಧಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಯಾವಾಗಲೂ ಶೇ. 5 ರಷ್ಟು ಇತ್ತು, ಕೋವಿಡ್ ವೇಳೆ ಶೇ. 10 ರಷ್ಟು ಮಾಡಲಾಗಿತ್ತು. ಕಾನ್ಫಿಡೆಂಟ್ ಕೊಟ್ಟು ಪಾಸ್ ಮಾಡಲು ನಿರ್ಧಾರ ಮಾಡಲಾಗಿತ್ತು. ಹಾಗಾಗಿ ಶೇ. 20 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಇದು ಈ ವರ್ಷಕ್ಕೆ ಯಾವ ಸಮಸ್ಯೆ ಇಲ್ಲ. ಮುಂದಿನ ವರ್ಷದಿಂದ ಇದು ಇರಲ್ಲ. ಮಕ್ಕಳನ್ನ ಸುಧಾರಣೆ ಮಾಡೋಕೆ ಇದನ್ನ ಮಾಡಿದ್ದೆವು. ಹಾಗಾಗಿ ಇದು ಬೇಡ ಅನ್ನೋದು ಇದೆ, ಹಾಗಾಗಿ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇರಲ್ಲ ಎಂದು ಅವರು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಮೇ 9ರಂದು ರಾಜ್ಯದಲ್ಲಿ 2023-24ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿತ್ತು.
ಈ ಬಾರಿ SSLC ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉಡುಪಿ ಜಿಲ್ಲೆ ಶೇ 94ರ ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಯಾದಗಿರಿ ಜಿಲ್ಲೆ ಶೇ 50.59 ರ ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.







