ರಾಮನಗರ : ರಾಜ್ಯದಲ್ಲಿ ಕೈಗಾರಿಗಳನ್ನು ಸ್ಥಾಪನೆ ಮಾಡುತ್ತೇವೆ ಎಂದು ಉದ್ಯಮಿದಾರರು ಬಂದರೆ, ಇಲ್ಲಿ ನಮಗೂ ಪಾಲು ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ಪ್ರಚಾರ ಮಾಡುವ ವೇಳೆ ಕಲ್ಲಾಪುರ ಗ್ರಾಮದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಕೈಗಾರಿಕೆ ಸ್ಥಾಪಿಸಲು ಬಂದರೆ ಜಮೀನು ಕೊಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ವರದಿಗಾರರು ಗಮನ ಸೆಳೆದಾಗ, ರಾಜ್ಯದಲ್ಲಿ ಕಾರ್ಖಾನೆಗಳ ಸ್ಥಾಪನೆ ಆಶಾದಾಯಕವಾಗಿಲ್ಲ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ. ಇವರಿಗೆ ಕೈಗಾರಿಕೆಗಳ ಬಗ್ಗೆ ಆಸಕ್ತಿ ಇದ್ದರೆ ಟೊಯೋಟಾ ಕಂಪನಿ ಮಹಾರಾಷ್ಟ್ರಕ್ಕೆ ಯಾಕೆ ಹೋಯಿತು? 5,000 ಕೋಟಿ ನೇರ ಹೂಡಿಕೆ ಅನ್ಯ ರಾಜ್ಯದ ಪಾಲಾಯಿತು. ಇವರು ಎಲ್ಲರ ಬಳಿ ಶೇರ್ ಕೇಳಿದರೆ, ಯಾವ ಕಂಪನಿ ತಾನೇ ಕರ್ನಾಟಕಕ್ಕೆ ಬರುತ್ತದೆ? ಎಂದು ಅವರು ಆರೋಪಿಸಿದರು.

ಯಾರು ಪಾಲು ಕೇಳಿದ್ದಾರೆ, ಮುಂದೆ ಚರ್ಚೆ ಮಾಡ್ತೇನೆ ಎಂದ ಕೇಂದ್ರ ಸಚಿವರು; ಕಾಂಗ್ರೆಸ್ ಸರ್ಕಾರ ರಾಜ್ಯ ಅಭಿವೃದ್ಧಿ ಮಾಡುತ್ತದೆ ಎನ್ನುವುದು ಬರೀ ಕನಸು ಅಷ್ಟೇ. ಕೈಗಾರಿಕೆಗಳ ಬಗ್ಗೆ ಸರ್ಕಾರದ ನಡವಳಿಕೆ ಸರಿ ಇಲ್ಲ. ಅಂತಿಮವಾಗಿ ಬಿಜೆಪಿ -ಜೆಡಿಎಸ್ ಆಡಳಿತವೇ ಇದಕ್ಕೆ ಪರಿಹಾರ ತರಬೇಕು ಅನ್ನೊಂದು ನನ್ನ ಅಭಿಪ್ರಾಯ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ದೇವೇಗೌಡರ ಮೇಕೆದಾಟು ಹೇಳಿಕೆ ಬಗ್ಗೆ ಪ್ರತಿಕ್ರಿಯೆ :

ಮೇಕೆದಾಟು ನಿರ್ಮಾಣ ಕುರಿತು ದೇವೇಗೌಡರು ನೀಡಿರುವ ಹೇಳಿಕೆ‌ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ನಾನು ಸಚಿವನಾಗಿ ನಾಲ್ಕೂವರೆ ತಿಂಗಳು ಆಗಿದೆ ಅಷ್ಟೇ. ನಾನು ಸುಮ್ಮನೆ ಕೂತಿಲ್ಲ. ಕೇಂದ್ರದಲ್ಲಿ ಮೂರನೇ ಬಾರಿ ಮೋದಿಯವರು ಪ್ರಧಾನಿಯಾಗಿದ್ದಾರೆ. ಅವರು ದೀರ್ಘಕಾಲೀನ ದೂರದೃಷ್ಟಿ ಇರಿಸಿಕೊಂಡಿದ್ದಾರೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದರು.

ದೇವೇಗೌಡರ ಹೋರಾಟ ನಿರಂತರವಾಗಿದೆ. ಕಾವೇರಿಗಾಗಿ ಅವರು ನಡೆಸಿದ ಹೋರಾಟವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ. ಅವರ ಜೀವನ ಕಳೆದಿರೋದು ರಾಜ್ಯದ ನೀರಾವರಿ ಯೋಜನೆಗಳಿಗೆ ಅಷ್ಟೇ ಅಲ್ಲ,ಪ್ರಧಾನಿಯಾಗಿ ನರ್ಮದಾ ನದಿ ನೀರು ಹಂಚಿಕೆ, ಭಾರತ ಬಾಂಗ್ಲಾದೇಶದ ನಡುವೆ ಗಂಗಾ ನೀರು ಹಂಚಿಕೆ ವಿವಾದ ಪರಿಷ್ಕಾರ ಸೇರಿ ಅನೇಕ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದ್ದಾರೆ. ದೇವೇಗೌಡರು ಅವರ ಜೀವನ ಮುಡಿಪಾಗಿಟ್ಟವರು ಎಂದರು ಕೇಂದ್ರ ಸಚಿವರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸೌಜನ್ಯ ಇಲ್ಲ :

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸೌಜನ್ಯ ಇಲ್ಲ. ಪ್ರತಿನಿತ್ಯ ಕೇಂದ್ರ ಸರ್ಕಾರ ಜತೆ ಕಾಲು ಕೆರೆದು ಜಗಳ ಮಾಡುತ್ತಿದೆ. ಹಾಗೆ ಮಾಡಿದರೆ ಅಭಿವೃದ್ಧಿ ಸಾಧ್ಯವೇ? ಕೇಂದ್ರ ಸರ್ಕಾರದಿಂದ ನಾವು ಎಲ್ಲ ರೀತಿಯ ಸಹಕಾರ ನೀಡಲು ತಯಾರಿದ್ದೇವೆ. ಆದರೆ, ನಮ್ಮ ಜತೆ ಹೊಂದಿಕೊಂಡು ಕೆಲಸ ಮಾಡಲು ರಾಜ್ಯ ಸರ್ಕಾರ ತಯಾರಿಲ್ಲ. ಪ್ರತಿಯೊಂದಕ್ಕೂ ರಾಜಕೀಯ ತಂದು ರಾಜ್ಯ ಪ್ರಗತಿಯನ್ನು ಹಾಳು ಮಾಡುತ್ತಿದೆ ಎಂದು ಅವರು ಹರಿಹಾಯ್ದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾ ನಾಯಕ್ ಸೇರಿದಂತೆ ಅನೇಕ ನಾಯಕರು ಸಚಿವರ ಜತೆಯಲ್ಲಿ ಇದ್ದರು.

Author

Leave a Reply

Your email address will not be published. Required fields are marked *