
ಎರಡು ತಿಂಗಳುಗಳ ಹಿಂದೆ ತಾಯಿಯೊಬ್ಬಳು ತನ್ನದೇ ಮಗುವನ್ನು ಕೊಂದುಹಾಕಿದ್ದಳು. ಅದೂ ಅತ್ಯಂತ ಸುಶಿಕ್ಷಿತಳೂ, ಉನ್ನತ ಹುದ್ದೆಗಳನ್ನು ಅಲಂಕರಿಸಿದವಳೂ ಆಗಿದ್ದವಳು. ಒಂದು ವಾರದ ಹಿಂದೆ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪುಟ್ಟಮಗುವಿಗೆ ಕಚ್ಚಿ, ಹೊಡೆದು ವಿಪರೀತ ಹಿಂಸೆ ಕೊಟ್ಟಿದ್ದಳು. ನಿನ್ನೆ ಒಬ್ಬ ಸೊಸೆ ತಂದೆಯಂತಹ ಮಾವನಿಗೆ ದೊಣ್ಣೆಯಿಂದ ಹೊಡೆಯುತ್ತಿದ್ದಳು. ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿತ್ತು. ಇಡೀ ಮಾಧ್ಯಮಗಳು, ಸಾಮಾನ್ಯ ಜನರು ಎಂತಹ ಕ್ರೂರಿ ತಾಯಿ, ಸೊಸೆ ಎಂದು ಜರಿಜರಿದು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರು. ನಾನು ಸುಮ್ಮನೆ ನೋಡುತ್ತಿದ್ದೆ.
ಯಶಸ್ವಿ ಮಹಿಳೆ ಇಂದಿರಾ ನೂಯಿ ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು. ನಿಮ್ಮನ್ನು ಅರ್ಥಮಾಡಿಕೊಳ್ಳುವ , ನಿಮ್ಮೊಂದಿಗ ಸಹಾಯಕ ವ್ಯವಸ್ಥೆಯಾಗಿ ನಿಲ್ಲಬಲ್ಲ ಸಂಗಾತಿ ಸಿಕ್ಕಿದರೆ ಮದುವೆ ಸುಂದರ ಆಟ. ಅದಿಲ್ಲದಿದ್ದರೆ ಅದೊಂದು ಭಾರ ಎಂದು. ನಿಜ. ಇವತ್ತಿನ ಎಷ್ಟೊ ಮಹಿಳೆಯರಿಗೆ ಹಿಂದಿನಂತೆ ಅತ್ತೆ-ಮಾವ, ತಂದೆ-ತಾಯಿ ಬೆಂಬಲವಿಲ್ಲ. ಗಂಡನಿದ್ದರೂ ಇಲ್ಲದಂತಹ ಸ್ಥಿತಿ. ಯಾವುದೋ ಕೆಲಸ, ಎಲ್ಲೋ ವಾಸ . ಅಕ್ಷರಶಃ ಒಬ್ಬಂಟಿಯಾದ ಹೆಣ್ಣಿಗೆ ಮೊದಲಿನ ಕಾಲದಂತೆ ತಾಳ್ಮೆ ಕಡಿಮೆಯಾಗುತ್ತಿದೆ. ಆಕೆ ಕೇವಲ ಮನೆಕೆಲಸ ಮಾಡಿಕೊಂಡು ಮನೆ ನೋಡಿಕೊಂಡು ಹೋಗುವದಷ್ಟೇ ಅಲ್ಲ, ಸಮಾಜ ಮತ್ತು ಕುಟುಂಬದಲ್ಲಿ ಆರ್ಥಿಕ ಸಹಕಾರ ನೀಡಿ, ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ. ಇವುಗಳಿಂದಾಗಿ ಆಕೆಯ ಆಂತರಿಕ ಮತ್ತು ಬಾಹ್ಯ ಒತ್ತಡ ಹೆಚ್ಚಾಗಿದೆ. ಈ ಒತ್ತಡಗಳನ್ನು ತಡೆದುಕೊಳ್ಳಲು ಸಾಧ್ಯವಿರುವವರು ಹೇಗೋ ಬದುಕಿನ ಬಂಡಿಯನ್ನು ಎಳೆಯುತ್ತಿದ್ದಾರೆ. ಇಲ್ಲದವರು, ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಅಸಹಾಯಕ ಮಕ್ಕಳನ್ನು ಹಿಂಸಿಸುವುದು/ಕೊಲ್ಲುವುದು, ಜೊತೆಗಿರುವವರನ್ನು ಕ್ರೂರವಾಗಿ ನಡೆಸಿಕೊಳ್ಳುವುದು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿರುವುದರಿಂದ ಈ ಕ್ರೂರತೆಗೆ ಪರೋಕ್ಷವಾಗಿ ಸಾಮಾಜಿಕ ಮನ್ನಣೆಯೂ ಸಿಕ್ಕಂತಾಗಿದೆ!

ನಮ್ಮ ಮನೆಯಲ್ಲೂ ಚರ್ಚೆಯಾಯಿತು. ನಾನು ಆ ಹೆಣ್ಣಿನ ಅದ್ಯಾವ ಅಸಹಾಯಕತೆ ಇತ್ತೋ ಎಂದೆ ಎಲ್ಲಾ ಘಟನೆಗಳಲ್ಲೂ. ನೀನು ಈ ಕ್ರೌರ್ಯವನ್ನು ಸಮರ್ಥಿಸುತ್ತೀಯ ಎಂದರು. ಇಲ್ಲ ಕ್ರೌರ್ಯಕ್ಕೆ ಸಮರ್ಥನೆ ಇಲ್ಲ. ಸಮರ್ಥನೆ ಕ್ರೌರ್ಯವನ್ನು ಎಸಗುವ ಸಂದರ್ಭಕ್ಕೂ ಇಲ್ಲ. ಯಾಕೆಂದರೆ ಇವತ್ತು ಕಾಲ ಬದಲಾಗಿದೆ. ಹೆಣ್ಣಿನ ಪರಿಸ್ಥಿತಿ ಬದಲಾಗಿದೆ. ಆದರೆ ಬದಲಾವಣೆ ಯಾವ ರೀತಿ ಆಗಿದೆ? ಇದನ್ನು ಯೋಚಿಸಿ ನೋಡಬೇಕಾದ ಅವಶ್ಯಕತೆ ಇದೆ.
ಆಧುನಿಕ ಯುವಜನಾಂಗದಲ್ಲಿ ಹೆಣ್ಣುಮಕ್ಕಳು ಅತ್ತೆ-ಮಾವ ಬೇಡ, ನಾದಿನಿ, ಅತ್ತಿಗೆಯರು ಬೇಡ ಎನ್ನುವ ಸಂಗತಿ ಸಾಮಾನ್ಯ. ಯಾಕೆ? ಇಲ್ಲಿಂದ ಉತ್ತರವನ್ನು ಹುಡುಕಬಹುದು. ಮದುವೆ ಎನ್ನುವ ವ್ಯವಸ್ಥೆ ಎರಡು ಜೀವಗಳು ಕೂಡಿ ಬಾಳುವಂತದ್ದು. ಹೆಣ್ಣಿನ ಮಟ್ಟಿಗಂತೂ ಅದೊಂದು ಬೆಳೆದ ಗಂಡುಮಗುವಿನ ದತ್ತು ಸ್ವೀಕಾರದಂತೆ. ಇವತ್ತು 60-70 ವರ್ಷಗಳ ವಯಸ್ಸಿನ ಬಹುತೇಕರ ದಾಂಪತ್ಯ ಇದೇ ರೀತಿಯದ್ದು. ಅಲ್ಲಿ ಹೆಂಡತಿ/ಅಮ್ಮ ಇಡೀ ಕುಟುಂಬದ ಹೊರೆ ಹೊತ್ತಿದ್ದರೂ ಅವಳ ಕೊಡುಗೆಯನ್ನು ಗಂಭೀರವಾಗಿ ಪರಿಗಣಿಸಿ, ಆದರಿಸುವವರು ಕಡಿಮೆ. ಇದಕ್ಕಾಗಿ ಆ ಅಮ್ಮ ತನ್ನ ಮಗಳು ತನ್ನಂತೆ ಆಗದಿರಲಿ ಎಂದು ಯಾವ ಕೆಲಸವನ್ನೂ ಕೊಡದೆ, ಕೆಲಸ ಮಾಡಿಸದೆ ಓದಿಕೊಂಡು ನಿನ್ನ ಕಾಲ ಮೇಲೆ ನೀನು ನಿಲ್ಲು ಮಗಾ, ನಾನು ಮನೆಕೆಲಸ ಮಾಡಿಕೊಳ್ಳುತ್ತೇನೆ ಎಂದು ಹೆಣ್ಣುಮಗುವನ್ನು ಕಾಪಿಡಲು ಯತ್ನಿಸಿದ್ದಾಳೆ. ಅದರ ಫಲಸ್ವರೂಪವಾಗಿ ಇವತ್ತು ನಮ್ಮಲ್ಲಿ ಔದ್ಯೋಗಿಕವಾಗಿ, ಸಾಮಾಜಿಕವಾಗಿ ಯಶಸ್ವಿ ಹೆಣ್ಣುಮಕ್ಕಳು ಸಿಗುತ್ತಾರೆ. ಆದರೆ ಸಂಬಂಧದ ವಿಷಯಕ್ಕೆ ಬಂದಾಗ ಅಲ್ಲಿ ಬಹುತೇಕ ಹೆಣ್ಣುಮಕ್ಕಳು ವಿಫಲರಾಗಿದ್ದಾರೆ. ಸಾಂಗತ್ಯ ಎನ್ನುವುದು ಕೊಡುಕೊಳ್ಳುವಿಕೆಯ ಸಮತೋಲನದಿಂದ ಮಾತ್ರ ಸಾಧ್ಯ. ಕೇವಲ ಸ್ವೀಕರಿಸುವುದೇ ಆದರೆ ಅದು ಬಹಳ ದಿನ ಉಳಿಯಲಾರದು. ಕೊಡುಕೊಳ್ಳುವಿಕೆಯ ನಂತರ ತಾಳ್ಮೆ, ಸಹನೆ ಸಂಬಂಧಗಳ ಉಳಿಯುವಿಕೆಗೆ ಅತ್ಯವಶ್ಯಕ ಮೂಲ ಸಾಧನ. ಈ ತಾಳ್ಮೆ, ಸಹನೆ ಸಣ್ಣವಯಸ್ಸಿನಿಂದ ಬರಬೇಕಾದ್ದು. ಒಂದೇ ಸಲಕ್ಕೆ ಇದು ಮೈಗೂಡಿಸಿಕೊಳ್ಳುವ ಕಲೆಯಲ್ಲ. ಚಿಕ್ಕವಯಸ್ಸಿನಿಂದ ಮನೆಕೆಲಸಗಳನ್ನು ಮಾಡುವಂತದ್ದು, ಹಿರಿಯರಿಗೆ ಸಹಾಯ ಮಾಡುವಂತದ್ದು ಮಾಡಿದಾಗ ಅಲ್ಲಿ ಸಹಜವಾಗಿ ಒಂದು ಸಹಿಷ್ಣುತೆ ಬರುತ್ತದೆ. ಈ ಸಹಿಷ್ಣುತೆ ಕೆಲಸದ ಜಾಗದಲ್ಲಿ ಬಹಳ ದಿನ ಉಳಿಯಲು , ಕುಟುಂಬದಲ್ಲಿ ಸಾಮರಸ್ಯ ಸಾಧಿಸಲು, ಎದುರಿನ ವ್ಯಕ್ತಿಯ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುತ್ತಲೇ ವ್ಯಕ್ತಿ ಬದಲಾಗಲು ಬೇಕಾಗುವಷ್ಟು ಸಮಯವನ್ನು ನೀಡಲು ಶಕ್ತಿಯನ್ನು ನೀಡುತ್ತದೆ.
ಇವನ್ನೆಲ್ಲ ಯೋಚಿಸಿದಾಗ ಅನಿಸುತ್ತದಲ್ಲವೆ? ನಮ್ಮ ಶಿಕ್ಷಣ ಮತ್ತು ಪೋಷಣೆಯಲ್ಲಿ ನಾವು ಎಡಗಿದ್ದೇವೆ. ಎಷ್ಟೇ ಓದಲಿ, ಔದ್ಯೊಗಿಕವಾಗಿ ಯಶಸ್ಸು ಪಡೆಯಲಿ ಹೆಣ್ಣು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾಳೆ. ಯಾವುದೇ ಒಮ್ಮುಖದ ಬೆಳವಣಿಗೆ ಜೀವನದ ಇನ್ನೊಂದು ಮಗ್ಗುಲನ್ನು ನಿರ್ಲಕ್ಷಿಸಬಾರದು. ಹಾಗೆ ನಿರ್ಲಕ್ಷಿಸಿದಾಗ ಹೆಣ್ಣಿರಲಿ, ಗಂಡಿರಲಿ ಸಮತೋಲನ ಕಳೆದುಕೊಂಡು, ಸಮಾಜದಲ್ಲಿ ಕ್ರೌರ್ಯ ಹೆಚ್ಚಾಗಲು ಕಾರಣವಾಗುತ್ತದೆ.
ಮೊದಲ ಮತ್ತು ಮೂರನೆ ಪ್ರಕರಣದಲ್ಲಿ ತಾಯಿಗೆ ಮಗು ಭಾರವಾಗಿದೆ. ಆ ಮಗುವಿನ ಜೈವಿಕ ತಂದೆ ದೂರವಾಗಿದ್ದಾನೆ. ಈಕೆ ಒಬ್ಬಳೆ ಮಗುವಿನ ಬೆಳವಣಿಗೆಯ ಜವಾಬ್ದಾರಿ ಹೊತ್ತಿರುವುದು ಸ್ಪಷ್ಟ. ಇತ್ತೀಚೆಗಂತೂ ಮದುವೆ ಮತ್ತು ಅದರ ನಂತರದ ಜವಾಬ್ದಾರಿಗಳ ಬಗ್ಗೆ ಗಂಡು ಮತ್ತು ಹೆಣ್ಣಿನ ಜೀವನ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ವ್ಯಕ್ತಿಗತ (ಇಂಡಿವಿಜ್ಯುವಲಿಸ್ಟಿಕ್) ಎಂಬ ಧೋರಣೆ ವ್ಯಕ್ತಿಯನ್ನು ಸ್ವಕೇಂದ್ರದಲ್ಲೇ ಕಟ್ಟಿ ಹಾಕಿದೆ. ಎಲ್ಲರೂ ಆಗುತ್ತಾರೆ, ನಾವೂ ಆಗಬೇಕು ಎಂದು ಮದುವೆಯಾಗುವುದು ಬೇರೆ, ಒಬ್ಬರನ್ನೊಬ್ಬರು ಜೊತೆಯಾಗಿ ಜೀವನದ ಯಾವುದೋ ಒಂದು ಗುರಿಯನ್ನು ತಲುಪುತ್ತೇವೆ ಎನ್ನುವ ಬದ್ಧತೆ ಬೇರೆ. ಈ ಬದ್ಧತೆ ಜವಾಬ್ದಾರಿತನ, ಕಷ್ಟ ಸಹಿಷ್ಣುತೆ, ಪ್ರೀತಿ, ನಂಬಿಕೆ, ಸಹಜೀವನ, ಹೊಂದಾಣಿಕೆ, ಸಮರ್ಪಣೆ ಮತ್ತು ಪ್ರಬುದ್ಧತೆಯನ್ನು ಒಳಗೊಂಡಿದೆ. ಈ ಅಂಶಗಳನ್ನು ಮಕ್ಕಳಲ್ಲಿ ತುಂಬಿ ಬೆಳೆಸಿದಾಗ ಮಾತ್ರ ದೊಡ್ಡವರಾದ ಮೇಲೆ ಉತ್ತಮ ಸಂಗಾತಿಯಾಗಬಹುದು, ಉತ್ತಮ ಕೆಲಸಗಾರರಾಗಬಹುದು. ಜೀವನದಲ್ಲಿ ತಕರಾರುಗಳಿಲ್ಲದೆ, ತಕರಾರು ಮಾಡದೆ ಖುಷಿಯಾಗಿ ಬದುಕಬಹುದು.
ಇನ್ನು ಬಹಳಷ್ಟು ವೃದ್ಧಾಶ್ರಮಗಳನ್ನು ನೋಡಿರುವ ಅನುಭವದ ಮೇಲೆ ಹೇಳುವುದಾದರೆ, ಅಲ್ಲೂ ಸಹ ಸಾಮರಸ್ಯ ಮತ್ತು ಸಹಬಾಳ್ವೆ ಕೇವಲ ಜನರೇಶನ್ ಗ್ಯಾಪ್ ಆಗಿ ಉಳಿದಿಲ್ಲ ಎನ್ನುವುದು ಅರ್ಥವಾಗುತ್ತದೆ. ಅದಕ್ಕೂ ಮೀರಿ ಇವತ್ತಿನ ಯುವಜನಾಂಗ ಮತ್ತು ಹಿರಿಯರ ನಡುವೆ ಬದ್ಧತೆಯ ಕೊರತೆ ಕಾಣುತ್ತದೆ. ಹಿರಿಯ ಜೀವಗಳು ಹಳೆಯ ಮೌಲ್ಯಗಳನ್ನು ಮಕ್ಕಳ ಮೇಲೆ ಹೇರುವುದು, ಪ್ರತಿ ನಿಮಿಷಕ್ಕೂ, ಪ್ರತಿ ಕೆಲಸಕ್ಕೂ ಮೂಗು ತೂರಿಸುವುದು, ತಮ್ಮ ಅಸ್ತಿತ್ವ ಮತ್ತು ಮೇಲುಭಾವನೆಯನ್ನು ಹೇರುವುದು ಮಕ್ಕಳಿಗೆ ಹಿಂಸೆಯಾದರೆ, ಯಾವುದಕ್ಕೂ ಕೇಳದ , ತಾನು ಏನು ಮಾಢುತ್ತೇನೆ ಎಂದು ಹೇಳದ , ತಮ್ಮ ವಯಸ್ಸು ಮತ್ತು ಅನುಭವಕ್ಕೆ ಗೌರವ ನೀಡದ ಮಕ್ಕಳು ತಂದೆ-ತಾಯಿಗೆ ಹಿಂಸೆ ಎನಿಸುತ್ತದೆ. ಒಟ್ಟಿನಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ, ಪರಸ್ಪರ ಬಿಟ್ಟುಕೊಡದ ಸುಂದರ ಬದುಕಿನ ಹಂಬಲಕ್ಕಿಂತಲೂ ವ್ಯಕ್ತಿಗತ ಶ್ರೇಷ್ಠತೆ, ಅಹಮಿಕೆ ಮತ್ತು ಕೌಟುಂಬಿಕ ಬದುಕಿನ ಕುರಿತ ಅಜ್ಞಾನ ಇವೆಲ್ಲಕ್ಕೂ ಕಾರಣವಾಗಿದೆ.
ಇವೆಲ್ಲ ಸರಿಹೋಗಬೇಕಾದರೆ ಮಕ್ಕಳ ಪೋಷಕರು ಸುಶಿಕ್ಷಿತರಾಗಬೇಕು. ದೃಷ್ಟಿಕೋನ ಬದಲಾಗಬೇಕು. ಮಕ್ಕಳಿಗೆ ಹೇಳುವ ಸಾಮರಸ್ಯವನ್ನು ತಮ್ಮ ಬದುಕಿನಲ್ಲಿ ತಂದುಕೊಳ್ಳಬೇಕು. ಕೇವಲ ಶೈಕ್ಷಣಿಕ/ಔದ್ಯೋಗಿಕ ಯಶಸ್ಸು ಮಾತ್ರವಲ್ಲದೆ, ವೈಯಕ್ತಿಕವಾಗಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳುವುದು, ತನ್ನ ಸುತ್ತಲೂ ಇರುವವರನ್ನು ನೋಡಿಕೊಳ್ಳುವುದು ಮತ್ತು ಜೊತೆಗಾರರೊಂದಿಗೆ ಬೆರೆಯುವಂತಹ ಗುಣಗಳನ್ನು ಬೆಳೆಸಿಕೊಳ್ಳಲೂ ಮಹತ್ವ ನೀಡಬೇಕು. ಆಗ ಒಬ್ಬಂಟಿಯಾಗದೆ ಇರಲು, ಒಂದು ವೇಳೆ ಒಬ್ಬಂಟಿಯಾದರೂ ತಾಳ್ಮೆ ಕಳೆದುಕೊಳ್ಳದೆ ಹೆತ್ತ ಜೀವಕ್ಕೊಂದು ಜೀವನ ಕೊಡಲು, ಸಾಧ್ಯವಾಗುತ್ತದೆ. ತನ್ನ ತಂದೆ-ತಾಯಿಗೇ ಒಮ್ಮೆಯಾದರೂ ಬದುಕಿದ್ದೀಯಾ ಎಂದು ಕೇಳದ ಮಕ್ಕಳು ಮದುವೆಯಾಗಿ ಬಂದ ಮೇಲೆ ಅತ್ತೆ-ಮಾವನನ್ನು ಕೇಳುತ್ತಾರಾ? ಇಲ್ಲ ಅಲ್ಲವೆ? ಆದ್ದರಿಂದ ಇವತ್ತಿನ ಕ್ರೌರ್ಯ ಮತ್ತು ಅಪರಾಧ ಪ್ರಕರಣಗಳಿಗೆ ಪರಿಸ್ಥಿತಿ ಕಾರಣವಾದರೆ , ಈ ಪರಿಸ್ಥಿತಿಗೆ ಆ ಕ್ರೌರ್ಯಕ್ಕೆ ಕಾರಣರಾದ ವ್ಯಕ್ತಿಗಳೂ ಪರೋಕ್ಷವಾಗಿ ಅಪರಾಧಿಗಳಾಗಿದ್ದಾರೆ.






