“ಸ್ಟಾರ್‌ಗಳ ಅತಿಯಾದ ಸಂಭಾವನೆ ಕಡಿಮೆ ಮಾಡಿ, ಕಾರ್ಮಿಕರ ಬದುಕು ಉಳಿಸಿ” – AICWA ಮನವಿ
ನವದೆಹಲಿ, ಮೇ.೨೧ : ಭಾರತೀಯ ಚಿತ್ರರಂಗ ಮತ್ತೊಮ್ಮೆ ಆರ್ಥಿಕ ಸಂಕಷ್ಟದ ಅಂಚಿನಲ್ಲಿದೆಯೇ? ಕೋವಿಡ್ ನಂತರ ಇನ್ನೂ ಚೇತರಿಸಿಕೊಳ್ಳದ ಸಿನಿ ಕಾರ್ಮಿಕರ ಬದುಕಿನ ಮೇಲೆ ಈಗ ಜಾಗತಿಕ ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ ಮತ್ತು ಉತ್ಪಾದನಾ ವೆಚ್ಚಗಳ ಭಾರ ಮತ್ತಷ್ಟು ಹೊರೆ ಹಾಕುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಶನ್ (AICWA – ಎಐಸಿಡಬ್ಲೂಎ) ಪತ್ರ ಬರೆದು ತುರ್ತು ಕ್ರಮಕ್ಕೆ ಮನವಿ ಮಾಡಿದೆ.
ಕೋವಿಡ್ ಬಳಿಕವೂ ಸಂಕಷ್ಟದಿಂದ ಹೊರಬರದ ಚಿತ್ರರಂಗ
ಎಐಸಿಡಬ್ಲೂಎ ತನ್ನ ಪತ್ರದಲ್ಲಿ, ಕೋವಿಡ್ ಮಹಾಮಾರಿಯ ಅವಧಿಯಲ್ಲಿ ಭಾರತೀಯ ಚಿತ್ರರಂಗದ ಲಕ್ಷಾಂತರ ಕಾರ್ಮಿಕರು, ತಾಂತ್ರಿಕ ಸಿಬ್ಬಂದಿ ಹಾಗೂ ಜೂನಿಯರ್ ಕಲಾವಿದರು ಉದ್ಯೋಗ ಕಳೆದುಕೊಂಡರು ಎಂದು ಹೇಳಿದೆ. ಹಲವರ ಸಂಬಳ ಕಡಿತಗೊಂಡಿದ್ದು, ದಿನಗೂಲಿ ಆಧಾರಿತ ಕಾರ್ಮಿಕರು ಬದುಕಿಗಾಗಿ ಬೇರೆ ಕಡಿಮೆ ಆದಾಯದ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಸಂಘಟನೆ ತಿಳಿಸಿದೆ.
ಸಣ್ಣ ಮತ್ತು ಮಧ್ಯಮ ಮಟ್ಟದ ನಿರ್ಮಾಣ ಸಂಸ್ಥೆಗಳು ಮುಚ್ಚಲ್ಪಟ್ಟ ಪರಿಣಾಮ ಸಿನಿಮಾ, ಧಾರಾವಾಹಿ, ಜಾಹೀರಾತು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ತೀವ್ರವಾಗಿ ಕುಸಿದವು. ಕೋವಿಡ್ ನಂತರವೂ ಚಿತ್ರೀಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಇದರಿಂದ ಅನೇಕರು ಚಿತ್ರರಂಗವನ್ನೇ ಶಾಶ್ವತವಾಗಿ ತೊರೆಯುವಂತಾಗಿದೆ ಎಂದು ಎಐಸಿಡಬ್ಲೂಎ ಆತಂಕ ವ್ಯಕ್ತಪಡಿಸಿದೆ.
ಬೆಲೆ ಏರಿಕೆ, ಇಂಧನ ದರ – ನಿರ್ಮಾಣ ವೆಚ್ಚ ಭಾರೀ ಏರಿಕೆ
ಪೆಟ್ರೋಲ್-ಡೀಸೆಲ್ ದರ ಏರಿಕೆ, ದುಬಾರಿ ಜೀವನ ವೆಚ್ಚ, ಜಾಗತಿಕ ಆರ್ಥಿಕ ಒತ್ತಡ ಹಾಗೂ ಉತ್ಪಾದನಾ ವೆಚ್ಚಗಳ ಏರಿಕೆ ಸಿನಿಮಾ, ಟಿವಿ ಶೋ, ವೆಬ್ ಸೀರೀಸ್ ಮತ್ತು ಜಾಹೀರಾತು ನಿರ್ಮಾಣಕ್ಕೆ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಸಂಘಟನೆ ಹೇಳಿದೆ.
“ಈ ಆರ್ಥಿಕ ಅಸ್ಥಿರತೆ ಮುಂದುವರಿದರೆ ಚಿತ್ರಗಳು, ಧಾರಾವಾಹಿಗಳು, ವೆಬ್ ಸೀರೀಸ್ ಹಾಗೂ ಜಾಹೀರಾತುಗಳ ನಿರ್ಮಾಣದಲ್ಲಿ ಭಾರೀ ಕುಸಿತ ಉಂಟಾಗಬಹುದು. ಇದರಿಂದ ಉದ್ಯೋಗಾವಕಾಶಗಳು ಇನ್ನಷ್ಟು ಕಡಿಮೆಯಾಗುವ ಅಪಾಯವಿದೆ,” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಸ್ಟಾರ್‌ಗಳು ಸಂಭಾವನೆ ಕಡಿಮೆ ಮಾಡಲಿ”
ಚಿತ್ರರಂಗದ ದೊಡ್ಡ ನಟರು ಮತ್ತು ದೊಡ್ಡ ನಿರ್ಮಾಣ ಸಂಸ್ಥೆಗಳು ಅನಗತ್ಯ ಖರ್ಚು ಹಾಗೂ ಅತಿಯಾದ ಸಂಭಾವನೆಗಳನ್ನು ಮರುಪರಿಶೀಲಿಸಬೇಕು ಎಂದು ಎಐಸಿಡಬ್ಲೂಎ ಮನವಿ ಮಾಡಿದೆ. ಕಾರ್ಮಿಕರ ಉದ್ಯೋಗ, ಸಮಯಕ್ಕೆ ಸರಿಯಾದ ವೇತನ ಮತ್ತು ಗೌರವ ಉಳಿಯಬೇಕಾದರೆ ಆರ್ಥಿಕವಾಗಿ ಬಲಿಷ್ಠರು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ವಿದೇಶಿ ಶೂಟಿಂಗ್ ಬದಲು ದೇಶೀಯ ಲೊಕೇಶನ್‌ಗಳಿಗೆ ಆದ್ಯತೆ
ವಿದೇಶಗಳಲ್ಲಿ ಚಿತ್ರೀಕರಣ ನಡೆಸುವುದಕ್ಕಿಂತ ಭಾರತೀಯ ಸ್ಥಳಗಳಿಗೆ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಎಐಸಿಡಬ್ಲೂಎ ಸಲಹೆ ನೀಡಿದೆ.
ಸರ್ಕಾರದಿಂದ ತುರ್ತು ನೆರವು ನಿಧಿಗೆ ಆಗ್ರಹ
ಚಿತ್ರರಂಗದ ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಕಲ್ಯಾಣ ನಿಧಿ ಮತ್ತು ಕಾರ್ಮಿಕ ಸ್ನೇಹಿ ನೀತಿಗಳನ್ನು ರೂಪಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ. “ಚಿತ್ರರಂಗ ಮತ್ತೊಮ್ಮೆ ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಸಿಲುಕದಂತೆ ಈಗಲೇ ಗಟ್ಟಿಯಾದ ಕ್ರಮ ಅಗತ್ಯ” ಎಂದು ಎಐಸಿಡಬ್ಲೂಎ ಎಚ್ಚರಿಸಿದೆ.






