ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: 8 ಹೊಸ ಮುಖಗಳಿಗೆ ಅವಕಾಶ, ಹಲವು ಹಿರಿಯರಿಗೆ ಕೊಕ್ | ಸಂಪೂರ್ಣ ರಾಜಕೀಯ ವಿಶ್ಲೇಷಣೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ, 8 ಹೊಸ ಮುಖಗಳಿಗೆ ಅವಕಾಶ, ಹಲವು ಹಿರಿಯರಿಗೆ ಕೊಕ್, ಮಂಕಾಳ್ ವೈದ್ಯ ಪ್ರಕರಣ, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಪಾತ್ರದ ಸಮಗ್ರ ರಾಜಕೀಯ ವಿಶ್ಲೇಷಣೆ.

ಸಿದ್ಧರಾಮಯ್ಯ ಸಂಪುಟದಲ್ಲಿದ್ದ ಹಲವರಿಗೆ ಕೊಕ್

ಅಂತೂ ಇಂತೂ ಹಲವು ದಿನಗಳ ಕಸರತ್ತಿನ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆಯಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿದ್ದ 34 ಸದಸ್ಯರ ಪೈಕಿ ಖಾಲಿ ಇದ್ದ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭವು ಸೋಮವಾರ ಸಂಜೆ 4.05 ಗಂಟೆಗೆ ವಿಧಾನಸೌಧ ಆವರಣದ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆಯಲಿದೆ.

ಮಂಕಾಳ್ ವೈದ್ಯ ಬದಲಿಗೆ ಎಸ್.ಎಸ್. ಮಲ್ಲಿಕಾರ್ಜುನ: ಕೊನೆಯ ಕ್ಷಣದ ನಾಟಕ

ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಯನ್ನು ಇಂದು ಬೆಳಿಗ್ಗೆ ಕಳುಹಿಸಿಕೊಟ್ಟಿತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಪಟ್ಟಿಯಲ್ಲಿ ಹೆಸರಿದ್ದ ಮಂಕಾಳ್ ವೈದ್ಯ ಅವರನ್ನು ಕೈಬಿಟ್ಟು ದಾವಣಗೆರೆಯ ಎಸ್.ಎಸ್ ಮಲ್ಲಿಕಾರ್ಜನ ಅವರನ್ನು ಪಟ್ಟಿಗೆ ಸೇರಿಸಲಾಯಿತು. ಎಐಸಿಸಿ ಪಟ್ಟಿಯಲ್ಲಿ ಹೆಸರಿದ್ದುದನ್ನು ಸಂಭ್ರಮಿಸುತ್ತಿದ್ದ ಮಂಕಾಳ್ ವೈದ್ಯ ಆಘಾತಗೊಂಡು ಮುಖ್ಯಮಂತ್ರಿಗಳ ನಿವಾಸಕ್ಕೆ ಧಾವಿಸಿದರು. ವೈದ್ಯ ಅವರನ್ನು ಸಮಾಧಾನ ಪಡಿಸಿದ ಮುಖ್ಯಮಂತ್ರಿಗಳು ಇದು ಹೈಕಮಾಂಡ್ ತೀರ್ಮಾನ ಎಂದರು.

ಈ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದಲ್ಲಿದ್ದ ಹಲವು ಹಿರಿಯರನ್ನು ಈ ಬಾರಿ ಕೈಬಿಡಲಾಗಿದೆ. ಸಿದ್ಧರಾಮಯ್ಯನವರ ಆಪ್ತ ಹೆಚ್.ಸಿ ಮಹದೇವಪ್ಪ, ವೆಂಕಟೇಶ್, ಎಚ್.ಕೆ ಪಾಟೀಲ್, ದಿನೇಶ್ ಗುಂಡೂರಾವ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಕೊನೆಯ ಕ್ಷಣದವರೆಗೂ ನಡೆದ ಸಚಿವ ಸ್ಥಾನಕ್ಕಾಗಿ ಕಸರತ್ತು

ಈ ಸಚಿವ ಸಂಪುಟದ ವಿಸ್ತರಣೆಯ ಕಸರತ್ತು ಸುಲಭವಾಗಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಅವರಿಂದ ಪ್ರತ್ಯೇಕ ಪಟ್ಟಿಯನ್ನು ತರಿಸಿಕೊಂಡಿತ್ತು. ಇದರ ಜೊತೆಗೆ ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲವು ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರು. ಈ ಮೂರು ಪಟ್ಟಿಯಲ್ಲಿದ್ದ ಶಾಸಕರ ಹೆಸರುಗಳನ್ನು ಅಂತಿಮಗೊಳಿಸುವುದು ಕಷ್ಟವಾಗಲಿಲ್ಲ. ಆದರೆ ಕೆಲವು ಹೆಸರುಗಳು ತೊಡಕನ್ನುಂಟುಮಾಡಿದ್ದವು. ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್ ಹಲವು ಸುತ್ತಿನ ಮಾತುಕತೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲು ಸತತ ಸಭೆಗಳನ್ನು ನಡೆಸಿದರು.

ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಸಮತೋಲನದ ರಾಜಕೀಯ

ಈ ನಡುವೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮದೇ ಆದ ಮೂಲದಿಂದ ಸಿದ್ಧರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಿದ ಸಚಿವರ ಕಾರ್ಯಕ್ಷಮತಾ ವರದಿಯನ್ನು ತರಿಸಿಕೊಂಡಿದ್ದರು. ಹಾಗೆ ಆದಷ್ಟು ಯುವಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂಬ ಸೂಚನೆಯನ್ನು ಕೂಡ ಅವರು ನೀಡಿದ್ದರು. ಆದರೆ ಸಿದ್ಧರಾಮಯ್ಯ, ಹಳಬರು ಮತ್ತು ಹೊಸ ಮುಖಗಳ ಸಮತೋಲನವನ್ನು ಕಾಯ್ದುಕೊಂಡು ಬರಬೇಕು, ಹಿರಿಯರ ಅನುಭವ ಕೂಡ ಅಗತ್ಯ ಇದೆ ಎಂದು ವಾದಿಸಿದ್ದರು. ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹೊಸ ಮುಖಗಳ ಸಂಪುಟವನ್ನು ತಮಗೆ ನೀಡುವಂತೆ ಮನವಿ ಸಲ್ಲಿಸಿದ್ದರು.

ಹೊಸ ಮುಖಗಳಿಗೆ ಅವಕಾಶ, ಹಿರಿಯರಿಗೆ ನಿರಾಸೆ

ಇದನ್ನೆಲ್ಲ ಗಮನಿಸಿದ ಮೇಲೆ ಜಿಲ್ಲಾವಾರು, ಜಾತಿವಾರು, ಸಮುದಾಯವಾರು, ಪ್ರಾತಿನಿಧ್ಯವನ್ನು ಪರಿಗಣಿಸಿ ಅಂತಿಮಪಟ್ಟಿಯನ್ನು ಸಿದ್ಧಪಡಿಸಲಾಯಿತು. ಈ ಪಟ್ಟಿಯನ್ನು ಗಮನಿಸಿದರೆ, ಮಹಾನ್ ಕ್ರಾಂತಿಕಾರಿ ಬದಲಾವಣೆ ಆದಂತೆ ಕಾಣುವುದಿಲ್ಲ. ಹೊಸ ಮುಖಗಳಿಗೆ ಅವಕಾಶ ನೀಡಿದರೂ ಕೆಲವು ಹಳಬರು ಮಂತ್ರಿಸ್ಥಾನದಿಂದ ವಂಚಿತರಾಗಿದ್ದಾರೆ. ಮಂತ್ರಿ ಸ್ಥಾನವನ್ನು ತಪ್ಪಿಸಿಕೊಂಡ ಶಾಸಕರು ಮತ್ತು ಅವರ ಬೆಂಬಲಿಗರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಅತೃಪ್ತ ಶಾಸಕರು ಕಾಂಗ್ರೆಸ್‌ಗೆ ತಲೆನೋವಾಗುವರೇ?

ಈ ಬಾರಿಯೂ ಸಚಿವ ಸ್ಥಾನ ತಪ್ಪಿಸಿಕೊಂಡ ಮೈಸೂರಿನ ತನ್ವೀರ್ ಶೇಠ್ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ತಮ್ಮ ಪಕ್ಷ ನಿಷ್ಠೆಯನ್ನು ಪರಿಗಣಿಸದೇ ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಒಟ್ಟಾರೆಯಾಗಿ ಈ ಸಂಪುಟ ವಿಸ್ತರಣೆ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಇರುವ ಎಲ್ಲ 34 ಸ್ಥಾನಗಳು ತುಂಬಿರುವುದರಿಂದ ಅತೃಪ್ತರನ್ನು ಸಮಾಧಾನಪಡಿಸುವುದು ಡಿಕೆ ಶಿವಕುಮಾರ್ ಅವರಿಗೆ ಸುಲಭವಲ್ಲ. ಸಚಿವ ಸ್ಥಾನ ತಪ್ಪಿಸಿಕೊಂಡವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಅಧಿಕಾರ ಕೇಂದ್ರವನ್ನು ಇನ್ನಷ್ಟು ಬಲಪಡಿಸಬಹುದು.

ಬಿಜೆಪಿ ನಿರೀಕ್ಷಿಸುತ್ತಿರುವ ರಾಜಕೀಯ ಲಾಭವೇನು?

ಇತ್ತೀಚಿಗೆ ಬಿಜೆಪಿಯ ಕೆಲವು ನಾಯಕರು ಸಂಪುಟ ವಿಸ್ತರಣೆಯ ನಂತರ ಹಲವಾರು ಶಾಸಕರುಗಳು ಕಾಂಗ್ರೆಸ್ ನ್ನು ತೊರೆದು ತಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗಿದ್ದರೆ, ಈ ಸಂಪುಟ ವಿಸ್ತರಣೆ ಕಾಂಗ್ರೆಸ್ ನಲ್ಲಿ ಇಂತಹ ಬೆಳವಣಿಗೆಗೆ ಕಾರಣವಾಗುತ್ತಾ? ಕಾದು ನೋಡಬೇಕು.

ಬೋನಸ್: ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಹೊಸ ನಾಯಕತ್ವ

ಪೊನ್ನಣ್ಣ, ಉಮಾಶ್ರೀಗೆ ಲಕ್

ಆದರೆ ಈ ಬೆಳವಣಿಗೆ ಕೇವಲ ಸಚಿವ ಸಂಪುಟ ವಿಸ್ತರಣೆಗೆ ಸೀಮಿತವಾಗಿಲ್ಲ. ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿಯೂ ನಾಯಕತ್ವ ಬದಲಾವಣೆಗಳು ನಡೆಯುತ್ತಿವೆ. ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಉಪಸಭಾಧ್ಯಕ್ಷ (Deputy Speaker) ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ. ಮತ್ತೊಂದೆಡೆ, ವಿಧಾನಪರಿಷತ್ತಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್ ಅವರನ್ನು ಸಭಾಪತಿಯಾಗಿ ನೇಮಿಸಲಾಗುತ್ತಿದ್ದು, ನಟಿ,ರಾಜಕಾರಣಿಯಾಗಿರುವ ಉಮಾಶ್ರೀ ಅವರು ಉಪಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Author

  • ಶೀಲಾ ಭಟ್ ಅವರಿಗೆ ಪತ್ರಿಕೋದ್ಯಮದಲ್ಲಿ ೨೨ ವರ್ಷಗಳ ಅನುಭವವಿದೆ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕಿ, ವರದಿಗಾರ್ತಿ , ಕಾರ್ಯಕ್ರಮ ನಿರ್ದೇಶನ ಮತ್ತು ಕಾರ್ಯಕ್ರಮ ನಿರ್ವಹಣೆಯ ಕೆಲಸ ಮಾಡಿದ್ದಾರೆ. ಸಮಾಜ, ರಾಜಕೀಯ, ವೈದ್ಯಕೀಯ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಅವರು, ನಿರಂತರ ಕಲಿಕೆಯನ್ನು ಬದುಕಿನ ಭಾಗವಾಗಿ ನೋಡುತ್ತಾರೆ.

error: