ಬಿಜೆಪಿ ಜೊತೆ ಮೈತ್ರಿ. ಚೆನ್ನಪಟ್ಟಣದಲ್ಲಿ ಗುಳೆ ಹೊರಟ ಜೆಡಿಎಸ್ ನಾಯಕರು: ಕುಮಾರಸ್ವಾಮಿಗೆ ಆಘಾತ !

ಬೆಂಗಳೂರು : ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಗೆ ದಾರಿ ಸುಲಭವಿದ್ದಂತೆ ಕಾಣುತ್ತಿಲ್ಲ. ಹಳೇ ಮೈಸೂರು ಪ್ರದೇಶದಲ್ಲಿ ಬಲಿಷ್ಟವಾಗಿರುವ ಜೆಡಿಎಸ್ ಗೆ ಈ ಹೊಸ ಸಂಬಂಧ ಅಲ್ಲಲ್ಲಿ ಕೈಕೊಡುತ್ತಿದೆ.

ಮೊದಲನೆಯದಾಗಿ ಕಾರ್ಯಕರ್ತರ ಮಟ್ಟದಲ್ಲಿ ಹೊಂದಾಣಿಕೆ ಸುಲಭವಾಗಿಲ್ಲ. ಇಷ್ಟು ವರ್ಷಗಳ ಕಾಲ ಪರಸ್ಪರ ಹೋರಾಟ ಮಾಡಿಕೊಂಡು ಬಂದವರು ಎಲ್ಲವನ್ನೂ ಮರೆತು ಒಂದಾಗುವುದು ಸುಲಭವಲ್ಲ. ಅದೇ ಈಗ ಆಗುತ್ತಿದೆ.
ಜೆಡಿಎಸ್ ನ ಕಾರ್ಯಕರ್ತರು ತಾತ್ವಿಕವಾಗಿಯೂ ಸೈದ್ದಾಂತಿಕವಾಗಿಯೂ ಬಿಜೆಪಿಯನ್ನು ವಿರೋಧಿಸುತ್ತ ಬಂದವರು. ಹಲವಾರು ಚುನಾವಣೆಗಳಲ್ಲಿ ಬಿಜೆಪಿ ಜೊತೆ ಹೋರಾಡಿದವರು. ಆದರೆ ಈಗ ಕುಮಾರಸ್ವಾಮಿ ಬಿಜೆಪಿ ಹೆಗಲ ಮೇಲೆ ಕೈಹಾಕಿದ್ದಾರೆ.

ಮೋದಿ ಅಮಿತ್ ಶಾ ಅವರನ್ನು ನೋಡಿ ಅವರಿಗೆ ಹೂ ಗುಚ್ಚ ನೀಡಿ ಬಂದಿದ್ದಾರೆ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯೂ ಆಗಿದೆ. ಆದರೆ ಕಾರ್ಯಕರ್ತರಿಗೆ ಇದು ನುಂಗಲಾರದ ತುತ್ತು. ರಾಜ್ಯ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚೆನ್ನಪಟ್ಟಣದಲ್ಲಿ ಈಗ ಬಂಡಾಯದ ಬಾವುಟ ಹಾರುತ್ತಿದೆ. ಅಲ್ಲಿನ ಸ್ಥಳೀಯ ಸಂಸ್ಥೆಯ ಸುಮಾರು 10 ಕ್ಕೂ ಹೆಚ್ಚು ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಇದು ಜೆಡಿಎಸ್ ಗೆ ಭಾರಿ ಹೊಡೆತ. ಬೆಂಗಖೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿರುವ ಚೆನ್ನಪಟ್ಟಣದಲ್ಲಿ ಆಗುತ್ತಿರುವ ಈ ಬದಲಾವಣೆ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಮಂಜುನಾಥ್ ಅವರಿಗೂ ದೊಡ್ಡ ಪೆಟ್ಟು.

ಜೊತೆಗೆ ರಾಮನಗರ ಚೆನ್ನಪಟ್ಟಣದಲ್ಲಿ ಸಾವಿರಾರು ಅಲ್ಪಸಂಖ್ಯಾತರು ಜೆಡಿಎಸ್ ಬೆಂಬಲಿಸುತ್ತಲೇ ಬಂದವರು. ಆ ಪಕ್ಷವನ್ನು ಬೆಳೆಸಿದವರು. ಈಗ ಜೆಡಿಎಸ್ ಬಿಜೆಪಿ ಜೊತೆ ಸೇರಿರುವುದು ಅವರಿಗೆ ಆತಂಕವನ್ನು ಉಂಟು ಮಾಡಿದೆ. ಹೀಗಾಗಿ ಅವರು ತಮ್ಮ ದಾರಿಯನ್ನು ತಾವು ಹುಡುಕಿಕೊಳ್ಳುತ್ತಿದ್ದಾರೆ.

ಜೊತೆಗೆ ಈ ಎರಡೂ ನಗರಗಳಲ್ಲಿ ಜೆಡಿಎಸ್ ನಲ್ಲಿ ಬೆಳೆದವರು, ಆ ಪಕ್ಷವನ್ನು ಬೆಳೆಸಿದವರು ಎಂದೂ ಕೋಮುವಾದಿ ರಾಜಕಾರಣಕ್ಕೆ ಕೈಜೊಡಿಸಿದವರಲ್ಲ. ಹೀಗಾಗಿ ಅವರಿಗೆ ಭ್ರಮ ನಿರಸನವಾಗಿದೆ. ಬಹಳಷ್ಟು ಜನ ಈಗ ಗುಳೆ ಹೊರಟಿದ್ದಾರೆ.

Author

error: