ಬೆಂಗಳೂರು, ಡಿ.15 : ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ವರ್ಷಗಳಿಂದ ಪ್ರಶ್ನಾರ್ಥಕವಾಗಿರುವ ಇತರ ಅನುಮಾನಾಸ್ಪದ ಸಾವು ಪ್ರಕರಣಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, “ ಕೊಂದವರು ಯಾರು?” ಆಂದೋಲನದಿಂದ ಮಹಿಳೆಯರ ಜಾಥಾ ಹಮ್ಮಿಕೊಳ್ಳಲಾಗಿದೆ. ಬೆಳ್ತಂಗಡಿಯ ಮಾರಿಗುಡಿಯಿಂದ ಬೆಳಗ್ಗೆ ೧೦.೩೦ ಗಂಟೆಗೆ ಮೌನ ಮೆರವಣಿಗೆ ಹೊರಡಲಿದೆ. ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ಸಮಾವೇಶ ಜರುಗಲಿದೆ. ತಾಲ್ಲೂಕಿನಲ್ಲಿ ಭಾರಿ ಪ್ರತಿಭಟನೆ ನಡೆಸಲು ನಾಗರಿಕ ಸಂಘಟನೆಗಳು ಹಾಗೂ ನ್ಯಾಯಪರ ಹೋರಾಟಗಾರರು ಕರೆ ನೀಡಿದ್ದಾರೆ.
ಈ ಪ್ರತಿಭಟನೆಯ ಉದ್ದೇಶ ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಹಲವು ಸಾವು ಪ್ರಕರಣಗಳ ಕುರಿತು ಇನ್ನೂ ಉತ್ತರ ಸಿಗದ ಪ್ರಶ್ನೆಗಳತ್ತ ಸರ್ಕಾರ, ತನಿಖಾ ಸಂಸ್ಥೆಗಳು ಹಾಗೂ ಸಮಾಜದ ಗಮನ ಸೆಳೆಯುವುದಾಗಿದೆ. ವಿಶೇಷವಾಗಿ ೧೯೮೦ರ ದಶಕದಿಂದ ಇಲ್ಲಿಯವರೆಗೆ ಧರ್ಮಸ್ಥಳದಲ್ಲಿ ಕಾಣೆಯಾದವರು, ವಿಳಾಸ ಇಲ್ಲದಂತೆ ಸತ್ತುಹೋದವರು, ಕೊಲೆಯಾದವರು, ಅತ್ಯಾಚಾರಕ್ಕೆ ಈಡಾಗಿ ನೇತ್ರಾವತಿಯಲ್ಲಿ ತೇಲಿಹೋದವರ ಪ್ರಕರಣಗಳಲ್ಲಿ ಸತ್ಯ ಹೊರಬರಬೇಕು, ನಿಜವಾದ ಆರೋಪಿಗಳು ಯಾರು ಎಂಬುದು ಬಹಿರಂಗವಾಗಬೇಕು ಎಂಬುದು ಪ್ರತಿಭಟಕರ ಪ್ರಮುಖ ಬೇಡಿಕೆಯಾಗಿದೆ.
ಪ್ರತಿಭಟನೆಯ ಶೀರ್ಷಿಕೆಯಾದ “ಕೊಂದವರು ಯಾರು?” ಎಂಬುದು, ಪ್ರಕರಣಗಳಲ್ಲಿ ಸತ್ಯವನ್ನು ಮುಚ್ಚಿಹಾಕಿದವರು, ಸಾಕ್ಷ್ಯಗಳನ್ನು ಮರೆಮಾಡಿದವರು ಅಥವಾ ತನಿಖೆಯನ್ನು ತಪ್ಪು ದಾರಿಗೆ ಕೊಂಡೊಯ್ದವರು ಯಾರು ಎಂಬುದರ ಬಗ್ಗೆ ಉತ್ತರ ಕೇಳುವ ಸಂಕೇತಾತ್ಮಕ ಪ್ರಶ್ನೆಯಾಗಿದೆ. ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆ ಉಳಿಯಬೇಕಾದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕೆಂದು ಪ್ರತಿಭಟಕರು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಕೆಲವು ಸಾವು ಪ್ರಕರಣಗಳು ಇನ್ನೂ ಸಂಶಯದ ನೆರಳಲ್ಲಿವೆ. ಈ ಪ್ರಕರಣಗಳಲ್ಲಿ ಸಮರ್ಪಕ ತನಿಖೆ ನಡೆಯಲಿಲ್ಲ, ಸತ್ಯ ಬಹಿರಂಗವಾಗಿಲ್ಲ ಎಂಬ ಅಸಮಾಧಾನವು ಸಾರ್ವಜನಿಕ ವಲಯದಲ್ಲಿ ದೀರ್ಘಕಾಲದಿಂದಲೇ ಇದೆ. ಸೌಜನ್ಯ ಪ್ರಕರಣವು ಈ ಎಲ್ಲ ಅನುಮಾನಾಸ್ಪದ ಸಾವುಗಳ ಸಂಕೇತವಾಗಿ ಪರಿಣಮಿಸಿದೆ.
ಸೌಜನ್ಯ ಪ್ರಕರಣದ ಪುನಃ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ, ಧರ್ಮಸ್ಥಳದ ಇತರ ಅನುಮಾನಾಸ್ಪದ ಸಾವು ಪ್ರಕರಣಗಳ ಸಮಗ್ರ ಮರುಪರಿಶೀಲನೆ, ತಪ್ಪಿತಸ್ಥರು ಯಾರೇ ಆಗಿರಲಿ, ಕಾನೂನು ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತ ಕುಟುಂಬಳಿಗೆ ನ್ಯಾಯ ಮತ್ತು ಗೌರವ ಸಿಗಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.
ಈ ಪ್ರತಿಭಟನೆಯು ರಾಜಕೀಯ ಹೋರಾಟವಲ್ಲ, ನ್ಯಾಯಕ್ಕಾಗಿ ನಡೆಯುವ ನಾಗರಿಕ ಹೋರಾಟ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. “ನ್ಯಾಯ ಸಿಗುವವರೆಗೂ ನಮ್ಮ ಪ್ರಶ್ನೆಗಳು ನಿಲ್ಲುವುದಿಲ್ಲ” ಎಂಬ ಸಂದೇಶವನ್ನು ಸರ್ಕಾರಕ್ಕೆ ತಲುಪಿಸುವುದು ಈ ಹೋರಾಟದ ಮುಖ್ಯ ಉದ್ದೇಶವಾಗಿದೆ. ಬೆಳ್ತಂಗಡಿಯಲ್ಲಿ ನಡೆಯಲಿರುವ ಈ ಪ್ರತಿಭಟನೆ, ಧರ್ಮಸ್ಥಳಕ್ಕೆ ಸಂಬಂಧಿಸಿದ ನ್ಯಾಯ ಹೋರಾಟದಲ್ಲಿ ಮತ್ತೊಂದು ಮಹತ್ವದ ಹಂತವಾಗಿದ್ದು, ಇದರ ಮೇಲೆ ರಾಜ್ಯದ ಗಮನ ನೆಟ್ಟಿದೆ.




