ಭಾರತವು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಸಮನ್ವಯದ ರಾಷ್ಟ್ರವಾಗಿದೆ. ವಿವಿಧತೆಯಲಿ ಏಕತೆ ಭಾರತದ ಅನನ್ಯತೆ. ಇಲ್ಲಿರುವ ಸುಮಾರು ನಾಲ್ಕೂವರೆ ದಶಲಕ್ಷ ಜಾತಿ (೨೦೧೧ರ ಜನಗಣತಿ ಪ್ರಕಾರ) ಜನರು ತಾವೆಲ್ಲ ಭಾರತೀಯರು ಎಂಬ ಅಸ್ಮಿತೆಯೊಂದಿಗೆ ಕೂಡಿ ಬದುಕುತ್ತಿದ್ದಾರೆ. ಈ ಜಾತಿಗಳು ಸುಮಾರು ೧೦ ಧರ್ಮಗಳಲ್ಲಿ ವಿಲೀನವಾಗಿವೆ. ಈ ಧರ್ಮಗಳ ಜನಸಂಖ್ಯೆಯನ್ನು ಆಧರಿಸಿ ಅಲ್ಪಸಂಖ್ಯಾತರನ್ನು ಗುರುತಿಸಲಾಗಿದೆ. ಶೇ. ೮೦ರಷ್ಟಿರುವ ಹಿಂದೂಗಳನ್ನು ಬಿಟ್ಟು ಉಳಿದೆಲ್ಲ ಧರ್ಮದವರೂ ಅಲ್ಪಸಂಖ್ಯಾತರೇ ಆಗಿರುತ್ತಾರೆ. ಭಾರತ ಸರ್ಕಾರದ ಪ್ರಕಾರ ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳು ಧಾರ್ಮಿಕ ಅಲ್ಪಸಂಖ್ಯಾತರಾಗಿ ಗುರುತಿಸಲ್ಪಟ್ಟಿವೆ. ಭಾಷೆಯ ಆಧಾರದ ಮೇಲೆ, ರಾಜ್ಯ ಮಟ್ಟದಲ್ಲಿ ಬೇರೆ ಭಾಷೆ ಮಾತನಾಡುವ ಸಮುದಾಯಗಳು ಭಾಷಾ ಅಲ್ಪಸಂಖ್ಯಾತರಾಗುತ್ತಾರೆ.ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಸಮಾನ ಹಕ್ಕುಗಳೊಂದಿಗೆ ಬದುಕಬೇಕೆಂಬ ಆಶಯವನ್ನು ಸಂವಿಧಾನವು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಆದರೆ ಪ್ರಾಯೋಗಿಕವಾಗಿ ಈ ಹಕ್ಕುಗಳು ಎಷ್ಟರ ಮಟ್ಟಿಗೆ ಜಾರಿಯಾಗುತ್ತಿವೆ ಎಂಬುದು ಇಂದಿನ ಪ್ರಶ್ನೆಯಾಗಿದೆ.
ಭಾರತೀಯ ಸಂವಿಧಾನದ ವಿಧಿ 14 ಎಲ್ಲಾ ನಾಗರಿಕರಿಗೆ ಸಮಾನತೆ ನೀಡುತ್ತದೆ. ವಿಧಿ 15 ಧರ್ಮ, ಜಾತಿ, ಭಾಷೆ, ಲಿಂಗದ ಆಧಾರದ ಮೇಲೆ ಭೇದಭಾವವನ್ನು ನಿಷೇಧಿಸುತ್ತದೆ. ವಿಧಿ 25 ರಿಂದ 28 ರವರೆಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತವೆ. ವಿಶೇಷವಾಗಿ ವಿಧಿ 29 ಮತ್ತು 30 ಅಲ್ಪಸಂಖ್ಯಾತರಿಗೆ ತಮ್ಮ ಭಾಷೆ, ಲಿಪಿ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಲು ಹಕ್ಕು ನೀಡುತ್ತವೆ. ಕಾನೂನು ದೃಷ್ಟಿಯಿಂದ ನೋಡಿದರೆ, ಅಲ್ಪಸಂಖ್ಯಾತರ ಹಕ್ಕುಗಳು ಬಲಿಷ್ಠವಾಗಿವೆ. ಆದರೆ ಸವಾಲು ಇರುವುದು ಈ ಹಕ್ಕುಗಳ ಅನುಷ್ಠಾನದಲ್ಲಿ.
ವಿವಿಧ ಸರ್ಕಾರಿ ಸಮೀಕ್ಷೆಗಳು ಮತ್ತು ಸಮಿತಿಗಳ ವರದಿಗಳ ಪ್ರಕಾರ, ಕೆಲವು ಅಲ್ಪಸಂಖ್ಯಾತ ಸಮುದಾಯಗಳು ಶಿಕ್ಷಣ, ಉದ್ಯೋಗ, ಆದಾಯ ಮತ್ತು ಸಾಮಾಜಿಕ ಭದ್ರತೆಯ ಕ್ಷೇತ್ರಗಳಲ್ಲಿ ಹಿಂದುಳಿದ ಸ್ಥಿತಿಯಲ್ಲಿವೆ. ಕೆಲವೊಂದು ನಿರ್ದಿಷ್ಟ ಅಲ್ಪಸಂಖ್ಯಾತರು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ಇನ್ನೂ ದೂರವೇ ಉಳಿದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗಾಗಿ ವಿಶೇಷ ಯೋಜನೆಗಳಿದ್ದರೂ, ಮೀಸಲಾತಿಗಳಿದ್ದರೂ ಅವುಗಳನ್ನು ಅವರು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಅರ್ಧಕ್ಕೆ ಶಾಲೆ ಬಿಡುವುದು, ಶಿಕ್ಷಣಕ್ಕಿಂತಲೂ ಹೆಚ್ಚು ಬಾಲಕಾರ್ಮಿಕರಾಗುವುದು ಅನಿವಾರ್ಯವಾಗುವುದು, ಅಜ್ಞಾನ, ಬಡತನ ಮತ್ತು ಧಾರ್ಮಿಕ ನಂಬಿಕೆಗಳು ಈ ಅಲ್ಪಸಂಖ್ಯಾತರನ್ನು ಮುಂದುವರೆಯಲು ಬಿಟ್ಟಿಲ್ಲ. ಸಾಮಾಜಿಕ ನ್ಯಾಯ ತಲುಪುವಲ್ಲಿ ಈ ಅಂಶ ಮಹತ್ವದ ಪಾತ್ರ ವಹಿಸುತ್ತದೆ. ಇನ್ನು ಬಹುಸಂಖ್ಯಾತರು ತಮ್ಮದು ಎಂದು ಹೇಳಿಕೊಳ್ಳುವ ಪಕ್ಷಗಳು ಅಧಿಕಾರಕ್ಕೆ ಬಂದ ಕೂಡಲೆ ಉನ್ನತ ಶಿಕ್ಷಣದಲ್ಲಿ ಪ್ರತಿನಿಧಿತ್ವ ಮತ್ತು ಔದ್ಯೋಗಿಕ ಸ್ವಾತ್ರಂತ್ರ್ಯ ಕಸಿದುಕೊಳ್ಳಲು ಮುಂದಾಗುತ್ತಾರೆ. ದೇವಸ್ಥಾನಗಳ ಎದುರು ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಕೂಡದು ಎನ್ನುವ ದಬ್ಬಾಳಿಕೆ, ಗುಜರಿಯವರು ಎಂದು ಮುಸ್ಲಿಮ್ ಸಮುದಾಯವನ್ನು ಸಂಸದರೊಬ್ಬರು ಹೀಗಳೆದಿದ್ದು ಇವೆಲ್ಲ ಕೆಲವು ಉದಾಹರಣೆ ಮಾತ್ರ. ಹೀಗೆ ಒಳಹೊರಗಿನ ಸಂಘರ್ಷಗಳಿಂದಾಗಿ ಉದ್ಯೋಗದಲ್ಲಿ, ವಿಶೇಷವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ, ಅಲ್ಪಸಂಖ್ಯಾತರ ಪ್ರತಿನಿಧಿತ್ವ ಕಡಿಮೆ ಎನ್ನಬಹುದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಗುರುತು ಆಧಾರದ ಮೇಲೆ ಸಂಘರ್ಷಗಳು, ಸಾಮಾಜಿಕ ತಿರಸ್ಕಾರ ಮತ್ತು ಕೆಲವೊಮ್ಮೆ ಹಿಂಸಾಚಾರ ನಡೆದಿರುವ ವರದಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಹಿಜಾಬ್, ಹಲಾಲ್ ನಂತಹ ಧಾರ್ಮಿಕ ಆಚರಣೆ, ಉಡುಗೆ, ಆಹಾರ ಪದ್ಧತಿ ಮುಂತಾದ ವಿಷಯಗಳು ರಾಜಕೀಯ ಮತ್ತು ಸಾಮಾಜಿಕ ವಿವಾದಗಳ ಕೇಂದ್ರಬಿಂದುವಾಗಿರುವುದು ಅಲ್ಪಸಂಖ್ಯಾತರಲ್ಲಿ ಅಸುರಕ್ಷಿತ ಭಾವನೆಯನ್ನು ಉಂಟುಮಾಡಿದೆ. ಸಾರ್ವಜನಿಕರು, ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆ, ಮಾಧ್ಯಮಗಳು ಕೆಲವೊಂದು ಸಮುದಾಯವನ್ನು ಗುರಿಯಾಗಿಸಿ ಅವಹೇಳನ ಮಾಡುವುದು, ಅಪರಾಧ ಪಟ್ಟ ಕಟ್ಟಲು ತರಾತುರಿಯಲ್ಲಿರುವುದು ಅಲ್ಪಸಂಖ್ಯಾತರ ಬದುಕುವ, ಮಾನವ ಹಕ್ಕುಗಳೂ ಸಹ ಕೆಲವೊಮ್ಮೆ ದುರ್ಲಭವಾಗಿರುವುದು ಕಣ್ಣಿಗೆ ರಾಚುತ್ತದೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ವಿದ್ಯಾರ್ಥಿವೇತನ, ಕೌಶಲ್ಯಾಭಿವೃದ್ಧಿ, ವಸತಿ ಮತ್ತು ಆರ್ಥಿಕ ಸಹಾಯ ಯೋಜನೆಗಳು ಇದರಲ್ಲಿ ಸೇರಿವೆ. ಆದರೆ ಈ ಯೋಜನೆಗಳ ಲಾಭ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎನ್ನುವ ಕೂಗು ಇದ್ದೇ ಇದೆ. ಯೋಜನೆಗಳ ನಿಜವಾದ ಅರ್ಹರು ಅನಕ್ಷರಸ್ಥರು , ಸಾಮಾಜಿಕವಾಗಿ , ಆರ್ಥಿಕವಾಗಿ ಹಿಂದುಳಿದವರು ಆಗಿರುವುದು ಯೋಜನೆಗಳ ವಿಫಲತೆಗೆ ಒಂದು ಕಾರಣವಾದರೆ, ಯೋಜನೆ ಜಾರಿಯಲ್ಲಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಮತ್ತೊಂದು ಕಾರಣ.
ವಿಶ್ವಮಾನವ ಸಂದೇಶ ಸಾರುವ ಹಿಂದೂಗಳಿರುವ ಭಾರತದಲ್ಲಿ, ವಸುದೈವ ಕುಟುಂಬ ಎನ್ನುವ ಭಾವನೆಗಳು ಮರೆಯಾಗುತ್ತಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೇಶ ವಿಭಜನೆಯ ಕಾವಿದ್ದ ವೇಳೆಗಿಂತಲೂ ಹೆಚ್ಚು ಇಂದು ಅಲ್ಪಸಂಖ್ಯಾತರ ಹಕ್ಕುಗಳು ದಮನವಾಗುತ್ತಿವೆ ಎಂದು ಸಮಾಜಶಾಸ್ತ್ರಜ್ಞರು ಆತಂಕವ್ಯಕ್ತಪಡಿಸುತ್ತಾರೆ. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯು ಕೇವಲ ಕಾನೂನಿನ ವಿಷಯವಲ್ಲ; ಅದು ಸಾಮಾಜಿಕ ಮನೋಭಾವದ ಪರೀಕ್ಷೆಯಾಗಿದೆ. ಸಂವಿಧಾನದ ಆತ್ಮವನ್ನು ಕೇವಲ ಪಠ್ಯದಲ್ಲಿ ಅಲ್ಲ, ನಿತ್ಯ ಜೀವನದಲ್ಲೂ ಅನುಸರಿಸಬೇಕಿದೆ. ಸಮಾನ ಅವಕಾಶ, ಭದ್ರತೆ ಮತ್ತು ಗೌರವದ ಬದುಕು ಅಲ್ಪಸಂಖ್ಯಾತರಿಗೆ ದೊರಕಿದಾಗ ಮಾತ್ರ ಭಾರತವು ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕ ರಾಷ್ಟ್ರವಾಗುತ್ತದೆ. ಆಗ ಮಾತ್ರ ಎಲ್ಲರ ಜೊತೆಗೆ ಎಲ್ಲರ ವಿಕಾಸ ಎನ್ನುವುದು ನಿಜವಾಗುತ್ತದೆ. ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಕಾನೂನಾತ್ಮಕವಾಗಿ ಲಭ್ಯವಿದ್ದರೂ ವಾಸ್ತವದಲ್ಲಿ ಮರೀಚಿಕೆಯಾಗಿವೆ. ಈ ಅಂತರವನ್ನು ತುಂಬುವ ಹೊಣೆ ಸರ್ಕಾರದ ಜೊತೆಗೆ ಸಮಾಜದ ಮೇಲಿದೆ. ಸಂವಿಧಾನದ ಮೌಲ್ಯಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವುದೇ ಅಲ್ಪಸಂಖ್ಯಾತರ ಹಕ್ಕುಗಳಿಗೆ ನಿಜವಾದ ರಕ್ಷಣೆಯಾಗುತ್ತದೆ.






