ಭಾರತದ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣೊಬ್ಬಳು ಶಾಲೆ ಮತ್ತು ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದೇ ಅಪರಾಧ ಎನ್ನುವ ಕಾಲವಿತ್ತು. ಅಂತಹ ಕಾಲದಲ್ಲೊಂದು ಮಹಿಳಾ ಶಿಕ್ಷಣದ ಕ್ರಾಂತಿ ಆರಂಭಿಸಿದ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರಿಗೆ ಸಲ್ಲುತ್ತದೆ. ಭಾರತದ ಸಾಮಾಜಿಕ ಇತಿಹಾಸದಲ್ಲಿ ಮಹಿಳಾ ಶಿಕ್ಷಣವೆಂಬ ಪದವೇ ಅಪರಿಚಿತವಾಗಿದ್ದ ಕಾಲದಲ್ಲಿ, ಆಕೆ ತನ್ನ ಪೆನ್, ಪಠ್ಯಪುಸ್ತಕ ಮತ್ತು ಧೈರ್ಯದಿಂದ ಸಮಾಜದ ಅಜ್ಞಾನವನ್ನು ಎದುರಿಸಿದರು. ಶಿಕ್ಷಣವು ಹೆಣ್ಣುಮಕ್ಕಳಿಗೆ “ಅಪಾಯ” ಎಂದು ಭಾವಿಸಲ್ಪಟ್ಟ 19ನೇ ಶತಮಾನದಲ್ಲಿ, ಅದನ್ನು ಅಧಿಕಾರ ಎಂದು ಘೋಷಿಸಿದ ಮೊದಲ ಧ್ವನಿ ಅವರದ್ದು.
ಬಾಲ್ಯ ಮತ್ತು ಶಿಕ್ಷಣ
1831ರ ಜನವರಿ 3ರಂದು ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ, ಅಕ್ಷರಜ್ಞಾನವೇ ಅಪರಾಧವೆಂದು ಕಾಣಲ್ಪಟ್ಟ ಸಮಾಜದಲ್ಲಿ ಬೆಳೆದವರು. ಬಾಲ್ಯದಲ್ಲೇ ಜ್ಯೋತಿರಾವ್ ಫುಲೆ ಅವರೊಂದಿಗೆ ವಿವಾಹವಾದ ಅವರು, ಪತಿಯ ಪ್ರೇರಣೆಯಿಂದಲೇ ಶಿಕ್ಷಣದ ಮೌಲ್ಯವನ್ನು ಅರಿತುಕೊಂಡರು. ನಂತರ ಸ್ವತಃ ಶಿಕ್ಷಣ ಪಡೆದ ಅವರು, ಶಿಕ್ಷಕಿಯಾಗಿ ರೂಪುಗೊಂಡರು — ಇದು ಆ ಕಾಲದ ಸಮಾಜಕ್ಕೆ ಅಸಾಧಾರಣ ಸಂಗತಿ.
ಭಾರತದ ಮೊದಲ ಮಹಿಳಾ ಶಿಕ್ಷಕಿ
1848ರಲ್ಲಿ ಪುಣೆಯ ತಾತ್ಯಾಸಾಹೇಬ್ ಬಿಡೆ ಅವರ ವಾಡೆಯಲ್ಲಿ ಜ್ಯೋತಿರಾವ್ ಫುಲೆ ಅವರೊಂದಿಗೆ ಸೇರಿ, ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಬಾಲಕಿಯರ ಶಾಲೆ ಆರಂಭಿಸಿದರು. ಶಾಲೆಗೆ ಹೋಗುವ ದಾರಿಯಲ್ಲಿ ಸಮಾಜದಿಂದ ಅವಮಾನ, ಕಲ್ಲು ಎಸೆತ, ಮಲಮೂತ್ರದ ದಾಳಿ ಎಲ್ಲವನ್ನೂ ಎದುರಿಸಿದರೂ, ಅವರು ಹಿಂದೆ ಸರಿಯಲಿಲ್ಲ, ಎದೆಗುಂದಲಿಲ್ಲ. “ಒಂದು ಬಟ್ಟೆ ಕೆಟ್ಟರೆ ಮತ್ತೊಂದು ಬಟ್ಟೆ ಹಾಕಬಹುದು; ಆದರೆ ಶಿಕ್ಷಣ ನಿಂತರೆ ಭವಿಷ್ಯವೇ ನಿಲ್ಲುತ್ತದೆ” ಎಂಬುದು ಅವರ ದೃಢನಂಬಿಕೆಯಾಗಿತ್ತು. ಈ ನಂಬಿಕೆಯ ಶಕ್ತಿಯಿಂದಲೇ ಅವರು ಎಲ್ಲಾ ಬಾಧೆ, ಅಡೆ ತಡೆಗಳನ್ನು ಎದುರಿಸಿ ತಮ್ಮ ಗುರಿಯನ್ನು ಮುಟ್ಟಿದರು. ಸಾವಿತ್ರಿಬಾಯಿ ತಮ್ಮ ೯-೧೦ನೇ ವಯಸ್ಸಿನಲ್ಲಿ ಜ್ಯೋತಿಬಾ ಪುಲೆಯೊಂದಿಗೆ ವಿವಾಹವಾದರು. ಅನಕ್ಷರಸ್ತೆಯಾಗಿದ್ದ ಅವರನ್ನು ಶಿಕ್ಷಣದ ಮಾರ್ಗಕ್ಕೆ ತಂದ ಕೀರ್ತಿ ಅವರ ಪತಿ ಜ್ಯೋತಿಬಾ ಪುಲೆಯವರದ್ದು. ಹೆಣ್ಣೊಬ್ಬಳು ಒಂದು ಕಿಡಿಯಿದ್ದಂತೆ. ಆಕೆಗೆ ಪುಟ್ಟ ಪ್ರೋತ್ಸಾಹವಿದ್ದರೆ ಆಕೆ ಎಂತಹ ದೊಡ್ಡ ಶಕ್ತಿಯಾಗಬಲ್ಲಳು ಎಂಬುದಕ್ಕೆ ಈ ದಂಪತಿ ಇಂದಿಗೂ ಮಾದರಿಯಾಗಿದ್ದಾರೆ. ಪತಿಯ ಪ್ರೋತ್ಸಾಹದಿಂದ, ತನ್ನ ಅದ್ಭುತ ಅಕ್ಷರ ವ್ಯಾಮೋಹದಿಂದ ಭಾರತದ ಮೊಟ್ಟಮೊದಲ ಶಿಕ್ಷಕಿ ಮತ್ತು ಮುಖ್ಯಶಿಕ್ಷಕಿ ಎನ್ನುವ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ದಂಪತಿ ತಮ್ಮ ಕಾಲಾವಧಿಯಲ್ಲಿ ಸುಮಾರು ೧೮ ಶಾಲೆಗಳನ್ನು ತೆರೆದು ೧೫೦ಕ್ಕೂ ಹೆಚ್ಚು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕಾರಣೀಭೂತರಾದರು. ತಮ್ಮ ಪತಿಯ ಮರಣಾನಂತರವೂ ಕೆಲಸ ನಿಲ್ಲಿಸದೆ ವಿಧವಾ ಪಟ್ಟಕ್ಕೆ ಹೆದರದೆ ಶಿಕ್ಷಣ ಕ್ರಾಂತಿಯನ್ನು ಮುನ್ನಡೆಸಿದವರು ಸಾವಿತ್ರಿಬಾಯಿ ಪುಲೆ.
ಮಹಿಳಾ ಶಿಕ್ಷಣ: ಸಾಮಾಜಿಕ ಮುಕ್ತಿಯ ಮಾರ್ಗ
ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಣ ಕೇವಲ ಅಕ್ಷರಜ್ಞಾನವಲ್ಲ. ಅದು ಸಮಾನತೆ, ಸ್ವಾಭಿಮಾನ ಮತ್ತು ಆತ್ಮಗೌರವದ ಸಾಧನ. ಬಾಲಕಿಯರಿಗೆ ಓದು ಕಲಿಸುವುದು ಎಂದರೆ, ಮುಂದಿನ ತಲೆಮಾರಿನ ಸಮಾಜವನ್ನೇ ಬದಲಿಸುವ ಕಾರ್ಯವೆಂದು ಅವರು ನಂಬಿದರು. ವಿಧವೆಯರ ಪುನರ್ವಿವಾಹ, ಬಾಲ್ಯವಿವಾಹ ವಿರೋಧ, ದಲಿತ-ಅಲ್ಪಸಂಖ್ಯಾತರ ಶಿಕ್ಷಣ ಇವೆಲ್ಲವೂ ಅವರ ಕಾರ್ಯಭಾಗವಾಗಿದ್ದವು. ಸತ್ಯಶೋಧನಾ ಸಮಿತಿಯೊಂದನ್ನು ಆರಂಭಿಸಿ ಅದರ ಮಹಿಳಾ ಘಟಕದ ಅಧ್ಯಕ್ಷೆಯಾದರು. ವಿಧವೆಯರ ಮಕ್ಕಳಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹ ತೆರೆದರು. ಮಹಿಳಾ ಆಧುನಿಕ ಯೋಚನೆಗೆ ವೇದಿಕೆ ಕಲ್ಪಿಸುವ ಮಹಿಳಾ ಸೇವಾ ಮಂಡಳಿ ಸ್ಥಾಪಿಸಿದರು.
ಕಾವ್ಯ ಮತ್ತು ಚಿಂತನೆ
ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಮಾತ್ರವಲ್ಲ, ಕವಿಯತ್ರಿಯೂ ಆಗಿದ್ದರು. ಅವರ ಕವನಗಳಲ್ಲಿ ಮಹಿಳೆಯರ ನೋವು, ಸಮಾಜದ ಅನ್ಯಾಯ, ಶಿಕ್ಷಣದ ಬೆಳಕು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. “ಓದು ಹೆಣ್ಣಿಗೆ ಏಕೆ ಬೇಡ?” ಎಂಬ ಸಮಾಜದ ಧೋರಣೆಯನ್ನು ಅವರ ಬರಹಗಳು ಪ್ರಶ್ನಿಸುತ್ತವೆ.
ಮರಣವೂ ಸೇವೆಯಲ್ಲೇ
1897ರಲ್ಲಿ ಪುಣೆಯಲ್ಲಿ ಪ್ಲೇಗ್ ರೋಗ ತೀವ್ರವಾಗಿದ್ದಾಗ, ಸೋಂಕಿತರ ಸೇವೆಯಲ್ಲಿ ತೊಡಗಿದ್ದ ಸಾವಿತ್ರಿಬಾಯಿ ಫುಲೆ ಸ್ವತಃ ರೋಗಬಾಧಿತರಾಗಿ ನಿಧನರಾದರು. ಅವರ ಜೀವನದಂತೆ, ಅವರ ಮರಣವೂ ಮಾನವ ಸೇವೆಯಲ್ಲಿಯೇ ಅಂಕಿತವಾಯಿತು. ಇಂದು ಮಹಿಳಾ ಶಿಕ್ಷಣವನ್ನು ನಾವು ಹಕ್ಕು ಎಂದು ಹೇಳಿಕೊಳ್ಳುತ್ತೇವೆ. ಆದರೆ ಆ ಹಕ್ಕಿನ ಹಿಂದೆ ಇದ್ದ ಹೋರಾಟವನ್ನು ನೆನಪಿಸುವ ಹೆಸರು ಸಾವಿತ್ರಿಬಾಯಿ ಫುಲೆ. ಶಾಲೆಗೆ ಹೋಗುವ ಪ್ರತಿಯೊಂದು ಹೆಣ್ಣುಮಗು, ಪದವಿ ಪಡೆದುಕೊಳ್ಳುವ ಪ್ರತಿಯೊಬ್ಬ ಯುವತಿಯ ಜೀವನದಲ್ಲಿ ಕಾಣದೆಯೇ ಇರುವ ಈ ಮಹಿಳೆಯ ಋಣವಿದೆ. ಸಾವಿತ್ರಿಬಾಯಿ ಫುಲೆ ಕೇವಲ ಇತಿಹಾಸದ ಪಾತ್ರವಲ್ಲ; ಅವರು ಶಿಕ್ಷಣದ ಮೂಲಕ ಸಮಾಜವನ್ನು ಬದಲಾಯಿಸಬಹುದೆಂಬ ಜೀವಂತ ಸಾಕ್ಷಿ.







