ನಾನು ಸಹ ಮಂತ್ರಿ ಸ್ಥಾನದ ಆಕಾಂಕ್ಷಿ: ಮಂತ್ರಿಗಿರಿ ಆಸೆ ಬಿಚ್ಚಿಟ್ಟ ಶಾಸಕ ಡಾ ಅಜಯ್ ಸಿಂಗ್

MLA Ajay Singh: ಕಳೆದ ವರ್ಷ ಮಂಡಳಿಯು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾದ 652 ಕೋಟಿ ರೂ. ಮೊತ್ತದಲ್ಲಿ ಫಲಿತಾಂಶ‌ ಸುಧಾರಣೆ ನಿಟ್ಟಿನಲ್ಲಿ ಕೇವಲ 3 ಕೋಟಿ ರೂ. ಖರ್ಚು ಮಾಡಿದೆ. ಮುಂದಿನ‌ ದಿನದಲ್ಲಿ ಈ ಮೊತ್ತ ಹೆಚ್ಚಿಸಲಾಗುವುದು

ಕಲಬುರಗಿ: ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. 2018 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ ಎಂದು ಹೇಳುವ ಮೂಲಕ KKRDB ಅಧ್ಯಕ್ಷ ಹಾಗೂ ಜೇರ್ವಗಿ ಶಾಸಕ ಡಾ.ಅಜಯ್ ಸಿಂಗ್ ಮತ್ತೊಮ್ಮೆ ಮಂತ್ರಿಗಿರಿ ಆಸೆಯನ್ನ ಬಿಚ್ಚಿಟ್ಟಿದ್ದಾರೆ.‌

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ವಹಿಸಿಕೊಳ್ಳುತ್ತೇನೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ವರಿಷ್ಠರು ಕೆಲಸ ಮಾಡುವವರನ್ನ ಗುರುತಿಸುತ್ತಾರೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ KKRDB ಪ್ರಗತಿ ಪರಿಶೀಲನಾ ಸಭೆ :

ಇದೆ ವೇಳೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇದೇ ಜೂನ್ 14 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಸಿಂಗ್ ಹೇಳಿದರು.

ಪ್ರಸಕ್ತ 2024-25ನೇ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಮತ್ತು ಸದರಿ ಅನುದಾನ ಇದೇ ವರ್ಷದಲ್ಲಿ ಖರ್ಚು ಮಾಡುವ ಸಂಬಂಧ ಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಕ.ಕ ಭಾಗದ ಸಚಿವರನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ ಎಂದರು.

ಸಿ.ಎಂ. ಸಭೆ ನಂತರ ಇದೇ ಜೂನ್ 28ಕ್ಕೆ ಮಂಡಳಿ ಸಭೆ ನಡೆಸಲು ನಿರ್ಧರಿಸಿದ್ದು, 15 ದಿನದೊಳಗೆ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಪ್ರಸಕ್ತ ಸಾಲಿನ ಕೆಲಸಗಳು ಆರಂಭಿಸಲಾಗುವುದು ಎಂದರು.

ಕಳೆದ ವರ್ಷ ನಮ್ಮ ಸರ್ಕಾರ ಈ ಭಾಗಕ್ಕೆ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಿ 3 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಅದರಂತೆ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಮೂಲಸೌಕರ್ಯ ಕೆಲಸ ಭರದಿಂದ ಸಾಗಿದೆ. ಇದರೊಂದಿಗೆ ಪ್ರದೇಶದಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ ಎಂದರು.

ನೀಟ್ ಪರೀಕ್ಷೆ ಅಕ್ರಮದ ತನಿಖೆಗೆ ಒತ್ತಾಯ ;

ನೀಟ್ ಪರೀಕ್ಷೆ ಅವ್ಯವಹಾರ ಕುರಿತಂತೆ ಪ್ರತಿಕ್ರಿಯಿಸಿದ ಡಾ.ಅಜಯ್ ಸಿಂಗ್ ಅವರು ಲೋಕಸಭಾ ಚುನಾವಣಾ ಫಲಿತಾಂಶ ದಿನವೆ ಪರೀಕ್ಷೆ ರಿಸಲ್ಟ್ ಘೋಷಣೆ ಮಾಡಿದ್ದು, ಹಲವು ಅವಮಾನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಡೆ ಅವ್ಯವಹಾರ ಕೇಳಿ ಬರುತ್ತಿದ್ದು, ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ‌ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ‌ ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಒತ್ತು :

ಪ್ರದೇಶದಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಮಂಡಳಿ ಅತಿಥಿ ಶಿಕ್ಷಕರನ್ನು ನೇಮಿಸಬಹುದು. ಪೂರ್ಣ ಪ್ರಮಾಣದಲ್ಲಿ ಶಿಕ್ಣಕರ ನೇಮಕ ಸರ್ಕಾರದ ಹಂತದಲ್ಲಿಯೇ ನಡೆಯಬೇಕಾಗುತ್ತದೆ. ಮುಖ್ಯಮಂತ್ರಿಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಒತ್ತಾಯ ಮಾಡಲಾಗುವುದು. ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅನುಭವಿ ಶಿಕ್ಷಣ ತಜ್ಞರ ಸಮಿತಿ ರಚಿಸಿ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಮಂಡಳಿಯು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾದ 652 ಕೋಟಿ ರೂ. ಮೊತ್ತದಲ್ಲಿ ಫಲಿತಾಂಶ‌ ಸುಧಾರಣೆ ನಿಟ್ಟಿನಲ್ಲಿ ಕೇವಲ 3 ಕೋಟಿ ರೂ. ಖರ್ಚು ಮಾಡಿದೆ. ಮುಂದಿನ‌ ದಿನದಲ್ಲಿ ಈ ಮೊತ್ತ ಹೆಚ್ಚಿಸಲಾಗುವುದು ಎಂದರು.

371ಜೆ ಮೀಸಲಾತಿ ವಿರೋಧಕ್ಕೆ ಖಂಡನೆ:

ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ದಶಕಗಳ ಹೋರಾಟ ಫಲವಾಗಿ 371(ಜೆ) ಮೀಸಲಾತಿ ದೊರಕಿದೆ. ಇತ್ತೇಚೆಗೆ ಬೆಂಗಳೂರಿನಲ್ಲಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಖಂಡಿಸುತ್ತೇನೆ ಎಂದ ಅವರು, ಈ ಭಾಗಕ್ಕೆ ಸಂವಿಧಾನ ಬದ್ಧ ಸಿಗಬೇಕಾದ ಸವಲತ್ತು ದೊರಕಿಸಲು ಮತ್ತು ಮೀಸಲಾತಿ ರಕ್ಷಣೆ‌ಗೆ ತಾವು ಬದ್ಧರಾಗಿದ್ದೇವೆ. ಯಾವುದೇ ಹಂತದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದರು.

Author

Leave a Reply

Your email address will not be published. Required fields are marked *