ಬೆಂಗಳೂರು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಪ್ರಲ್ಹಾದ ಜೋಶಿಯವರ ರಾಜೀನಾಮೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗೋಪಾಲ್ ಜೋಶಿಯವರು ಪ್ರಲ್ಹಾದ ಜೋಶಿಯವರ ಜೊತೆಗೆ ಇದ್ದಾರೆ ಎಂಬುದು ಹುಬ್ಬಳ್ಳಿ ಭಾಗದ ಜನರಿಗೆ ಗೊತ್ತಿರುವ ಸಂಗತಿ. ಸಹೋದರ ಗೋಪಾಲ್ ಜೋಶಿಯವರ ಮೇಲೆ ಬಂದಿರುವ ಆರೋಪ, ನನಗೆ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನುಣಿಚಿಕೊಳ್ಳುವುದು ಸರಿಯಲ್ಲ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಮಾಜಿ ಶಾಸಕ ದೇವಾನಂದ ಚೌವ್ಹಾಣ ಗೌರವಯುತವಾದ ವ್ಯಕ್ತಿ. ಅವರಿಗೆ ಲೋಕಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವಾನಂದ ಚೌ್ವ್ಹಾಣ ಅವರು ದಾಖಲೆ ಕೊಟ್ಟಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರ ಹೆಸರನ್ನ ಬಳಸಿಕೊಳ್ಳಾಗಿದೆ. ಪ್ರಲ್ಹಾದ ಜೋಶಿಯವರ ಪ್ರಭಾವ ಬಳಿಸಿಕೊಂಡು ವಂಚಿಸಲಾಗಿದೆ ಎಂದು ಆರೋಪ ಮಾಡಿದರು.
ಇಡಿ, ಐಟಿಯವರನ್ನ ಚೂ ಬಿಟ್ಟು ಹೆದರಿಸಿ ದೇವಾನಂದ ಚೌವ್ಹಾಣ ಅವರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ ಹಣ ಪಡೆದು ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಗೋಪಾಲ್ ಜೋಶಿಯವರು ಆರ್.ಎಸ್.ಎಸ್ ನಲ್ಲಿ ತೊಡಗಿಸಿಕೊಂಡವರು. ಆರ್.ಎಸ್.ಎಸ್ ನ ಕೆಲ ನಾಯಕರು ಈ ರೀತಿಯ ಟಿಕೆಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಡಿ ಜನರ ವಿಶ್ವಾಸ ಕಳೆದುಕೊಂಡಿದೆ :
ಮಡಾ ಪ್ರಕರಣದಲ್ಲಿ ಇಡಿ ಬಂದಿರುವುದೇ ಸಿಎಂ ಸಿದ್ದರಾಮಯ್ಯ ಅವರನ್ನ ಸಿಕ್ಕಿಹಾಕಿಸಬೇಕು ಎಂಬ ದುರುದ್ದೇಶದಿಂದ. ಈ ರೀತಿಯ ನಡವಳಿಕೆಗಳಿಂದಾಗಿ ಇಡಿ ಜನರ ವಿಶ್ವಾಸವನ್ನ ಕಳೆದುಕೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಇಡಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ಕೈಗೊಂಬೆಯಾಗಿದೆ. ಕಳೆದ 10 ವರ್ಷದಲ್ಲಿ ಬಿಜೆಪಿಯವರ ಬಂಧನವಾಗಿದೆಯಾ..? ವಿಪಕ್ಷ ನಾಯಕರು ಎಲ್ಲಿ ಇರುತ್ತಾರೋ ಅಲ್ಲಿ ಮಾತ್ರ ಇಡಿ, ಐಟಿ ಚೂ ಬಿಡುತ್ತಾರೆ ಎಂದರು.
ವಿರೋಧ ಪಕ್ಷದ ನಾಯಕರು ಇರುವ ಕಡೆ ಇಡಿ ಸಿಬಿಐವರು ಬರ್ತಾರೆ. ಅರವಿಂದ್ ಕೇಜ್ರಿವಾಲ್, ಸೂರೇನ್, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿದ್ರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಾಸಕ ವಿಜಯೇಂದ್ರ ಯಾಕೆ ಕಣ್ಣಿಗೆ ಕಾಣಲ್ಲ.? ಈ ಕಾನೂನು ದುರ್ಬಳಕೆ ಆಗುತ್ತಿದೆ. ಹೇಗಾದರು ಸರಿ ಸಿಎಂ ಅವರನ್ನು ಸಿಕ್ಕಿಸಬೇಕು ಎಂದು ವ್ಯವಸ್ಥಿತವಾದ ಸಂಚು ನಡೆದಿದೆ. ಪ್ರೀ ಪ್ಲ್ಯಾನ್ ಮಾಡಲಾಗಿದೆ. ಸಿಎಂ ಅವರ ಹೆಸರು ಹೇಳಲು ಇಡಿ ಒತ್ತಡ ಹಾಕಿದರು ಎಂದು ಮಾಜಿ ಸಚಿವ ನಾಗೇಂದ್ರ ಕೂಡ ಹೇಳಿದ್ದಾರೆ. ಹೆದರಿಸುವ ಕೆಲಸ ಇಡಿ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.






