ಬೆಂಗಳೂರು : ಈ ಸುದ್ದಿ ಕುರಿತು ಹರ್ಷಿಕಾ ಪೂಣಚ್ಚ ಆಡಿರುವ ಕೆಲವು ಮಾತುಗಳು ಅನುಮಾನ ಹುಟ್ಟಿಸುವಂತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಹಂಚಿಕೊಂಡ ಕೆಲವು ವಿಚಾರಗಳು ಅವರ ಹೇಳಿಕೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ. ಘಟನೆ ಎಂದು ನಡೆಯಿತು ಎಂಬ ವಿವರ ಅವರ ಹೇಳಿಕೆಯಲ್ಲಿ ಇಲ್ಲ. ಭಾಷೆಯ ವಿಚಾರ ಎತ್ತಿ ಅಲ್ಪಸಂಖ್ಯಾತರ ಮೇಲೆ ಅವರು ಆರೋಪ ಮಾಡಿದ್ದಾರೆ.
ತಾವು ಈ ಬಗ್ಗೆ ಪೋಲೀಸರಿಗೆ ದೂರು ನೀಡಿರುವ ಬಗ್ಗೆ ಯಾವ ವಿವರವನ್ನು ಅವರು ನೀಡಿಲ್ಲ. ಇದೆಲ್ಲ ನಟನೆಯೆ ? ಯಾವುದೋ ರಾಜಕೀಯ ಪಕ್ಷದ ಅಡಿಯಾಳಾಗಿ ಈ ಹೇಳಿಕೆ ನೀಡಿದ್ದಾರೆಯೆ ? ಪೋಲೀಸರು ಈ ಬಗ್ಗೆ ತುರ್ತು ವಿಚಾರಣೆ ನಡೆಸಬೇಕಾಗಿದೆ.
ಅವರ ಹೇಳಿಕೆಯ ವಿವರ ಹೀಗಿದೆ..
ಗೆಳೆಯರೇ, ನಮ್ಮ ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ಒಂದಷ್ಟು ಯೋಚಿಸಿ. ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ. ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯವಾಗಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದ್ದೇನೆ.
ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ರೆಸ್ಟೊರೆಂಟ್‌ವೊಂದರಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ತೆಗೆದುಕೊಂಡು ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು’ ಎಂದು ವಾದಿಸಲು ಪ್ರಾರಂಭಿಸಿದರು. ನನ್ನ ಪತಿ, ಇನ್ನು ವಾಹನ ಮೂವ್ ಮಾಡಿಲ್ವಲ್ಲ, ಸೈಡು ಬಿಡಿ’ ಎಂದು ಹೇಳಿದರು. ಏಕೆಂದರೆ ಅವರು ಮಾತನಾಡುತ್ತಿರುವ ವಿಷಯದಲ್ಲಿ ಅರ್ಥವಿರಲಿಲ್ಲ.
ಬಳಿಕ ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಚಲಾಯಿಸಿದೆವು. ಅಷ್ಟರೊಳಗೆ ಆ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು. ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು. ನನ್ನ ಪತಿ ತುಂಬಾ ತಾಳ್ಮೆಯಿಂದ ಇದ್ದರು, ಹೆಚ್ಚು ಪ್ರತಿಕ್ರಿಯೆ ನೀಡಲಿಲ್ಲ. ನನ್ನ ಪತಿ ಸಾಮಾನ್ಯವಾಗಿ ತುಂಬಾ ಸಿಟ್ಟಿನ ಸ್ವಭಾವದವರು.
2-3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20-30 ಸದಸ್ಯರ ಗುಂಪು ಸ್ಥಳದಲ್ಲಿ ಜಮಾಯಿಸಿತು. ಅವರಲ್ಲಿ ಇಬ್ಬರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ನನ್ನ ಪತಿ ತಕ್ಷಣವೇ ನನ್ನ ಕೈಗೆ ಕೊಟ್ಟರು. ಅಷ್ಟೊತ್ತಿಗಾಗಲೇ ಇಡೀ ತಂಡವು, ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದೇ ಇದ್ದಿದ್ದರಿಂದ ರೊಚ್ಚಿಗೆದ್ದಿದ್ದರು. ವಾಹನಕ್ಕೆ ಹಾನಿ ಮಾಡಿ, ನಮಗೆ ಅಥವಾ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ನಮ್ಮನ್ನು ನಿಂದಿಸಲು ಆರಂಭಿಸಿದರು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ರಿಯಾಕ್ಟ್ ಮಾಡಲಿಲ್ಲ.
ನಾನು ಗಮನಿಸಿದಂತೆ, ನಾವು ಕನ್ನಡದಲ್ಲಿ ಮಾತನಾಡುತ್ತಿರುವುದು ಅವರಿಗೆ ಸಮಸ್ಯೆ ಆಗಿ ಕಾಣಿಸಿತ್ತು. ನೀವು ನಮ್ಮ ಏರಿಯಾಗೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. ಯೇ ಲೋಕಲ್ ಕನ್ನಡ್ ವಾಲಾ ಹೇ (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ಎಂದರು. ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು. ನಿಮ್ಮ ಕನ್ನಡ್ ಸ್ಟೈಲ್ ಅನ್ನು ನೀವೇ ಇಟ್ಕೊಳ್ಳಿ ಎಂದರು.
ಆ ಗುಂಪಿನಲ್ಲಿ ಹೆಚ್ಚಿನವರು ಹಿಂದಿ, ಉರ್ದು ಮತ್ತು ಕೆಲವರು ಅರೆಬರೆ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ನಮಗೆ ಪರಿಚಯವಿದ್ದ ಇನ್ಸ್‌ಪೆಕ್ಟರ್‌ಗೆ ತುರ್ತು ಕರೆ ಮಾಡಿದೆ. ಆದರೆ, ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಅಲ್ಲಿಂದ ಹೋಗಿಬಿಟ್ಟರು.
ನಾವು ಅವರನ್ನು ಹುಡುಕಲು ಪ್ರಯತ್ನಿಸಿದೆವು. ಆದರೆ, ಅಷ್ಟರಲ್ಲಿ ಅವರೆಲ್ಲರೂ ಅಲ್ಲಿಂದ ಹೋಗಿದ್ದರು. ನಾವು ಸಮೀಪ ಪೊಲೀಸ್ ಠಾಣೆಯ ಗಸ್ತು ಪೊಲೀಸ್ ವಾಹನವನ್ನು ಕಂಡು, ಎಎಸ್‌ಐ ಉಮೇಶ್ ಎಂಬುವವರಿಗೆ ನಡೆದ ಘಟನೆಯನ್ನು ವಿವರಿಸಿದೆವು. ಆದರೆ ಅವರು ನಮಗೆ ಸಹಾಯ ಮಾಡುವ ಆಸಕ್ತಿ ತೋರಲಿಲ್ಲ. ಇಲಾಖೆಯ ಮೇಲಾಧಿಕಾರಿಗಳ ಜತೆ ಮಾತನಾಡಬೇಕು ಎಂದ ಅವರು, ಕನಿಷ್ಠ ಪಕ್ಷ ಏನಾಯಿತು ಎಂದು ಕೇಳಿ ತಿಳಿದುಕೊಳ್ಳುವ ಸೌಜನ್ಯವನ್ನೂ ತೋರಲಿಲ್ಲ. ರೆಸ್ಟೊರೆಂಟ್‌ನ ಮುಂದೆ ಕಾರ್‌ನಲ್ಲಿ ಮೂಸಂಬಿ ಜ್ಯೂಸ್ ಕುಡಿಯುತ್ತ ಕುಳಿತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ನಂತರ ನಾನು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲು ನನಗೀಗ ಭಯವಾಗುತ್ತಿದೆ. ನನಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟ ನಗರದಲ್ಲಿ ಇಂತಹ ಕೆಟ್ಟ ಅನುಭವ ಆಗಿದ್ದು ಇದೇ ಮೊದಲು. ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬಗಳು ಬೆಂಗಳೂರಿನಲ್ಲಿ ಇಂತಹ ಕೆಟ್ಟ ಅನುಭವಕ್ಕೆ ಒಳಗಾಗಬಾರದು ಎಂದು ಇದನ್ನು ನಾನು ಪೋಸ್ಟ್ ಮಾಡುತ್ತಿದ್ದೇನೆ.
ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ! ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು.
ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ?
ಹಾಗಿದ್ದರೆ ನಾವು ನಮ್ಮ ಊರಿನಲ್ಲಿ ಕನ್ನಡ ಮಾತನಾಡುವುದೇ ತಪ್ಪಾ?
ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿದ್ದೇವೆ?
ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ?
ಈ ಬಗ್ಗೆ ತಕ್ಷಣ ಪೊಳಿಸರು ತನಿಖೆ ನಡೆಸಬೇಕಾಗಿದೆ. ಪ್ರಚಾರಕ್ಕಾಗಿ ಇಂತಹ ಆರೋಪ ಮಾಡಿದ್ದರೆ, ಹರ್ಷಿಕಾ ಅವರ ಮೇಲೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ.
