ಶಿವಮೊಗ್ಗ; ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಎಲ್ಲವನ್ನೂ ಕಳಚಿ ನಿಂತಂತೆ ಕಾಣುತ್ತಿದೆ. ಅವರು ಸವಾಲುಗಳ ಮೇಲೆ ಸವಾಲು ಹಾಕುತ್ತಿದ್ದಾರೆ. ಇದೆಲ್ಲ ಒಂದೆರಡು ದಿನ, ನಂತರ ತಣ್ಣಗಾಗುತ್ತಾರೆ, ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದು ಸುಳ್ಳಾಗಿದೆ. ಇವತ್ತು ಅವರದು ಹೊಸ ವರಸೆ. ನಿಮ್ಮ ಸಹೋದರನನ್ನು ಶಿವಮೊಗ್ಗ ಕ್ಷೇತ್ರದಿಂದ ಹಿಂದಕ್ಕೆ ಕರೆಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲು ಹಾಕಿದ್ದಾರೆ.
ಈಶ್ವರಪ್ಪ ಅವರ ಜೊತೆ ಯುದ್ಧ ವಿರಾಮ ಘೋಷಿಸುವ ರೀತಿಯಲ್ಲಿ ವಿಜಯೇಂದ್ರ ಮಾತನಾಡಿದ್ದರು.
ನೀವು ಪಕ್ಷವನ್ನು ಕಟ್ಟಿದವರು. ನಿಮ್ಮ ಸಮಸ್ಯೆ ಎನೇ ಇರಲಿ ವರಿಷ್ಟರ ಜೊತೆ ಮಾತನಾಡೋಣ ಎಂದು ವಿಜಯೇಂದ್ರ ಮನವಿ ಮಾಡಿದ್ದರು. ಇದಕ್ಕೆ ಮತ್ತೆ ತಿರುಗೇಟು ನೀಡಿದ್ದಾರೆ ಈಶ್ವರಪ್ಪ. ನಿಮಗೆ ಧೈರ್ಯವಿದ್ದರೆ ನಿಮ್ಮ ಸಹೋದರನನ್ನು ಕಣದಿಂದ ಹಿಂದಕ್ಕೆ ಸರಿಸಿ ಎಂದು ಸವಾಲು ಹಾಕಿದ್ದಾರೆ. ತಾಕತ್ತಿನ ಮಾತನ್ನು ಆಡಿದ್ದಾರೆ.
ಈಶ್ವರಪ್ಪ ಗೆಲ್ಲಲಿ ಬಿಡು. ನೀನು ಸ್ಪರ್ಧೆ ಮಾಡಬೇಡ ಅಂತ ನಿಮ್ಮಣ್ಣ ರಾಘವೇಂದ್ರನಿಗೆ ಹೇಳು. ನೀನು ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ಈಶ್ವರಪ್ಪ ಹೇಳಿದರು.
ನಾನು ಕೇಂದ್ರ ನಾಯಕರ ಜೊತೆ ಮಾತನಾಡಬೇಕು ಎಂದು ಹೇಳಲು ನಿನಗೆ ಅಧಿಕಾರಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.
ರಾಘವೇಂದ್ರ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಜಯೇಂದ್ರ ಹೇಳಿಕೆಗೂ ಅವರು ಪ್ರತಿಕ್ರಿಯೆ ನೀಡಿದರು. ರಾಘವೇಂದ್ರ ಅಲ್ಲ ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಂತರ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದು ಅವರು ಹೇಳಿದರು.






